Site icon Vistara News

BCCI Selection Committee | ಮತ್ತೆ ಟೀಮ್​ ಇಂಡಿಯಾ ಆಯ್ಕೆ ಸಮಿತಿಗೆ ಚೇತನ್​ ಶರ್ಮಾ ಸಾರಥ್ಯ!

chetan sharma

ಮುಂಬಯಿ: ಭಾರತ ಕ್ರಿಕೆಟ್​ ತಂಡದ ಹೊಸ ಆಯ್ಕೆ ಸಮಿತಿ ರಚನೆಗೆ ಬಿಸಿಸಿಐ(BCCI Selection Committee) ಸಿದ್ಧತೆ ನಡೆಸುತ್ತಿದೆ. ಈ ಮಧ್ಯೆ ಮಾಜಿ ಅಧ್ಯಕ್ಷ ಚೇತನ್​ ಶರ್ಮಾ ಅವರಿಗೆ ಮತ್ತೊಂದು ಅವಕಾಶ ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಟಿ20 ವಿಶ್ವ ಕಪ್​ನಲ್ಲಿ ಭಾರತ ಕಳಪೆ ಪ್ರದರ್ಶನ ತೋರಿದ ಕಾರಣ ಬಿಸಿಸಿಐ ಚೇತನ್​ ಶರ್ಮಾ ಸಾರಥ್ಯದ ಆಯ್ಕೆ ಸಮಿತಿಯನ್ನು ದಿಢೀರ್​ ಬರ್ಖಾಸ್ತು ಮಾಡಿತ್ತು.

ಚೇತನ್​ ಶರ್ಮಾ ಸಾರಥ್ಯದ ಆಯ್ಕೆ ಸಮಿತಿ ವಜಾಗೊಂಡ ಬಳಿಕ ಬಿಸಿಸಿಐ ತನ್ನ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ನೇಮಕವನ್ನು ಪ್ರಕಟಿಸಿತ್ತು. ಅದರಂತೆ ಅಶೋಕ್​ ಮಲ್ಹೋತ್ರಾ, ಜತಿನ್​ ಪರಾಂಜಪೆ ಹಾಗೂ ಮಾಜಿ ಮಹಿಳಾ ಆಟಗಾರ್ತಿ ಸುಲಕ್ಷಣ ನಾಯಕ್ ಅವರನ್ನು ನೂತನ ಸದಸ್ಯರನ್ನಾಗಿ ಆಯ್ಕೆಮಾಡಿ ಆಯ್ಕೆ ಮಂಡಳಿಗೆ ಹೊಸ ಸದಸ್ಯರನ್ನು ನೇಮಕ ಮಾಡುವ ಜವಾಬ್ದಾರಿಯನ್ನು ನೀಡಿತ್ತು.

ಅದರಂತೆ ಸಿಎಸಿ, ಬಿಸಿಸಿಐ ಕಚೇರಿಯಲ್ಲಿ ಹೊಸ ಆಯ್ಕೆ ಸಮಿತಿಗೆ ಸಲ್ಲಿಸಲಾದ ಅರ್ಜಿಗಳನ್ನು ಶಾರ್ಟ್​ಲೀಸ್ಟ್​ ಮಾಡಿದ್ದು ಶೀಘ್ರದಲ್ಲೇ ಅಂತಿಮ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಈ ಮಧ್ಯೆ ಚೇತನ್​ ಶರ್ಮಾ ಮತ್ತೊಂದು ಅವಧಿಗೆ ಆಯ್ಕೆ ಸಮಿತಿಯ ಮುಖ್ಯಸ್ಥರಾಗಲಿದ್ದಾರೆ ಎಂದು ವರದಿಯಾಗಿದೆ. ಆದರೆ ಈ ಬಗ್ಗೆ ಬಿಸಿಸಿಐ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.

ಹೊಸ ವರ್ಷದಂದು ನಡೆದ ಬಿಸಿಸಿಐ ಸಭೆಗೂ ಚೇತನ್​ ಶರ್ಮಾ ಅವರನ್ನು ಬಿಸಿಸಿಐ ಆಹ್ವಾನಿಸಲಾಗಿತ್ತು. ಇದೆಲ್ಲವನ್ನು ಗಮನಿಸುವಾಗ ಅವರನ್ನು ಮತ್ತೆ ಆಯ್ಕೆ ಸಮಿತಿಯ ಮುಖ್ಯಸ್ಥರನ್ನಾಗಿ ಮುಂದುವರಿಸುವ ಸಾಧ್ಯತೆ ಇದೆ. ಆದರೆ ಉಳಿದ ಸದಸ್ಯರನ್ನು ನೂತನವಾಗಿ ನೇಮಕ ಮಾಡಲು ಬಿಸಿಸಿಐ ನಿರ್ಧರಿಸಿದೆ ಎಂದು ಮೇಲ್ನೋಟಕ್ಕೆ ತಿಳಿದು ಬಂದಿದೆ.

ಮಾನದಂಡಗಳೇನು?

ಆಯ್ಕೆ ಸಮಿತಿಗೆ ಮುಖ್ಯಸ್ಥರಾಗಲು ಅಥವಾ ಸಮಿತಿಯಲ್ಲಿ ಸ್ಥಾನ ಪಡೆಯಲು ಇಚ್ಚಿಸುವವರು ಟೀಮ್​ ಇಂಡಿಯಾದ ಮಾಜಿ ಆಟಗಾರನಾಗಿರಬೇಕು. ಜತೆಗೆ ಕನಿಷ್ಠ 7 ಟೆಸ್ಟ್​ ಪಂದ್ಯ ಅಥವಾ 30 ಪ್ರಥಮ ದರ್ಜೆ ಪಂದ್ಯವನ್ನಾಡಿರಬೇಕು. ಒಂದೊಮ್ಮೆ ಈ ಅರ್ಹತೆ ಸಾಧಿಸದಿದ್ದರೆ ಕನಿಷ್ಠ 10 ಏಕ ದಿನ ಅಥವಾ 20 ಪ್ರಥಮ ದರ್ಜೆ ಪಂದ್ಯವನ್ನಾಡಿರಬೇಕು. ಉಳಿದಂತೆ 5 ವರ್ಷಗಳ ಹಿಂದೆ ಕ್ರಿಕೆಟ್​ನಿಂದ ನಿವೃತ್ತಿ ಹೊಂದಿರಬೇಕು ಹಾಗೂ 5ಗಳ ಕಾಲ ಯಾವುದೇ ಕ್ರಿಕೆಟ್​ ಸಮಿತಿಯ ಸದಸ್ಯರಾಗಿರಬಾರದು.

ಇದನ್ನೂ ಓದಿ | BCCI Review Meeting | ಏಕ ದಿನ ವಿಶ್ವ ಕಪ್​ಗೆ ತಂಡದ ರಚನೆ, ಒತ್ತಡದ ನಿರ್ವಹಣೆಗೆ ಆದ್ಯತೆ

Exit mobile version