ಮೆಲ್ಬೋರ್ನ್: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ್ ಶಾ(Jay Shah) ಅವರು ಐಸಿಸಿಯ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ಮೆಲ್ಬೋರ್ನ್‌ನಲ್ಲಿ ಶನಿವಾರ ನಡೆದ ಐಸಿಸಿ ಆಡಳಿತ ಮಂಡಳಿ ಸಭೆಯಲ್ಲಿ ಜಯ್ ಶಾ ಅವರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಯಿತು.
ಏಕಕಾಲದಲ್ಲಿ ಮೂರು ಹುದ್ದೆ
ಜಯ್ ಶಾ ಐಸಿಸಿಯ ಹಣಕಾಸು ಮತ್ತು ವಾಣಿಜ್ಯ ವ್ಯವಹಾರಗಳ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆಯಾಗುವುದರೊಂದಿಗೆ ಏಕಕಾಲದಲ್ಲಿ ಮೂರು ಪ್ರಮುಖ ಹುದ್ದೆಗಳನ್ನು ನಿಭಾಯಿಸಿದ್ದಂತಾಗಿದೆ. ಈಗಾಗಲೇ ಅವರು ಬಿಸಿಸಿಐ ಕಾರ್ಯದರ್ಶಿ ಹುದ್ದೆಯ ಜತೆಗೆ ಏಷ್ಯಾ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಧ್ಯಕ್ಷರೂ ಆಗಿದ್ದಾರೆ. ಇದರೊಂದಿಗೆ ಜಯ್ ಶಾ ತಮ್ಮ ಅಧಿಕಾರದ ದರ್ಬಾರನ್ನು ಪ್ರಮುಖ ಕ್ರಿಕೆಟ್ ಮಂಡಳಿಗಳಲ್ಲಿ ಮುಂದುವರಿಸಿದ್ದಾರೆ.
ವಾಣಿಜ್ಯ ವ್ಯವಹಾರಗಳ ಸಮಿತಿಯ ಕೆಲಸವು ಎಲ್ಲ ಪ್ರಮುಖ ಹಣಕಾಸು ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಾಗಿದ್ದು, ಈ ಸಮಿತಿಯು ನಿರ್ಧಾರವನ್ನು ತೆಗೆದುಕೊಂಡ ಬಳಿಕವೇ, ಐಸಿಸಿ ಅದನ್ನು ಅನುಮೋದಿಸುತ್ತದೆ. ಜತೆಗೆ ಈ ಸಮಿತಿಯು ಸದಸ್ಯ ರಾಷ್ಟ್ರಗಳ ನಡುವೆ ಆದಾಯದ ಹಂಚಿಕೆಯನ್ನು ಸಹ ಒಳಗೊಂಡಿದೆ. ಅದರಂತೆ ಈ ಸಮಿತಿಯ ಮುಖ್ಯಸ್ಥರು ಐಸಿಸಿ ಮಂಡಳಿಯ ಸದಸ್ಯರು ಕೂಡ ಆಗಿರುತ್ತಾರೆ. ಈಗ ಜಯ್ ಶಾ ಅವರ ಆಯ್ಕೆಯೊಂದಿಗೆ ಅವರು ಐಸಿಸಿ ಮಂಡಳಿಯಲ್ಲಿ ಬಿಸಿಸಿಐ ಅನ್ನು ಪ್ರತಿನಿಧಿಸಲಿದ್ದಾರೆ.
ಇದನ್ನೂ ಓದಿ | PAK VS ENG | ಟಿ20 ವಿಶ್ವ ಕಪ್ ಫೈನಲ್ಗೆ ಮಳೆ ಭೀತಿ; ಪಂದ್ಯ ನಡೆಯದಿದ್ದರೆ ಏನು ಗತಿ?