ಮುಂಬಯಿ: ಪಾದದ ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿರುವ ಟೀಮ್ ಇಂಡಿಯಾದ ಅನುಭವಿ ವೇಗಿ ಮೊಹಮ್ಮದ್ ಶಮಿ(Mohammed Shami) ಅವರು ಜೂನ್ನಲ್ಲಿ ನಡೆಯಲಿರುವ ಪ್ರತಿಷ್ಠಿತ ಟಿ20 ವಿಶ್ವಕಪ್(T20 World Cup) ಟೂರ್ನಿಯಲ್ಲಿ ಆಡುವುದು ಅನುಮಾನ ಎಂಬ ಮಾತುಗಳು ಕೇಳಿ ಬಂದಿದೆ.
ಕಳೆದ ತಿಂಗಳು ಶಮಿ ಲಂಡನ್ನಲ್ಲಿ ಎಡಗಾಲಿನ ಹಿಮ್ಮಡಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಸದ್ಯ ಚೇತರಿಕೆಯ ಹಾದಿಯಲ್ಲಿರುವ ಅವರು ಐಪಿಎಲ್(IPL 2024) ಸೇರಿ ಟಿ20 ವಿಶ್ವಕಪ್ ಟೂರ್ನಿಯಿಂದಲೂ ಹೊರಗುಳಿಯಲಿದ್ದಾರೆ ಎನ್ನಲಾಗಿದೆ. ಶಮಿ ಗಾಯದ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ‘ಶಮಿ ಅವರಿಗೆ ಶಸ್ತ್ರಚಿಕಿತ್ಸೆ ಮುಗಿದಿದೆ. ಅವರು ಭಾರತಕ್ಕೆ ವಾಪಸಾಗಿದ್ದಾರೆ. ಈ ವರ್ಷದ ಕೊನೆಯಲ್ಲಿ ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯುವ ಟೆಸ್ಟ್ ಸರಣಿಗೆ ಪುನರಾಗಮನ ಮಾಡುವ ನಿರೀಕ್ಷೆಯಿದೆ ‘ ಎಂದು ಶಾ ಹೇಳಿದ್ದಾರೆ. ಭಾರತ ತಂಡವು ಮುಂದಿನ ಸೆಪ್ಟೆಂಬರ್‌ನಲ್ಲಿ ಬಾಂಗ್ಲಾದೇಶದ ವಿರುದ್ಧ ಎರಡು ಟೆಸ್ಟ್ ಮತ್ತು ಮೂರು ಟಿ20 ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.
ಇದನ್ನೂ ಓದಿ IPL 2024: ಡ್ರೆಸ್ಸಿಂಗ್ ರೂಮ್‌ನಲ್ಲಿ ಪೂಜೆ ಮಾಡಿ ಅಭ್ಯಾಸ ಆರಂಭಿಸಿದ ಮುಂಬೈ ನಾಯಕ ಹಾರ್ದಿಕ್ ಪಾಂಡ್ಯ
ಕಳೆದ ವರ್ಷ ಭಾರತದ ಆತಿಥ್ಯದಲ್ಲಿ ನಡೆದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಶಮಿ ಅವರು ತಮ್ಮ ಮೊನಚಾದ ಬೌಲಿಂಗ್ ದಾಳಿಯ ಮೂಲಕ ಟೂರ್ನಿಯಲ್ಲಿಯೇ ಅತ್ಯಧಿಕ ವಿಕೆಟ್ ಪಡೆದ ಬೌಲರ್ ಎನಿಸಿಕೊಂಡಿದ್ದರು. ಆಡಿದ 7 ಪಂದ್ಯಗಳಲ್ಲಿ 24 ವಿಕೆಟ್ ಉರುಳಿಸಿದ್ದರು. ಅವರ ಈ ಸಾಧನೆಯನ್ನು ಪರಿಗಣಿಸಿ ಅವರಿಗೆ ದೇಶದ ಎರಡನೇ ಅತ್ಯುನ್ನತ ಕ್ರೀಡಾ ಗೌರವವಾದ ಅರ್ಜುನ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ದೆಹಲಿಯ ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಮೊಹಮ್ಮದ್ ಶಮಿ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದರು.
ಮೊಹಮ್ಮದ್ ಶಮಿ ಭಾರತ ಪರ 64 ಟೆಸ್ಟ್ ಪಂದ್ಯಗಳಲ್ಲಿ 229 ವಿಕೆಟ್ ಪಡೆದಿದ್ದಾರೆ. 101 ಏಕದಿನ ಪಂದ್ಯಗಳಲ್ಲಿ 195 ವಿಕೆಟ್ ಪಡೆದಿದ್ದಾರೆ. 23 ಟಿ20 ಪಂದ್ಯಗಳಲ್ಲಿ 24 ವಿಕೆಟ್ ಪಡೆದಿದ್ದಾರೆ. ಸದ್ಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಟೆಸ್ಟ್ ಸರಣಿಯ ಮೊದಲೆರಡು ಪಂದ್ಯಗಳಿಂದ ಹೊರಗುಳಿದಿದ್ದ ಶಮಿ ಮೂರನೇ ಪಂದ್ಯಕ್ಕೆ ಲಭ್ಯರಾಗುವ ಸಾಧ್ಯತೆ ಇದೆ. ಏಕದಿನ ವಿಶ್ವಕಪ್ ಬಳಿಕ ಶಮಿ ಭಾರತ ಪರ ಯಾವುದೇ ಸರಣಿ ಆಡಿಲ್ಲ.
ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರಾ ಶಮಿ?
ಮೊಹಮ್ಮದ್ ಶಮಿ ಕೂಡ ಈ ಬಾರಿಯ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲಿದ್ದಾರೆ ಎಂದು ವರದಿಯಾಗಿದೆ. ಹೌದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಿಂದ ಮೊಹಮ್ಮದ್ ಶಮಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಆಲೋಚಿಸುತ್ತಿದೆ ಎಂದು ವರದಿಯಾಗಿದೆ. ಈ ಬಗ್ಗೆ ಮೂಲಗಳನ್ನು ಉದ್ದೇಶಿಸಿ ಇಂಡಿಯಾ ಟುಡೇ ವರದಿ ಮಾಡಿದೆ.
🛑🛑 Cricketer Mohammed Shami likely to join BJP.
— Naren Mukherjee – Modi Ka Parivar (@NMukherjee6) March 8, 2024
Likely to contest elections from Barasat, West Bengal. 😋😋👇 pic.twitter.com/0LJ09P1mYI
ವರದಿಗಳ ಪ್ರಕಾರ, ಲೋಕಸಭೆ ಚುನಾವಣೆಯಲ್ಲಿ ಶಮಿ ಅವರನ್ನು ಪಕ್ಷದ ಅಭ್ಯರ್ಥಿಯಾಗಿ ನಿಲ್ಲಿಸುವ ಪ್ರಸ್ತಾಪವನ್ನು ಭಾರತೀಯ ಜನತಾ ಪಕ್ಷದಲ್ಲಿ ಚರ್ಚಿಸಲಾಗಿದ್ದು, ಈಗಾಗಲೇ ಬಿಜೆಪಿಯ ಹಲವು ನಾಯಕರು ಮತ್ತು ಮುಖಂಡರು ಶಮಿಯನ್ನು ಸಂಪರ್ಕಿಸಿದ್ದಾರೆ ಎನ್ನಲಾಗಿದೆ. ಈ ಚರ್ಚೆ ಜೋರಾಗುತ್ತಿದ್ದಂತೆ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಶಮಿ ಅವರ ಭೇಟಿಯ ಫೋಟೊ ಒಂದು ವೈರಲ್ ಆಗಿದೆ. ಆದರೆ, ಶಮಿ ಈ ವಿಚಾರದಲ್ಲಿ ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ.