ಮುಂಬಯಿ: ಬಿಸಿಸಿಐ ಅಧ್ಯಕ್ಷರಾದ ಬೆನ್ನಲ್ಲೇ ಬಂದೆರಗಿದ ಸ್ವಜನಪಕ್ಷಪಾತದ ಆರೋಪದಿಂದ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಮುಕ್ತರಾಗಿದ್ದಾರೆ. ಬಿಸಿಸಿಐ ನೈತಿಕ ಅಧಿಕಾರಿ ಹಾಗೂ ನಿವೃತ್ತ ನ್ಯಾಯಾಧೀಶ ವಿನೀತ್ ಸರಣ್, ಬಿನ್ನಿ ವಿರುದ್ಧ ನೀಡಿದ್ದ ದೂರು ಆಧಾರ ರಹಿತ ಎಂದ ಹೇಳಿ ತಿರಸ್ಕರಿಸಿದ್ದಾರೆ. ಈ ಮೂಲಕ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆಯ ಮಾಜಿ ಸದಸ್ಯ ಸಂಜೀವ್ ಗುಪ್ತಾ ಅವರು ನೀಡಿದ್ದ ದೂರನ್ನು ಅಲ್ಲಗೆಳೆಯಲಾಗಿದೆ.
ರೋಜರ್ ಬಿನ್ನಿ ಅವರ ಪುತ್ರ ಸ್ಟುವರ್ಟ್ ಬಿನ್ನಿಯ ಪತ್ನಿ ಮಾಯಾಂತಿ ಲ್ಯಾಂಗರ್ ಬಿಸಿಸಿನಿಂದ ನೇರ ಪ್ರಸಾರದ ಹಕ್ಕುಗಳನ್ನು ಪಡೆದಿರುವ ಸ್ಟಾರ್ ಸ್ಪೋರ್ಟ್ಸ್ನಲ್ಲಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದು ಬಿಸಿಸಿಐನ ನೂತನ ಸಂವಿಧಾನದ ಪ್ರಕಾರ ಸ್ವಜನಪಕ್ಷಪಾತದ ಪ್ರಕರಣವಾಗಿರುತ್ತದೆ. ಹೀಗಾಗಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಕ್ಕೆ ಇಳಿಸಬೇಕು ಎಂಬುದಾಗಿ ಸಂಜಯ್ ಗುಪ್ತಾ ದೂರಿದ್ದರು.
ದೂರಿನ ವಿಚಾರಣೆ ನಡೆಸಿದ ನೈತಿಕ ಅಧಿಕಾರಿ ವಿನೀತ್ ಸರಣ್, 20 ಅಂಶಗಳ ವರದಿಯನ್ನು ಬಿಡುಗಡೆ ಮಾಡಿದೆ. ಅವರ ಪ್ರಕಾರ, ಮಾಯಾಂತಿ ಲ್ಯಾಂಗರ್ ಅವರು ಸ್ಟಾರ್ ಸ್ಪೋರ್ಟ್ಸ್ನ ಯಾವುದೇ ಮಾರುಕಟ್ಟೆ ವ್ಯವಹಾರಗಳನ್ನು ನಡೆಸುವುದಿಲ್ಲ. ಅವರು ಗುತ್ತಿಗೆ ಆಧಾರದಲ್ಲಿ ಚಾನೆಲ್ಗೆ ಕೆಲಸ ಮಾಡುತ್ತಿದ್ದಾರೆ. ಸ್ಟಾರ್ ಸ್ಪೋರ್ಟ್ಸ್ಗೆ ನ್ಯಾಯಬದ್ಧವಾಗಿಯೇ ಬಿಸಿಸಿಐ ಗುತ್ತಿಗೆಯನ್ನು ನೀಡಲಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ | Roger Binny | ಬಿಸಿಸಿಐ ಮೇಲೆ ಐಸಿಸಿಗೆ ಒಲವಿದೆ ಎನ್ನುವುದು ಶುದ್ಧ ಸುಳ್ಳು; ರೋಜರ್ ಬಿನ್ನಿ