ಬೆಂಗಳೂರು: 2022 ರ ಕೊನೆಯಲ್ಲಿ ಭೀಕರ ಕಾರು ಅಪಘಾತಕ್ಕೆ ಒಳಗಾಗಿದ್ದ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ರಿಷಭ್ ಪಂತ್ (Rishabh Pant) ವೇಗವಾಗಿ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ತಾವು ವೇಗವಾಗಿ ಸುಧಾರಿಸಿಕೊಳ್ಳುತ್ತಿರುವ ಹಾಗೂ ದೈಹಿಕ ಕಸರತ್ತು ಆರಂಭಿಸಿರುವ ಚಿತ್ರಗಳನ್ನು ಪ್ರಕಟಿಸಿದ್ದಾರೆ. ಈ ಮೂಲಕ ಟೀಮ್ ಇಂಡಿಯಾ ಆಯ್ಕೆಗಾರರಿಗೆ ಹಾಗೂ ಅಭಿಮಾನಿಗಳಿಗೆ ಖುಷಿಯ ಸುದ್ದಿಯನ್ನು ನೀಡಿದ್ದಾರೆ. ಸ್ಟಾರ್ ಬ್ಯಾಟರ್ ಚೇತರಿಕೆಯ ವೇಗವನ್ನು ಗಮನಿಸಿರುವ ಬಿಸಿಸಿಐ, 2023ರ ಅಂತ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ತಂಡಕ್ಕೆ ಅವರನ್ನು ಆಯ್ಕೆ ಮಾಡುವ ಯೋಜನೆ ಹಾಕಿಕೊಂಡಿದೆ ಎಂಬುದಾಗಿ ವರದಿಯಾಗಿದೆ. ಅವರನ್ನು ಬೇಗ ಫಿಟ್ ಮಾಡಲು ಪುನಶ್ಚೇತನ ಕಾರ್ಯಕ್ಕೆ ವೇಗ ನೀಡಲಾಗಿದೆ ಎಂದು ವರದಿಯಾಗಿದೆ.
ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ ) ಪುನಶ್ಚೇತನ ಕಾರ್ಯದಲ್ಲಿ ಅವರು ಅವರು ತೊಡಗಿದ್ದಾರೆ. ವೇಗದ ಬೌಲರ್ ಹಾಗೂ ಸಹ ಆಟಗಾರರಾದ ಜಸ್ಪ್ರೀತ್ ಬುಮ್ರಾ, ಶ್ರೇಯಸ್ ಅಯ್ಯರ್ ಮತ್ತು ಪ್ರಸಿದ್ಧ್ ಕೃಷ್ಣ ಅವರೊಂದಿಗೆ ಅವರು ವ್ಯಾಯಾಮ ಮಾಡುತ್ತಿರುವ ವಿಡಿಯೊವನ್ನು ಅವರು ಹಂಚಿಕೊಂಡಿದ್ದಾರೆ. ಯುವ ಬ್ಯಾಟರ್ನ ಚಲನವಲನ ನೋವು ರಹಿತವಾಗಿ ಕಂಡರೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಕಷ್ಟು ಸಮಯ ಬೇಕಾಗಿದೆ ಎಂದು ಫಿಸಿಯೋ ಎಸ್ ರಜನಿಕಾಂತ್ ಹೇಳಿದ್ದಾರೆ.
ಕಾರು ಅಪಘಾತದ ವೇಳೆ ಯುವ ಬ್ಯಾಟರ್ ಅನೇಕ ಗಾಯಗಳಿಗೆ ಒಳಗಾಗಿದ್ದರು. ಹೀಗಾಗಿ 2023ರ ಋತುವಿನಲ್ಲಿ ಅವರು ಕ್ರಿಕೆಟ್ ಆಟದಿಂದ ಹೊರಗುಳಿಯುವ ನಿರೀಕ್ಷೆಯಿತ್ತು. ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕರಾಗಿದ್ದ ಅವರು ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಯಲ್ಲಿ ಅವರು ಆಡಿರಲಿಲ್ಲ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಭಾರತದ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಫೈನಲ್ನಿದ ಹೊರಗುಳಿದಿದ್ದರು. ಏತನ್ಮಧ್ಯೆ ಅವರ ಚೇತರಿಕೆಯ ವೇಗ ಮುಂಬರುವ ಏಕದಿನ ವಿಶ್ವಕಪ್ಗೆ ಭಾರತೀಯ ಅಭಿಮಾನಿಗಳಿಗೆ ಭರವಸೆ ಮೂಡಿಸಿದೆ.
ಐಪಿಎಲ್ 2023ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ತಮ್ಮ ನಾಯಕನ ಅಲಭ್ಯತೆಯಿಂದ ಪರದಾಡಿತು. ಇತ್ತೀಚೆಗೆ ಮುಕ್ತಾಯಗೊಂಡ ಡಬ್ಲ್ಯುಟಿಸಿ ಫೈನಲ್ನ ಪಂದ್ಯದ ವೇಳೆಯೂ ಪಂತ್ ಅನಪಸ್ಥಿತಿಯೂ ಗಮನ ಸೆಳೆಯಿತು. ನಾಯಕ ರೋಹಿತ್ ಶರ್ಮಾ ಅದನ್ನು ಅನುಭವಿಸಿದರು. ಆದಾಗ್ಯೂ ಅವರು ವಿಶ್ವ ಕಪ್ಗೆ ಲಭ್ಯರಾಗುತ್ತಾರೆ ಎಂಬುದು ತಂಡದ ಪಾಲಿಗೆ ಖುಷಿಯ ವಿಚಾರ. ಎನ್ಸಿಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಅಂತೆಯೇ ಎನ್ಸಿಎ ತರಬೇತಿ ಶಿಬಿರಗಳಿಗೆ ಹಾಜರಾಗುತ್ತಿರುವ ಯುವ ಕ್ರಿಕೆಟಿಗರೊಂದಿಗೆ ಪಂತ್ ಸಮಯ ಕಳೆಯುತ್ತಿದ್ದಾರೆ.
ಇದನ್ನೂ ಓದಿ : Rishabh Pant: ಎನ್ಸಿಎ ಸೇರಿದ ರಾಹುಲ್ಗೆ ಸ್ವಾಗತಿಸಿದ ರಿಷಭ್ ಪಂತ್; ವೈರಲ್ ಆಯ್ತು ಟ್ವೀಟ್
ಇತ್ತೀಚೆಗೆ ಬೆನ್ನು ನೋವಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಕೂಡ ಎನ್ಸಿಎನಲ್ಲಿ ಪುನಶ್ಚೇತನಕ್ಕೆ ಒಳಗಾಗುತ್ತಿದ್ದಾರೆ. ಅವರು ಕೂಡ ಐಪಿಎಲ್ 2023 ಮತ್ತು ಡಬ್ಲ್ಯುಟಿಸಿ ಫೈನಲ್ ಪಂದ್ಯದಿಂದ ಹೊರಗೆ ಉಳಿದಿದ್ದರು. ಸೋಲಿನ ಬಳಿಕ ಟೀಕೆಗಳನ್ನು ಎದುರಿಸುತ್ತಿರುವ ಟೀಮ್ ಇಂಡಿಯಾಗೆ ಪಂತ್ ಹಾಗೂ ಬುಮ್ರಾ ಮುಂದಿನ ವಿಶ್ವ ಕಪ್ಗೆ ಅತ್ಯಗತ್ಯ. ಬುಮ್ರಾ ಏಷ್ಯಾ ಕಪ್ಗೆ ಫಿಟ್ ಎನಿಸಿಕೊಳ್ಳಬಹುದು. ಏತನ್ಮಧ್ಯೆ ತಿಂಗಳುಗಳ ಹಿಂದೆ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಸಮಯದಲ್ಲಿ ಬೆನ್ನುನೋವಿಗೆ ಒಳಗಾದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಹೀರೊ ಶ್ರೇಯಸ್ ಅಯ್ಯರ್ ಕೂಡ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಕೂಡ ಏಷ್ಯಾ ಕಪ್ 16 ನೇ ಆವೃತ್ತಿಗೆ ಮುಂಚಿತವಾಗಿ ತಂಡ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ.