ಮುಂಬಯಿ : ಟಿ೨೦ ವಿಶ್ವ ಕಪ್‌ಗಾಗಿ (T20 World Cup) ಆಸ್ಟ್ರೇಲಿಯಾಗೆ ತೆರಳುವ ಮೊದಲು ರೋಹಿತ್ ಶರ್ಮ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಟಿ೨೦ ಸರಣಿ, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಹಾಗೂ ಟಿ೨೦ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಈ ಮೂಲಕ ಭಾರತ ತಂಡದ ಜಾಗತಿಕ ಮಟ್ಟದ ಟೂರ್ನಿಗೆ ಭರ್ಜರಿ ಅಭ್ಯಾಸ ನಡೆಸಲಿದೆ. ಇವೆಲ್ಲದರ ಹೊರತಾಗಿಯೂ ಟೀಮ್ ಇಂಡಿಯಾಗೆ ಸಾಕಷ್ಟು ಅಭ್ಯಾಸ ಪಂದ್ಯಗಳನ್ನು ಆಯೋಜಿಸಲು ಬಿಸಿಸಿಐ ನಿರ್ಧರಿಸಿದೆ.
ಅಕ್ಟೋಬರ್ ೪ರಂದು ದಕ್ಷಿಣ ಆಫ್ರಿಕಾ ವಿರುದ್ಧದ ಮೂರನೇ ಹಾಗೂ ಕೊನೇ ಟಿ೨೦ ಪಂದ್ಯ ನಡೆಯಲಿದೆ. ಸದ್ಯದ ಮಾಹಿತಿ ಪ್ರಕಾರ ಮರುದಿನವೇ ಭಾರತ ತಂಡವನ್ನು ಆಸ್ಟ್ರೇಲಿಯಾಗೆ ಕಳುಹಿಸಲು ಬಿಸಿಸಿಐ ನಿರ್ಧರಿಸಿದೆ. ಅಲ್ಲಿ ಹಲವಾರು ಅಭ್ಯಾಸ ಪಂದ್ಯಗಳನ್ನು ಆಯೋಜಿಸಿ ತಂಡದ ಆಟಗಾರರನ್ನು ವಿಶ್ವ ಕಪ್‌ಗೆ ಸಜ್ಜುಗೊಳಿಸುವುದು ಯೋಜನೆಯಾಗಿದೆ.
ವಿಶ್ವ ಕಪ್‌ಗೆ ಮೊದಲು ಐಸಿಸಿ ಭಾರತ ತಂಡಕ್ಕೆ ನ್ಯೂಜಿಲೆಂಡ್ ವಿರುದ್ಧ ಅಕ್ಟೋಬರ್ ೧೭ರಂದು ಹಾಗೂ ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್ ೧೮ರಂದು ಅಭ್ಯಾಸ ಪಂದ್ಯಗಳನ್ನು ಆಯೋಜಿಸಿದೆ. ಇದನ್ನು ಹೊರತುಪಡಿಸಿಯೂ ಅಭ್ಯಾಸ ಪಂದ್ಯಗಳನ್ನು ಏರ್ಪಡಿಸುವುದು ಬಿಸಿಸಿಐ ಉದ್ದೇಶವಾಗಿದೆ.
“ನಾವು ಕೆಲವು ತಂಡಗಳ ಜತೆ ಮಾತುಕತೆ ನಡೆಸಿದ್ದು, ಐಸಿಸಿ ಆಯೋಜಿಸಿರುವ ಅಭ್ಯಾಸ ಪಂದ್ಯಕ್ಕೆ ಹೊರತುಪಡಿಸಿ ಇನ್ನಷ್ಟು ಅಭ್ಯಾಸ ಪಂದ್ಯಗಳಲ್ಲಿ ಆಡಲು ಒಪ್ಪಿಕೊಂಡಿವೆ. ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯ ಮುಕ್ತಾಯಗೊಂಡ ತಕ್ಷಣ ಭಾರತ ತಂಡವನ್ನು ಆಸ್ಟ್ರೇಲಿಯಾಗೆ ಕಳುಹಿಸಲಾಗುವುದು. ಅಲ್ಲಿ ಅವರು ಅಭ್ಯಾಸ ಪಂದ್ಯಗಳಲ್ಲಿ ಪಾಲ್ಗೊಳ್ಳಲಿದ್ದಾರೆ,” ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟಿ೨೦ ವಿಶ್ವ ಕಪ್‌ಗೆ ಭಾರತ ತಂಡ
ರೋಹಿತ್ ಶರ್ಮ (ನಾಯಕ), ಕೆ. ಎಲ್. ರಾಹುಲ್ (ಉಪನಾಯಕ), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ದೀಪಕ್ ಹೂಡ, ರಿಷಭ್ ಪಂತ್, ದಿನೇಶ್ ಕಾರ್ತಿಕ್ (ವಿಕೆಟ್‌ಕೀಪರ್‌ಗಳು), ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್, ಯಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಜಸ್‌ಪ್ರಿತ್ ಬುಮ್ರಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಶ್‌ದೀಪ್ ಸಿಂಗ್.
ಮೀಸಲು ಆಟಗಾರರು: ಮೊಹಮ್ಮದ್ ಶಮಿ, ಶ್ರೇಯಸ್ ಅಯ್ಯರ್, ರವಿ ಬಿಷ್ಣೋಯಿ, ದೀಪಕ್ ಚಾಹರ್.
ಇದನ್ನೂ ಓದಿ | IND vs PAK | ಭಾರತ- ಪಾಕಿಸ್ತಾನ ವಿಶ್ವ ಕಪ್ ಪಂದ್ಯದ ಟಿಕೆಟ್ ಸೋಲ್ಡ್ ಔಟ್, ಆಯೋಜಕರು ಫುಲ್ ಖುಷ್