ಮುಂಬಯಿ: ಕಳೆದ ಕೆಲ ವರ್ಷಗಳಿಂದ ಐಸಿಸಿ ಟೂರ್ನಿಗಳಲ್ಲಿ ಮತ್ತು ಟಿ20 ವಿಶ್ವ ಕಪ್ನಲ್ಲಿ ಟೀಮ್ ಇಂಡಿಯಾ ಸೋಲು ಕಂಡ ಬಗ್ಗೆ ಪರಾಮರ್ಶಿಸುವ ಸಲುವಾಗಿ ಬಿಸಿಸಿಐ(BCCI Meeting) ಮಹತ್ವದ ಸಭೆ ಕರೆದಿದೆ. ಈ ಮೂಲಕ ವರ್ಷಾರಂಭದಲ್ಲೇ ಬಿಸಿಸಿಐ ಮೇಜರ್ ಸರ್ಜರಿ ನಡೆಸಲು ಮುಂದಾಗಿದೆ. ಇದರೊಂದಿಗೆ ಟೀಮ್ ಇಂಡಿಯಾದಲ್ಲಿ ಹೊಸ ಯುಗ ಆರಂಭವಾಗುವ ಸೂಚನೆ ಲಭಿಸಿದೆ.
ಭಾನುವಾರ(ಜನವರಿ 1) ಮುಂಬಯಿಯಲ್ಲಿ ಸಭೆ ನಡೆಯಲಿದೆ. ಅದರಂತೆ ಈ ಸಭೆಯಲ್ಲಿ ಪಾಲ್ಗೊಳ್ಳಲು ರೋಹಿತ್ ಶರ್ಮ, ರಾಹುಲ್ ದ್ರಾವಿಡ್, ವಿವಿಎಸ್ ಲಕ್ಷ್ಮಣ್ ಮತ್ತು ಚೇತನ್ ಶರ್ಮಾಗೆ ಬಿಸಿಸಿಐ ಸೂಚನೆ ನೀಡಿದೆ. ಸಭೆಯಲ್ಲಿ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಅಧ್ಯಕ್ಷ ರೋಜರ್ ಬಿನ್ನಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.
ಶ್ರೀಲಂಕಾ ವಿರುದ್ಧದ ಸರಣಿಗೂ ಮುನ್ನ ಬಿಸಿಸಿಐ ಈ ಸಭೆ ಕರೆದಿರುವುದು ಕುತೂಹಲ ಮೂಡಿಸಿದೆ.ಲಂಕಾ ವಿರುದ್ಧದ ಸರಣಿ ಜನವರಿ 3ರಿಂದ ಆರಂಭವಾಗಲಿದೆ. ಇನ್ನು ಈ ಸಭೆಯಲ್ಲಿ ಟಿ20 ಸೋಲಿಗೆ ಕಾರಣ ಮತ್ತು ನಾಯಕತ್ವದ ಬದಲಾವಣೆ ಜತೆಗೆ ಟಿ20 ಮಾದರಿಗೆ ನೂತನ ಕೋಚ್ ನೇಮಕ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ.
ಮೂಲಗಳ ಪ್ರಕಾರ ಟೀಮ್ ಇಂಡಿಯಾದ ಟಿ20 ಕ್ರಿಕೆಟ್ಗೆ ವಿವಿಎಸ್ ಲಕ್ಷ್ಮಣ್ ಅವರನ್ನು ಕೋಚ್ ಆಗಿ ನೇಮಕ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಈಗಾಗಲೇ ಅವರು ದ್ರಾವಿಡ್ ಅನುಪಸ್ಥಿತಿಯಲ್ಲಿ ಹಲವು ಬಾರಿ ತಂಡದ ಕೋಚ್ ಆಗಿ ಕರ್ತವ್ಯ ನಿರ್ವಹಿಸಿ ಯಶಸ್ಸು ಕಂಡಿದ್ದಾರೆ. ಈ ನಿಟ್ಟಿನಲ್ಲಿ ಅವರನ್ನು ಸಭೆಯಲ್ಲಿ ಪಾಲ್ಗೊಳ್ಳಲು ಬಿಸಿಸಿಐ ಆಹ್ವಾನಿಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | BCCI | ಟೀಮ್ ಇಂಡಿಯಾ ಟಿ20 ತಂಡಕ್ಕೆ ವಿದೇಶಿ ಕೋಚ್? ದ್ರಾವಿಡ್ಗೆ ಗೇಟ್ ಪಾಸ್ ಸಾಧ್ಯತೆ!