ನವದೆಹಲಿ: ಖಾಸಗಿ ವಾಹಿನಿಯೊಂದು ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಟೀಮ್ ಇಂಡಿಯಾದ ಕುರಿತು ಹಲವು ಆಘಾತಕಾರಿ ವಿಚಾರಗಳನ್ನು ಬಹಿರಂಗಪಡಿಸಿದ ಚೇತನ್ ಶರ್ಮಾ(Chetan Sharma) ಭಾರತ ಕ್ರಿಕೆಟ್ ತಂಡದ ಮುಖ್ಯ ಆಯ್ಕೆಗಾರ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದಾರೆ. ಇದೀಗ ಈ ಸ್ಥಾನಕ್ಕೆ ಶಿವಸುಂದರ್ ದಾಸ್ ಮತ್ತು ವೆಂಕಟೇಶ್ ಪ್ರಸಾದ್ ಹೆಸರು ಕೇಳಿಬಂದಿದೆ.
ಸದ್ಯ ಬಿಸಿಸಿಐ ಆಯ್ಕೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ಘಟಾನುಘಟಿ ಮಾಜಿ ಆಟಗಾರರ ಹೆಸರು ಕೇಳಿಬಂದಿದ್ದರೂ ಕನ್ನಡಿಗ ಹಾಗೂ ಟೀಮ್ ಇಂಡಿಯಾ ಮಾಜಿ ಆಟಗಾರ ವೆಂಕಟೇಶ್ ಪ್ರಸಾದ್ ಅಥವಾ ಶಿವಸುಂದರ್ ದಾಸ್ ಹೆಸರು ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ.
ಈ ಹಿಂದೆ ಟಿ20 ವಿಶ್ವ ಕಪ್ ಮತ್ತು ಏಷ್ಯಾಕಪ್ನಲ್ಲಿ ಭಾರತ ತಂಡ ನಿರಾಶಾದಾಯಕ ಪ್ರದರ್ಶನ ನೀಡಿದ ಕಾರಣ ತಲೆದಂಡವಾಗಿ ಬಿಸಿಸಿಐ(BCCI ) ಚೇತನ್ ಶರ್ಮಾ ಅವರನ್ನು ಆಯ್ಕೆ ಮಂಡಳಿಯ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಿತ್ತು. ಈ ಸಮಯದಲ್ಲಿಯೂ ಉಭಯ ಆಟಗಾರರ ಹೆಸರು ಕೇಳಿಬಂದಿತ್ತು. ಆದರೆ ಬಿಸಿಸಿಐ ಮತ್ತೆ ಚೇತನ್ ಶರ್ಮಾ ಅವರಿಗೆ ಅಧ್ಯಕ್ಷ ಸ್ಥಾನ ನೀಡಿ ಅಚ್ಚರಿ ಮೂಡಿಸಿತ್ತು. ಇದೀಗ ಮತ್ತೆ ಇವರ ಹೆಸರು ಕೇಳಿ ಬಂದಿದೆ.
ಬಿಸಿಸಿಐ ಮೂಲಗಳ ಪ್ರಕಾರ ಶಿವಸುಂದರ್ ದಾಸ್ ಅವರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಳ್ಳುವುದು ಖಚಿತ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಬಿಸಿಸಿಐ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.
ಒಂದು ವೇಳೆ ಆಯ್ಕೆ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ವೆಂಕಟೇಶ್ ಪ್ರಸಾದ್ ಆಯ್ಕೆಯಾದರೆ ಟೀಮ್ ಇಂಡಿಯಾದಲ್ಲಿ ಮೇಜರ್ ಸರ್ಜರಿ ಆಗುವುದು ನಿಶ್ಚಿತ. ಏಕೆಂದರೆ ಕಳಪೆ ಬ್ಯಾಟಿಂಗ್ ಪ್ರದರ್ಶನ ತೋರುತ್ತಿರುವ ಕೆ.ಎಲ್ ರಾಹುಲ್ ಬಗ್ಗೆ ಕೆಲ ದಿನಗಳ ಹಿಂದೆ ಕಿಡಿಕಾರಿದ್ದರು.
ಇದನ್ನೂ ಓದಿ Chetan Sharma resign: ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿಯ ಮುಖ್ಯಸ್ಥನ ಸ್ಥಾನಕ್ಕೆ ಚೇತನ್ ಶರ್ಮಾ ರಾಜೀನಾಮೆ
ಎಂಟು ವರ್ಷ ಅಂತಾರಾಷ್ಟ್ರೀಯ ಪಂದ್ಯ ಆಡಿದ ಹೊರತಾಗಿಯೂ ಇಷ್ಟೊಂದು ಕಳಪೆ ಪ್ರದರ್ಶನ ನೀಡುವುದು ಸರಿಯಲ್ಲ. ಅಶ್ವಿನ್ ಅವರಂಥ ನುರಿತ ಆಟಗಾರ ಇರುವ ಹೊರತಾಗಿಯೂ ರಾಹುಲ್ಗೆ ಟೆಸ್ಟ್ ತಂಡದಲ್ಲಿ ಉಪನಾಯಕನ ಸ್ಥಾನ ನೀಡಿರುವ ಕ್ರಮವನ್ನು ಪ್ರಶ್ನಿಸಿ ಸರಣಿ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಅವರು ಒಂದೊಮ್ಮೆ ಆಯ್ಕೆ ಸಮಿತಿ ಮುಖ್ಯಸ್ಥನಾದರೆ ರಾಹುಲ್ಗೆ ಕಂಟಕವೊಂದು ಕಾದಿದೆ ಎನ್ನಬಹುದು.