ನವದೆಹಲಿ: ಟೀಮ್ ಇಂಡಿಯಾ ಮುಂದಿನ ತಿಂಗಳು ಟೆಸ್ಟ್ ಮತ್ತು ಏಕದಿನ ಸರಣಿಯನ್ನಾಡಲು ಬಾಂಗ್ಲದೇಶ ಪ್ರವಾಸ ಕೈಗೊಳ್ಳಲಿದೆ. ಇದಕ್ಕೂ ಮುನ್ನ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಕೋಚ್ ರಾಹುಲ್ ದ್ರಾವಿಡ್ ಜತೆ ದಿಢೀರ್ ಸಭೆ ನಡೆಸಲು ಬಿಸಿಸಿಐ(BCCI MEETING) ಮುಂದಾಗಿದೆ ಎಂದು ವರದಿಯಾಗಿದೆ.
ಬಿಸಿಸಿಐ ಕರೆದಿರುವ ಸಭೆಯಲ್ಲಿ ಟಿ20 ಸೋಲಿನ ವಿಮರ್ಶೆ, ನಾಯಕತ್ವದ ಬದಲಾವಣೆ, ಪ್ರಸ್ತುತ ಕೋಚ್ಗಳ ಬಗ್ಗೆ ಪರಾಮರ್ಶೆ, ಆಟಗಾರರ ಆವರ್ತನಾ ಪದ್ಧತಿ, ನೂತನ ಆಯ್ಕೆ ಸಮಿತಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ.
ಈಗಾಗಲೇ ಟಿ20 ಸೋಲಿನ ಬಳಿಕ ಕೆಲವು ಮೇಜರ್ ಸರ್ಜರಿ ಮಾಡಿರುವ ಬಿಸಿಸಿಐ ಚೇತನ್ ಶರ್ಮಾ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಸಂಪೂರ್ಣವಾಗಿ ಬರ್ಖಾಸ್ತು ಮಾಡಿತ್ತು. ಇದರ ಬೆನ್ನಲ್ಲೇ ತಂಡದ ಮೆಂಟಲ್ ಕಂಡೀಷನಿಂಗ್ ಕೋಚ್ ಪ್ಯಾಡಿ ಆಪ್ಟನ್ ಅವರ ಒಪ್ಪಂದವನ್ನು ನವೀಕರಿಸದೇ ಇರಲು ತೀರ್ಮಾನಿಸಿತ್ತು. ಇದೀಗ ಈ ಸಭೆಯಲ್ಲಿ ಬಿಸಿಸಿಐ ಮತ್ತಷ್ಟು ಸರ್ಜರಿ ಮಾಡುವ ಸಾಧ್ಯತೆ ಇದೆ.
ಟೀಮ್ ಇಂಡಿಯಾದಲ್ಲಿ ಭರವಸೆಯ ಆಟಗಾರರ ಸಂಖ್ಯೆ ಹೆಚ್ಚಾಗುತ್ತಿದೆ. ದೇಶಿಯ ಮಟ್ಟದಲ್ಲಿಯೂ ಅನೇಕ ಆಟಗಾರರು ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಆದರೂ ಇವರು ಟೀಮ್ ಇಂಡಿಯಾದಲ್ಲಿ ಅವಕಾಶ ವಂಚಿತರಾಗುತ್ತಿದ್ದಾರೆ. ಟಿ20 ವಿಶ್ವ ಕಪ್ ಮತ್ತು ಏಷ್ಯಾಕಪ್ನಲ್ಲಿ ಕೆಲವರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿರಿಸಿಕೊಂಡು ಬಿಸಿಸಿಐ ನೂತನ ಅಧ್ಯಕ್ಷ ರೋಜರ್ ಬಿನ್ನಿ ಈ ಸಭೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ | IND VS NZ | ಮಳೆಯ ಕಣ್ಣಾಮುಚ್ಚಾಲೆ ಆಟದ ನಡುವೆ ಭಾರತದ ಸರಣಿ ಸಮಬಲದ ಕನಸು ನನಸಾದೀತೇ?