Site icon Vistara News

Neeraj Chopra | ನೀರಜ್‌ ಚೋಪ್ರಾ ಬಂಗಾರದ ಪದಕ ಗೆದ್ದ ಜಾವೆಲಿನ್‌ ವಶಕ್ಕೆ ಪಡೆದುಕೊಂಡ ಬಿಸಿಸಿಐ!

neeraj chopra

ಹೊಸದಿಲ್ಲಿ: ಭಾರತದ ಕ್ರಿಕೆಟ್‌ ಆಡಳಿತ ಮಂಡಳಿಯಾಗಿರುವ ಬಿಸಿಸಿಐಗೂ, ಜಾವೆಲಿನ್ ಎಸೆಗಾರ ನೀರಜ್‌ ಚೋಪ್ರಾ (Neeraj Chopra) ಅವರಿಗೂ ಏನು ಸಂಬಂಧ? ಬಿಸಿಸಿಐ ಯಾಕೆ ನೀರಜ್‌ ಚೋಪ್ರಾ ಅವರು ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದ ಜಾವೆಲಿನ್‌ ವಶಕ್ಕೆ ಪಡೆದುಕೊಂಡು ತನ್ನಲ್ಲಿ ಇಟ್ಟುಕೊಳ್ಳುತ್ತದೆ ಎಂಬುದು ಎಲ್ಲರ ಪ್ರಶ್ನೆ. ಆದರೆ, ಇವೆಲ್ಲವೂ ಉತ್ತಮ ಕಾರ್ಯಕ್ಕೋಸ್ಕರ ಸಂಭವಿಸಿದ ಪ್ರಕ್ರಿಯೆ. ವಶಕ್ಕೆ ಪಡೆದಿದೆ ಎಂದರೆ ಒತ್ತಾಯಪೂರ್ವಕವಾಗಿ ತನ್ನ ಬಳಿ ಇಟ್ಟುಕೊಂಡಿದೆ ಎಂದಲ್ಲ. ಬದಲಾಗಿ ೧.೫ ಕೋಟಿ ರೂಪಾಯಿ ಪಾವತಿಸಿ ತನ್ನ ಬಳಿ ಇಟ್ಟುಕೊಂಡಿರುವುದು.

ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕಗಳನ್ನು ಗೆದ್ದ ಹಾಗೂ ಸಾಧನೆ ಮಾಡಿದ್ದ ಅಥ್ಲೀಟ್‌ಗಳು ಟೂರ್ನಿ ಮುಗಿದು ವಾಪಸಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರ ಸತ್ಕಾರ ಕೂಟದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ತಮ್ಮ ಬಳಿಯಲ್ಲಿದ್ದ ನಾನಾ ಕ್ರೀಡಾಪರಿಕಗಳನ್ನು ಅವರೆಲ್ಲರೂ ಮೋದಿ ಅವರಿಗೆ ಉಡುಗೊರೆಯಾಗಿ ಕೊಟ್ಟಿದ್ದರು. ಅವುಗಳೆಲ್ಲವನ್ನೂ ಇದೀಗ ಹರಾಜು ಮಾಡಲಾಗಿದ್ದು, ಕೋಟ್ಯಂತರ ರೂಪಾಯಿ ಸಂಗ್ರಹಗೊಂಡಿದೆ. ಆ ಮೊತ್ತವು “ನಮಾಮಿ ಗಂಗೆ” (ಗಂಗಾ ನದಿ ಶುದ್ಧೀಕರಣ) ಯೋಜನೆಗೆ ಬಳಕೆಯಾಗಲಿದೆ. ಅಂತೆಯೇ ನೀರಜ್‌ ಚೋಪ್ರಾ ಅವರ ಜಾವೆಲಿನ್ ಅನ್ನು ಬಿಸಿಸಿಐ ೧.೫ ಕೋಟಿ ರೂಪಾಯಿಗೆ ಖರೀದಿ ಮಾಡಿಕೊಂಡಿದೆ. ಅದೂ ಅಲ್ಲದೆ, ಕ್ರೀಡಾಪಟುವೊಬ್ಬರು ಬಳಸಿದ ಕರವಸ್ತ್ರವನ್ನೂ ಬಿಸಿಸಿಐ ೧ ಕೋಟಿ ರೂಪಾಯಿಗೆ ಖರೀದಿಸಿದೆ. ಹರಾಜಿಗೆ ಇಟ್ಟಿರುವ ವಸ್ತುಗಳಲ್ಲಿ ಇದು ಗರಿಷ್ಠ ಮೊತ್ತವಾಗಿದೆ.

ಇದರ ಹರಾಜು ಪ್ರಕ್ರಿಯೆ ೨೦೨೧ರ ಸೆಪ್ಟೆಂಬರ್‌ ೨೦೨೨ರ ಸೆಪ್ಟೆಂಬರ್‌ವರೆಗೆ ನಡೆದಿದೆ ಎನ್ನಲಾಗಿದೆ. ಬಿಸಿಸಿಐ ಅಲ್ಲದೆ, ೮೬೦೦ ಬಿಡ್ಡರ್‌ಗಳು ಈ ಹರಾಜಿನಲ್ಲಿ ಪಾಲ್ಗೊಂಡಿದ್ದಾರೆ. ಫೆನ್ಸರ್‌ ಭವಾನಿ ದೇವಿ ಅವರು ಖಡ್ಗ ೧.೨ ಕೋಟಿ ರೂಪಾಯಿಗೆ ಹರಾಜು ಆಗಿದ್ದರೆ, ಪ್ಯಾರಾ ಜಾವೆಲಿನ್ ಎಸೆತಗಾರ ಸುಮಿತ್‌ ಅಂಟಿಲ್‌ ಅವರ ಜಾವೆಲಿನ್‌ ೧.೦೦೨ ಕೋಟಿ ರೂಪಾಯಿ ಬಿಡ್‌ನಲ್ಲಿ ಸೇಲಾಗಿದೆ. ಬಾಕ್ಸರ್ ಲವ್ಲಿನಾ ಬೊರ್ಗೊಹೈನ್‌ ಅವರ ಗ್ಲವ್ಸ್‌ ೯೧ ಲಕ್ಷ ರೂಪಾಯಿಗೆ ಹರಾಜಾಗಿದೆ.

ಇದನ್ನೂ ಓದಿ | Javelin Throw | ಲೂಸಾನ್‌ ಡೈಮಂಡ್‌ಲೀಗ್‌ನಲ್ಲಿ ಚಿನ್ನದ ಪದಕ ಗೆದ್ದ ನೀರಜ್‌ ಚೋಪ್ರಾ

Exit mobile version