ಬೆಂಗಳೂರು : ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಹಾಗೂ ಇನ್ನಿತರ ದೇಶಿ ಕ್ರಿಕೆಟ್‌ನಲ್ಲಿ ಹೊಸ ನಿಯಮವೊಂದನ್ನು ಬಿಸಿಸಿಐ ಜಾರಿಗೆ ಮಾಡಿದೆ. ಅದಕ್ಕೆ ಇಂಪ್ಯಾಕ್ಟ್ ಪ್ಲೇಯರ್ (Impact Player) ಎಂದು ಹೆಸರಿಡಲಾಗಿದೆ. ಮುಂದಿನ ಆವೃತ್ತಿಯ ಐಪಿಎಲ್‌ಗೂ ಈ ನಿಯಮ ಜಾರಿಗೆ ಬರುವ ಸಾಧ್ಯತೆಗಳಿವೆ. ಕ್ರಿಕೆಟ್‌ಗೆ ಇದು ಹೊಸ ನಿಯಮವಾಗಿದ್ದರೂ ಫುಟ್ಬಾಲ್, ರಗ್ಬಿ, ಬಾಸ್ಕೆಟ್‌ಬಾಲ್ ಹಾಗೂ ರಗ್ಬಿಯಲ್ಲಿ ಈ ನಿಯಮ ಈಗಾಗಲೇ ಜಾರಿಯಲ್ಲಿದೆ.
ಪಂದ್ಯದ ನಡುವೆ ಆಟಗಾರರನೊಬ್ಬನನ್ನು ಬದಲಾಯಿಸಲು ನೀಡುವ ಅವಕಾಶವೇ ಈ ಇಂಪ್ಯಾಕ್ಟ್ ಪ್ಲೇಯರ್ ನಿಯಮ. ಪಂದ್ಯದ ನಡುವೆ, ಪಿಚ್ ಪರಿಸ್ಥಿತಿ ಅಥವಾ ಪಂದ್ಯದ ಪರಿಸ್ಥಿತಿಗೆ ಪೂರಕವಾಗಿ ಆಟಗಾರನೊಬ್ಬನನ್ನು ಬದಲಾಯಿಸಲು ತಂಡದ ನಾಯಕನಿಗೆ ಅವಕಾಶ ಕೊಡಲಾಗುತ್ತದೆ. ಕ್ರಿಕೆಟ್‌ಗೆ ಇದು ಹೊಸದಲ್ಲ. ೨೦೦೫ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಸೂಪರ್ ಸಬ್ ಎಂಬ ಈ ನಿಯಮವನ್ನು ಜಾರಿಗೆ ತಂದಿತ್ತು. ಆದರೆ, ಒಂದೇ ವರ್ಷದಲ್ಲಿ ಅದನ್ನು ವಾಪಸ್ ಪಡೆದುಕೊಂಡಿತ್ತು. ಇದೀಗ ಬಿಸಿಸಿಐ ಹೊಸ ರೂಪದಲ್ಲಿ ಅದನ್ನು ಮರು ಚಾಲನೆಗೆ ತರುತ್ತಿದೆ.
ನಿಯಮದ ಬಳಕೆ ಹೇಗೆ?
ನಿಯಮದ ಪ್ರಕಾರ ಟಾಸ್ ವೇಳೆಯಲ್ಲಿ ಆಡುವ ೧೧ ಆಟಗಾರರ ಹೆಸರಿನ ಜತೆಗೆ ೪ ಇಂಪ್ಯಾಕ್ಟ್ ಪ್ಲೇಯರ್‌ಗಳ ಹೆಸರನ್ನೂ ಕೊಡಬೇಕಾಗುತ್ತದೆ. ಪಂದ್ಯ ಆರಂಭಗೊಂಡ ನಂತರ ಈ ನಾಲ್ಕು ಆಟಗಾರರಲ್ಲಿ ಯಾರನ್ನಾದರೂ ಪಂದ್ಯದ ಅಗತ್ಯಕ್ಕೆ ತಕ್ಕ ಹಾಗೆ ಬದಲಿಸಿಕೊಳ್ಳಬಹುದು. ಆದರೆ, ಟಿ೨೦ ಮಾದರಿಯಾಗಿರುವ ಕಾರಣ ೧೪ ಓವರ್‌ಗಳು ಮುಕ್ತಾಯಗೊಳ್ಳುವ ಮೊದಲು ಬದಲಿ ಆಟಗಾರನ್ನು ತಂಡಕ್ಕೆ ಸೇರಿಸಿಕೊಳ್ಳಬೇಕು. ಈ ವೇಳೆ ಒಬ್ಬ ಆಟಗಾರ ಹೊರಕ್ಕೆ ಹೋಗಬೇಕಾಗುತ್ತದೆ. ಆದರೆ ಆ ಆಟಗಾರ ಯಾವುದೇ ಕಾರಣಕ್ಕೆ ಮತ್ತೆ ತಂಡಕ್ಕೆ ಸೇರಲು ಸಾಧ್ಯವಾಗುವುದಿಲ್ಲ. ಸಬ್‌ಸ್ಟಿಟ್ಯೂಟ್ ಫೀಲ್ಡರ್ ಆಗಿಯೂ ಮೈದಾನಕ್ಕೆ ಇಳಿಯುವಂತಿರುವುದಿಲ್ಲ. ಅಂತೆಯೇ ಓವರ್‌ನ ಮಧ್ಯದಲ್ಲಿ ಬದಲಿ ಆಟಗಾರನನ್ನು ಕಣಕ್ಕೆ ಇಳಿಸುವುದೂ ಸಾಧ್ಯವಿಲ್ಲ. ಓವರ್ ಮುಕ್ತಾಯಗೊಂಡ ಬಳಿಕ ಅಥವಾ ಇನಿಂಗ್ಸ್ ಮುಗಿದ ಬಳಿಕ ಆಡಲು ಇಳಿಯಬೇಕು.
ಬ್ಯಾಟಿಂಗ್ ತಂಡವು ವಿಕೆಟ್ ಪತನದ ಸಮಯದಲ್ಲಿ ಅಥವಾ ಇನಿಂಗ್ಸ್ ಬ್ರೇಕ್ ವೇಳೆ ಬದಲಿ ಆಟಗಾರನನ್ನು ಕಣಕ್ಕೆ ಇಳಿಸಬಹುದು. ಫೀಲ್ಡಿಂಗ್ ಮಾಡುವ ತಂಡವಾದರೆ ಓವರ್ ಪೂರ್ಣಗೊಂಡ ಬಳಿಕ ಕಣಕ್ಕಿಳಿಸಬೇಕಾಗುತ್ತದೆ. ಹೊರಕ್ಕೆ ಹೋಗುವ ಆಟಗಾರ ಒಂದಕ್ಕಿಂತ ಹೆಚ್ಚು ಓವರ್‌ಗಳನ್ನು ಎಸೆಯದಿದ್ದರೆ, ಕಣಕ್ಕೆ ಇಳಿಯುವ ಆಟಗಾರನಿಗೆ ಪೂರ್ಣ ಸ್ಪೆಲ್ ಬೌಲಿಂಗ್ ಮಾಡಬಹುದು. ಮಳೆ ಅಥವಾ ಇನ್ಯಾವುದೇ ಕಾರಣಕ್ಕೆ ಪಂದ್ಯದ ಓವರ್‌ಗಳು ಕಡಿತಗೊಂಡರೆ ಇಂಪ್ಯಾಕ್ಟ್ ಪ್ಲೇಯರ್ ನಿಯಮ ಅನ್ವಯವಾಗುವುದಿಲ್ಲ.
ಅಕ್ಟೋಬರ್‌ನಲ್ಲಿ ದೇಶಿಯ ಋತುವಿನ ಸೈಯದ್ ಮುಷ್ತಾಕ್ ಅಲಿ ಟಿ೨೦ ಸರಣಿಯ ನಡೆಯಲಿದೆ. ಅದರಲ್ಲಿ ಈ ಇಂಪ್ಯಾಕ್ಟ್ ಪ್ಲೇಯರ್ ಅವಕಾಶ ದೊರೆಯಲಿದೆ. ಅದು ಯಶಸ್ವಿಯಾದರೆ ಐಪಿಎಲ್‌ಗೂ ಅನ್ವಯವಾಗಬಹುದು.
ಇದನ್ನೂ ಓದಿ | BCCI | ಸಂಜು ಸ್ಯಾಮ್ಸನ್ ಪರ ಅಭಿಯಾನದ ನಡುವೆ ನಾಯಕನ ಪಟ್ಟ ಕಟ್ಟಿದ ಬಿಸಿಸಿಐ