Site icon Vistara News

BCCI New Secretary: ಅರುಣ್‌ ಜೇಟ್ಲಿ ಪುತ್ರ ಬಿಸಿಸಿಐ ಕಾರ್ಯದರ್ಶಿ?

Rohan Jaitley

BCCI New Secretary: Rohan Jaitley set to become new BCCI secretary if Jay Shah is elected as ICC chairman

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿಯ (ICC) ಮುಂದಿನ ಅಧ್ಯಕ್ಷರಾಗಿ ಜಯ್ ಶಾ (Jay Shah) ಅವರು ನೇಮಕವಾಗುವುದು ಬಹುತೇಕ ಖಚಿತವಾಗಿದೆ. ಇದರ ಬೆನ್ನಲ್ಲೇ ಬಿಸಿಸಿಐಯ ಮುಂದಿನ ಕಾರ್ಯದರ್ಶಿ ಯಾರಾಗಲಿದ್ದಾರೆ ಎಂಬ ಚರ್ಚೆ ಆರಂಭವಾಗಿದೆ. ಕೆಲ ದಿನಗಳ ಹಿಂದೆ ಹಾಲಿ ಉಪಾಧ್ಯಕ್ಷ ರಾಜೀವ್​ ಶುಕ್ಲಾ, ಮಹಾರಾಷ್ಟ್ರ ಬಿಜೆಪಿ ಹೆವಿವೇಟ್ ಆಶಿಶ್ ಶೇಲಾರ್, ಐಪಿಎಲ್ ಅಧ್ಯಕ್ಷರಾಗಿರುವ ಅರುಣ್‌ ಧುಮಾಲ್ ಹೆಸರು ಕೇಳಿ ಬಂದಿತ್ತು. ಇದೀಗ ಮತ್ತೊಂದು ಹೆಸರು ಕೇಳಿ ಬಂದಿದೆ. ಅವರೆಂದರೆ ಮಾಜಿ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಪುತ್ರ ರೋಹನ್‌ ಜೇಟ್ಲಿ(Rohan Jaitley).

ವರದಿಗಳ ಪ್ರಕಾರ ರೋಹನ್‌ ಜೇಟ್ಲಿ ಬಿಸಿಸಿಐ ಕಾರ್ಯದರ್ಶಿ ಸ್ಥಾನಕ್ಕೇರುವ ಸಾಧ್ಯತೆಯಿದೆ ಎನ್ನಲಾಗಿದೆ. ಸದ್ಯ ರೋಹನ್‌ ದಿಲ್ಲಿ ಡಿಸ್ಟ್ರಿಕ್ಟ್ ಕ್ರಿಕೆಟ್‌ ಸಂಸ್ಥೆ (DDCA)ಯ ಅಧ್ಯಕ್ಷರಾಗಿದ್ದಾರೆ. ಹೊಸ ಐಸಿಸಿ ಅಧ್ಯಕ್ಷರು ಡಿಸೆಂಬರ್ 1 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಧ್ಯಕ್ಷ ಹುದ್ದೆಗೆ ನಾಮನಿರ್ದೇಶನವನ್ನು ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 27 ಆಗಿದೆ. ಜಯ್‌ ಶಾ ಸದ್ಯಕ್ಕೆ ನಾಮಪತ್ರ ಸಲ್ಲಿಸಿಲ್ಲ.

ಐಸಿಸಿ ಹಾಲಿ ಅಧ್ಯಕ್ಷರಾಗಿರುವ ಗ್ರೆಗ್ ಬಾರ್ಕ್ಲೇ(Greg Barclay) ಮೂರನೇ ಅವಧಿಗೆ ಮುಂದುವರಿಯುವುದಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಜಯ್​ ಶಾ ಈ ಸ್ಥಾನಕ್ಕೆ ಸ್ಪರ್ಧೆ ಮಾಡಲಿದ್ದಾರೆ ಎನ್ನಲಾಗಿದೆ. ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ. ಐಸಿಸಿ ಬೋರ್ಡ್‌ನಲ್ಲಿರುವ 16 ಸದಸ್ಯರಲ್ಲಿ 15 ಸದಸ್ಯರ ಬೆಂಬಲವನ್ನು ಶಾ ಹೊಂದಿರಬೇಕು. ಈ ಹಿಂದೆಯೂ ಹಲವು ಬಾರಿ ಜಯ್​ ಶಾ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅವರು ಸ್ಪಧಿಸಿರಲಿಲ್ಲ. ಈ ಬಾರಿ ಖಚಿತ ಎಂದು ಜಯ್​ ಶಾ ಆಪ್ತ ಮೂಲಗಳು ಮಾಹಿತಿ ನೀಡಿದೆ. ಜಯ್ ಶಾ 2019 ರಲ್ಲಿ ಬಿಸಿಸಿಐ ಕಾರ್ಯದರ್ಶಿ ಹುದ್ದೆಯನ್ನು ವಹಿಸಿಕೊಂಡಿದ್ದರು.

35 ವರ್ಷದ ಜಯ್​ ಶಾ ಒಂದೊಮ್ಮೆ ಐಸಿಸಿ ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ ಐಸಿಸಿಯ ಅತ್ಯಂತ ಕಿರಿಯ ಅಧ್ಯಕ್ಷರಾದ ಗೌರವಕ್ಕೆ ಪಾತ್ರರಾಗಲಿದ್ದಾರೆ. ಪ್ರಸ್ತುತ ಐಸಿಸಿ ಅಧ್ಯಕ್ಷರಾಗಿ ಗ್ರೆಗ್ ಬಾರ್ಕ್ಲೇ ಅಧಿಕಾರದಲ್ಲಿದ್ದಾರೆ. 2020ರಲ್ಲಿ ಈ ಸ್ಥಾನಕ್ಕೆ ಇವರು ಆಯ್ಕೆ ಆಗಿದ್ದರು. ಈ ವರ್ಷ ಅವರ ಅಧಿಕಾರಾವಧಿ ಕೊನೆಯಾಗಲಿದೆ.

ಇದನ್ನೂ ಓದಿ Viral News: ಸಿದ್ಧಿ ವಿನಾಯಕನ ಸನ್ನಿಧಿಯಲ್ಲಿ ಟಿ20 ವಿಶ್ವಕಪ್​ ಟ್ರೋಫಿಗೆ ಪೂಜೆ ಸಲ್ಲಿಸಿದ ರೋಹಿತ್​ ಶರ್ಮ, ಜಯ್​ ಶಾ

ಜಯ್​ ಶಾ ನಾಯಕತ್ವವು ವಿಶ್ವಾದ್ಯಂತ ಕ್ರಿಕೆಟ್‌ನಲ್ಲಿ ಅಳಿಸಲಾಗದ ಛಾಪನ್ನು ಮೂಡಿಸಿದೆ. ಐಸಿಸಿ ಪುರುಷರ ವಿಶ್ವಕಪನ್ನು ಅವರು ಹೊಸ ಎತ್ತರಕ್ಕೆ ಮುನ್ನಡೆಸಿದ್ದಾರೆ. ಲಿಂಗ ಸಮಾನತೆಯನ್ನು ತರುವ ನಿಟ್ಟಿನಲ್ಲಿ ಭಾರತೀಯ ಕ್ರಿಕೆಟ್​ನಲ್ಲಿ ಪುರುಷ ಮತ್ತು ಮಹಿಳಾ ಆಟಗಾರ್ತಿಯರಿಗೆ ಸಮಾನ ವೇತನ ಪದ್ಧತಿಯನ್ನು ಕೂಡ ಇವರ ಕಾರ್ಯವಧಿಯಲ್ಲಿ ಜಾರಿಗೆ ತರಲಾಗಿತ್ತು. ಮತ್ತು ಮಹಿಳಾ ಪ್ರೀಮಿಯರ್ ಲೀಗ್‌ನ ರಚನೆ, ಒಲಂಪಿಕ್ಸ್‌ನಲ್ಲಿ ಕ್ರಿಕೆಟ್‌ ಸೇರ್ಪಡೆ, ಹೀಗೆ ಅನೇಕ ಕಾರ್ಯಗಳ ಮೂಲಕ ಕ್ರಿಕೆಟ್​ ಕ್ಷೇತ್ರದಲ್ಲಿ ಬದಲಾವಣೆಯನ್ನು ಮಾಡಿದ್ದಾರೆ. ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮುಖ್ಯಸ್ಥರಾದ ಅತ್ಯಂತ ಕಿರಿಯ ಎನ್ನುವ ಹೆಗ್ಗಳಿಕೆಯೂ ಜಯ್​ ಶಾ ಅವರದ್ದಾಗಿದೆ. ಭಾರತದ ದೇಶೀಯ ಕ್ರಿಕೆಟ್ ಭವಿಷ್ಯವನ್ನು ಬದಲಾವಣೆ ಮಾಡುವ ನಿಟ್ಟಿನಲ್ಲಿ ಜಯ್​ ಶಾ ಹಲವು ಹೊಸ ಯೋಜನೆಯನ್ನು ಜಾರಿಗೆ ತಂದಿದ್ದಾರೆ.

Exit mobile version