Site icon Vistara News

Team India | ರೋಹಿತ್‌ ಶರ್ಮ ಕುರಿತು ಮಹತ್ವದ ಹೇಳಿಕೆ ನೀಡಿದ ಬಿಸಿಸಿಐ ಅಧ್ಯಕ್ಷ ಜಯ್‌ ಶಾ

INDvsBAN

ಮುಂಬಯಿ : ಬಾಂಗ್ಲಾದೇಶ ವಿರುದ್ಧದ ಮೂರು ಪಂದ್ಯಗಳ ಏಕ ದಿನ ಸರಣಿಯ ಎರಡನೇ ಪಂದ್ಯದಲ್ಲಿ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಟೀಮ್ ಇಂಡಿಯಾದ (Team India) ನಾಯಕ ರೋಹಿತ್‌ ಶರ್ಮ ಕುರಿತು ಬಿಸಿಸಿಐ ಅಧ್ಯಕ್ಷ ಜಯ್‌ ಶಾ ಹೇಳಿಕೆಯೊಂದನ್ನು ಕೊಟ್ಟಿದ್ದು, ಅವರ ಕ್ರಿಕೆಟ್‌ ಭವಿಷ್ಯ ಏನೇಂಬುದನ್ನು ತಿಳಿಸಿದ್ದಾರೆ. ಶುಕ್ರವಾರ ಈ ಕುರಿತು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.

ರೋಹಿತ್ ಶರ್ಮ ಅವರು ಮುಂಬಯಿಗೆ ವಾಪಸಾಗಿದ್ದಾರೆ. ಅವರು ಇಲ್ಲಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ಬಳಿಕ ಅವರು ತಂಡಕ್ಕೆ ಯಾವಾಗ ಲಭ್ಯರಾಗುತ್ತಾರೆ ಎಂಬ ಮಾಹಿತಿ ಪ್ರಕಟಿಸಲಾಗುವುದು ಎಂಬುದಾಗಿ ಜಯ್‌ ಶಾ ಹೇಳಿದ್ದಾರೆ.

“ಬಿಸಿಸಿಐ ವೈದ್ಯಕೀಯ ತಂಡವು ಅವರ ಕೈ ನೋವಿನ ಕುರಿತು ಪರೀಕ್ಷೆ ಮಾಡಿದ್ದಾರೆ. ಅಂತೆಯೇ ಢಾಕಾದ ಸ್ಥಳೀಯ ಆಸ್ಪತ್ರೆಯಲ್ಲಿ ಸ್ಕ್ಯಾನ್‌ಗೆ ಒಳಗಾಗಿದ್ದಾರೆ. ಬಳಿಕ ತಜ್ಞರ ಜತೆ ಸಮಾಲೋಚನೆಗಾಗಿ ಮುಂಬಯಿಗೆ ಹಾರಿದ್ದಾರೆ. ಹೀಗಾಗಿ ಅಂತಿಮ ಏಕ ದಿನ ಪಂದ್ಯದಿಂದ ಹೊರಕ್ಕುಳಿಯಲಿದ್ದಾರೆ. ಟೆಸ್ಟ್‌ ಸರಣಿಗೆ ಅವರ ಲಭ್ಯತೆ ಕುರಿತು ಮಾಹಿತಿ ಪ್ರಕಟಿಸಲಾಗುವುದು,” ಎಂದು ಜಯ್‌ ಶಾ ಹೇಳಿದ್ದಾರೆ.

ಜಯ್‌ ಶಾ ಹೇಳಿಕೆಯ ಹೊರತಾಗಿಯೂ ರೋಹಿತ್‌ ಶರ್ಮ ಮೊದಲ ಟೆಸ್ಟ್ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆಗಳು ಇಲ್ಲ. ಯಾಕೆಂದರೆ ಡಿಸೆಂಬರ್‌ ೧೪ರಿಂದ ಟೆಸ್ಟ್‌ ಸರಣಿ ಆರಂಭವಾಗಲಿದೆ. ಒಂದು ವೇಳೆ ರೋಹಿತ್‌ ಶರ್ಮ ಅವರ ಕೈ ಬೆರಳಿನ ಮೂಳೆ ಕಳಚಿಕೊಂಡಿದ್ದರೆ ಅದು ಸರಿಯಾಗಲು ಎರಡು ವಾರಗಳ ಸಮಯ ಬೇಕು. ಆದರೆ, ಹೊರ ನೋಟಕ್ಕೆ ರೋಹಿತ್ ಶರ್ಮ ಅವರ ಕೈಗೆ ಹೊರಗಿನಿಂದಲೂ ಗಾಯವಾಗಿದೆ. ಅದಕ್ಕೆ ಸ್ಟಿಚ್ ಕೂಡ ಹಾಕಲಾಗಿದೆ. ಅದು ಕೂಡ ಸರಿಯಾಗಬೇಕಾದರೆ ಇನ್ನಷ್ಟು ಸಮಯ ಬೇಕಾಗಬಹುದು ಎಂದು ಹೇಳಲಾಗಿದೆ.

ರೋಹಿತ್ ಚೇತರಿಸಿಕೊಳ್ಳದಿದ್ದರೆ ಕೆಎಲ್ ರಾಹುಲ್ ಟೆಸ್ಟ್ ಸರಣಿಯಲ್ಲಿ ಭಾರತವನ್ನು ಮುನ್ನಡೆಸಲಿದ್ದಾರೆ ಮತ್ತು ಪ್ರಸ್ತುತ ಭಾರತ ಎ ತಂಡದೊಂದಿಗೆ ಬಾಂಗ್ಲಾದೇಶದಲ್ಲಿರುವ ಅಭಿಮನ್ಯು ಈಶ್ವರನ್ ಅವರನ್ನು ಬ್ಯಾಕಪ್ ಓಪನರ್ ಆಗಿ ತಂಡಕ್ಕೆ ಸೇರಿಸಲಾಗುತ್ತದೆ.

ಇದನ್ನೂ ಓದಿ | IND VS BAN | ರೋಹಿತ್​ ಶರ್ಮಾ ಬ್ಯಾಟಿಂಗ್​ ಸಾಹಸಕ್ಕೆ ಕೋಚ್​ ರಾಹುಲ್​ ದ್ರಾವಿಡ್​​ ಮೆಚ್ಚುಗೆ

Exit mobile version