ನವದೆಹಲಿ: ಬಾಂಗ್ಲಾದೇಶ ವಿರುದ್ಧದ ಏಕ ದಿನ ಸರಣಿಯಲ್ಲಿ ಟೀಮ್ ಇಂಡಿಯಾ ಸೋಲು ಕಂಡಿದೆ. ಈ ಸೋಲಿನ ಪರಾಮರ್ಶೆ ನಡೆಸುವ ಸಲುವಾಗಿ ಬಿಸಿಸಿಐ (BCCI MEETING) ದಿಢೀರ್ ಸಭೆ ನಡೆಸಲು ಮುಂದಾಗಿದೆ ಎಂದು ವರದಿಯಾಗಿದೆ.
ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಭಾರತ ಆಡಿದ ಎರಡು ಪಂದ್ಯದಲ್ಲಿಯೂ ತೀರ ಕಳಪೆ ಮಟ್ಟದ ಪ್ರದರ್ಶನ ತೋರಿದೆ. ಜತೆಗೆ ಇತ್ತೀಚೆಗೆ ಆಡಿದ ಕೆಲವು ಸರಣಿಯಲ್ಲಿಯೂ ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ಎಡವಿತ್ತು. ಈ ಎಲ್ಲ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಚರ್ಚೆ ನಡೆಸಲು ಬಿಸಿಸಿಐ ಸಭೆ ಈ ಕರೆದಿದೆ ಎಂದು ತಿಳಿದುಬಂದಿದೆ.
ಬಿಸಿಸಿಐ ಕರೆದಿರುವ ಸಭೆಯಲ್ಲಿ ಮುಖ್ಯವಾಗಿ ಸ್ಟಾರ್ ಆಟಗಾರರ ಉಪಸ್ಥಿತಿಯಲ್ಲಿ, ಬಾಂಗ್ಲಾ ವಿರುದ್ಧ ಸೋಲಿಗೆ ಏನು ಕಾರಣ, ಆಟಗಾರರೆಲ್ಲ ಪದೇ ಪದೆ ಗಾಯಕ್ಕೀಡಾಗುತ್ತಿರುವ ವಿಚಾರದ ಚರ್ಚೆ ನಡೆಸುವ ಸಾಧ್ಯತೆ ಇದೆ. ಜತೆಗೆ ಟಿ20 ವಿಶ್ವ ಕಪ್ ಸೋಲಿನ ವಿಮರ್ಶೆ, ನಾಯಕತ್ವದ ಬದಲಾವಣೆ, ಪ್ರಸ್ತುತ ಕೋಚ್ಗಳ ಬಗ್ಗೆ ಪರಾಮರ್ಶೆ, ಆಟಗಾರರ ಆವರ್ತನಾ ಪದ್ಧತಿ, ನೂತನ ಆಯ್ಕೆ ಸಮಿತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಈಗಾಗಲೇ ಟಿ20 ಸೋಲಿನ ಬಳಿಕ ಕೆಲವು ಮೇಜರ್ ಸರ್ಜರಿ ಮಾಡಿರುವ ಬಿಸಿಸಿಐ ಚೇತನ್ ಶರ್ಮಾ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಸಂಪೂರ್ಣವಾಗಿ ಬರ್ಖಾಸ್ತು ಮಾಡಿತ್ತು. ಇದರ ಬೆನ್ನಲ್ಲೇ ತಂಡದ ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ಅವರ ಒಪ್ಪಂದವನ್ನು ನವೀಕರಿಸದೇ ಇರಲು ತೀರ್ಮಾನಿಸಿತ್ತು. ಇದೀಗ ಬಾಂಗ್ಲಾ ವಿರುದ್ಧದ ಸೋಲಿನ ಬಳಿಕ ತಂಡದಲ್ಲಿ ಬಿಸಿಸಿಐ ಕೆಲ ಸರ್ಜರಿ ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ | IND VS BAN | ರೋಹಿತ್ ಶರ್ಮಾ ಬ್ಯಾಟಿಂಗ್ ಸಾಹಸಕ್ಕೆ ಕೋಚ್ ರಾಹುಲ್ ದ್ರಾವಿಡ್ ಮೆಚ್ಚುಗೆ