ಮುಂಬಯಿ: ಐಸಿಸಿ ವಿಶ್ವಕಪ್ 2023 ರ ವೇಳಾಪಟ್ಟಿ ಬಿಡುಗಡೆಗೆ ಸಂಬಂಧಿಸಿದಂತೆ ಬಿಸಿಸಿಐ ಮತ್ತು ಪಿಸಿಬಿ ನಡುವೆ ಭಿನ್ನಾಭಿಪ್ರಾಯ ಉಂಟಾಗಿದೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ತಮ್ಮ ಅಗತ್ಯಕ್ಕೆ ಅನುಗುಣವಾಗಿ ಪಂದ್ಯದ ಸ್ಥಳಗಳನ್ನು ಬದಲಾವಣೆ ಮಾಡಲು ಕೋರುತ್ತಿದೆ. ಹೀಗಾಗಿ ಕರಡು ಪ್ರತಿಗೆ ಅವರು ಒಪ್ಪಿಗೆ ಕೊಡುತ್ತಿಲ್ಲ. ಹೀಗಾಗಿ ವೇಳಾಪಟ್ಟಿಯ ನಿರಂತರ ವಿಳಂಬದಿಂದ ಬಿಸಿಸಿಐ ನಿರಾಶೆಗೊಂಡಿದೆ. ಡಬ್ಲ್ಯುಟಿಸಿ ಫೈನಲ್ಸ್ ನಂತರ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ಪಿಸಿಬಿಯ ಒಪ್ಪಿಗೆ ಸಿಗದ ಕಾರಣ ವೇಳಾಪಟ್ಟಿ ಬಿಡುಗಡೆ ಮಾಡಲು ಇನ್ನೂ ಸಾಧ್ಯವಾಗಿಲ್ಲ. ಹೀಗಾಗಿ ವೇಳಾಪಟ್ಟಿಯನ್ನು ಮುಂದಿನ ವಾರ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.
ಕಳೆದ ವಾರ ಐಸಿಸಿ ಕರಡು ವೇಳಾಪಟ್ಟಿಯನ್ನು ಕಳುಹಿಸಿದೆ. ಇದಕ್ಕಾಗಿ ತಮ್ಮ ಪ್ರತಿಕ್ರಿಯೆಯನ್ನು ನೀಡುವಂತೆ ಪಿಸಿಬಿಯನ್ನು ಕೋರಿದೆ. ಕರಡು ವೇಳಾಪಟ್ಟಿಗೆ ಭಾರತಕ್ಕೆ ಯಾವುದೇ ಆಕ್ಷೇಪಣೆಗಳಿಲ್ಲವಾದರೂ, ಪಿಸಿಬಿ ತಮ್ಮ ಪಂದ್ಯಗಳಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ವಿನಂತಿಸಿದೆ. ಇದು ವೇಳಾಪಟ್ಟಿಯ ಬಿಡುಗಡೆಯನ್ನು ಮತ್ತಷ್ಟು ವಿಳಂಬಗೊಳಿಸುತ್ತಿದೆ.
ಪಿಸಿಬಿ ಏನು ಬೇಕಾದರೂ ಹೇಳಬಹುದು. ಆದರೆ ವೇಳಾಪಟ್ಟಿ ಘೋಷಣೆ ವಿಳಂಬಕ್ಕೆ ಪಿಸಿಬಿ ಕಾರಣ. ಮೊದಲಿಗೆ, ಪಾಕಿಸ್ತಾನವು ಅಹಮದಾಬಾದ್ನಲ್ಲಿ ಆಡಲು ಸಿದ್ಧರಿರಲಿಲ್ಲ. ಈಗ ಅವರು ಚೆನ್ನೈನಲ್ಲಿ ಆಡಲು ಸಿದ್ಧರಿಲ್ಲ. ಅವರಿಗೆ ಹೇಗಾದರೂ ಅಸುರಕ್ಷಿತ ಭಾವ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಕ್ರೀಡಾ ವೆಬ್ಸೈಟ್ ಒಂದಕ್ಕೆ ತಿಳಿಸಿದ್ದಾರೆ.
ಅಹ್ಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಭಾರತ ತಂಡದ ವಿರುದ್ಧ ಆಡುವುದಿಲ್ಲ ಎಂದು ಪಿಸಿಬಿ ಮೊದಲಿನಿಂದಲೂ ಪಟ್ಟು ಹಿಡಿದಿತ್ತು. ನಂತರ ಭಾರತವು ತಮ್ಮ ಸಾಂಪ್ರದಾಯಿಕ ಎದುರಾಳಿಗಳನ್ನು ಹೊಸ ಸ್ಥಳದಲ್ಲಿ ಅಂದರೆ ಚೆನ್ನೈನಲ್ಲಿ ಎದುರಿಸಲು ನಿರ್ಧರಿಸಲಾಯಿತು. ಆದಾಗ್ಯೂ, ಕರಡು ವೇಳಾಪಟ್ಟಿ ಸ್ವೀಕರಿಸಿದ ನಂತರ ಪಾಕಿಸ್ತಾನ ತಂಡ ಈಗ ಅಫ್ಘಾನಿಸ್ತಾನ ವಿರುದ್ಧದ ಪಂದ್ಯವನ್ನು ಚೆನ್ನೈನಿಂದ ಬೇರೆ ಕಡೆಗೆ ವರ್ಗಾವಣೆ ಮಾಡುವಂತೆ ಕೋರಿದೆ. ಆಸ್ಟ್ತೇಲಿಯಾ ವಿರುದ್ಧ ಬೆಂಗಳೂರಿನಲ್ಲಿ ಆಡುವುದಿಲ್ಲ ಎಂದು ಹೇಳಿದೆ.
ಚೆನ್ನೈನಲ್ಲಿ ಸ್ಪಿನ್ ಸ್ನೇಹಿ ಟ್ರ್ಯಾಕ್ನಲ್ಲಿ ಸ್ಪಿನ್ ಬೌಲರ್ಗಳೇ ತುಂಬಿರುವ ಅಫ್ಘಾನಿಸ್ತಾನ ತಂಡವನ್ನು ಎದುರಿಸಲು ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಆಗುವುದಿಲ್ಲ ಎಂದು ಪಿಸಿಬಿ ಹೇಳಿಕೊಂಡಿದೆ. ಮತ್ತೊಂದೆಡೆ, ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಸ್ಥಳವನ್ನು ಬದಲಾಯಿಸಬೇಕೆಂದು ಪಿಸಿಬಿ ಒತ್ತಾಯಿಸಿದೆ. ಸರಳವಾಗಿ ಹೇಳುವುದಾದರೆ, ಪಿಸಿಬಿ ಬೆಂಗಳೂರಿನಲ್ಲಿ ಅಫ್ಘಾನಿಸ್ತಾನ ಮತ್ತು ಚೆನ್ನೈನಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಲು ಬಯಸಿದೆ. ಆದರೆ ಬಿಸಿಸಿಐ ಈ ಮನವಿಯನ್ನು ತಿರಸ್ಕರಿಸಿದೆ. ಈಗ ಐಸಿಸಿ ಈ ಪ್ರಕ್ರಿಯೆಯಲ್ಲಿ ಮಧ್ಯಸ್ಥಿಕೆ ವಹಿಸುತ್ತಿದೆ. ಇವೆಲ್ಲದ ಪರಿಣಾಮವಾಗಿ ವೇಳಾಪಟ್ಟಿ ಬಿಡುಗಡೆ ತಡವಾಗುತ್ತಿದೆ.
ಇದನ್ನೂ ಓದಿ : World Cup 2023 : ಚೆನ್ನೈನಲ್ಲೂ ಆಡಲ್ಲ ಅಂತಿದೆ ಪಾಕಿಸ್ತಾನ; ಬಾಬರ್ ಬಳಗದ ಆಕ್ಷೇಪಗಳಿಗೆ ಕೊನೆಯೇ ಇಲ್ಲ!
ವೇಳಾಪಟ್ಟಿ ಬಿಡುಗಡೆ ವಿಳಂಬದ ಬಗ್ಗೆ ಪ್ರತಿಕ್ರಿಯಿಸಿದ ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು, ವಿಳಂಬಕ್ಕೆ ಪಿಸಿಬಿಯನ್ನು ಮಾತ್ರ ದೂಷಿಸಬೇಕು ಎಂದರು. ಆರಂಭದಲ್ಲಿ ತಮ್ಮ ಸ್ಥಳವನ್ನು ಬದಲಾಯಿಸಲು ಒತ್ತಾಯಿಸಿದ ನಂತರ, ಅವರು ಮತ್ತೆ ಅದೇ ಆಯ್ಕೆಯನ್ನು ಕೇಳುತ್ತಿದ್ದಾರೆ. ಐಸಿಸಿ ಟೂರ್ನಿಯಲ್ಲಿ ಇಂಥದ್ದು ಸಾಧ್ಯವೇ ಇಲ್ಲ. ಎಲ್ಲವನ್ನೂ ಅವರ ಪರಿಸ್ಥಿತಿಗೆ ತಕ್ಕುದಾಗಿ ಸಿದ್ಧಪಡಿಸುವುದು ಕಷ್ಟ. ಆದರೆ, ಸಣ್ಣ ಪುಟ್ಟ ಕಾರಣಗಳನ್ನು ಮುಂದಿಟ್ಟುಕೊಂಡು ವೇಳಾಪಟ್ಟಿ ಬಿಡುಗಡೆಗೆ ತೊಂದರೆ ಒಡ್ಡುವುದ ಸರಿಯಾದ ಕ್ರಮವಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪಾಕಿಸ್ತಾನ ಬೇರೆ ದೇಶಗಳ ತಂಡಕ್ಕೆ ಹೋಗಿ ಕ್ರಿಕೆಟ್ ಆಡಲೂ ಸುರಕ್ಷಿತವಲ್ಲ. ಅವರಿಗೂ ಸುರಕ್ಷಿತ ಭಾವವಿಲ್ಲ. ಹೀಗಾಗಿ ಭಾರತದಲ್ಲಿ ವೇಳಾಪಟ್ಟಿ ಸಿದ್ಧಪಡಿಸಿದ ಬಳಿಕವೂ ಅವರು ಅಸುರಕ್ಷಿತ ಭಾವ ಹೊಂದಿದ್ದಾರೆ ಎಂದು ಅವರು ಆರೋಪಿಸಿದರು.