ಮುಂಬಯಿ : ಮಹಿಳೆಯರ ಇಂಡಿಯನ್ ಪ್ರೀಮಿಯರ್ ಲೀಗ್ (Women’s IPL) ೨೦೨೩ರಿಂದ ಆಯೋಜಿಸುವುದಾಗಿ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಅವರು ವರ್ಷಾರಂಭದಲ್ಲಿ ವಾಗ್ದಾನ ನೀಡಿದ್ದರು. ಬಿಸಿಸಿಐ ಕೂಡ ಈ ನಿಟ್ಟಿನಲ್ಲಿ ಸಕಲ ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದ್ದು, ಮುಂದಿನ ವರ್ಷ ಆರು ತಂಡಗಳನ್ನು ಒಳಗೊಂಡಿರುವ ಮಹಿಳೆಯರ ಐಪಿಎಲ್ ನಡೆಯುವುದು ಬಹುತೇಕ ಖಚಿತ. ಆದರೆ, ಕ್ರಿಕೆಟ್ ಋತುವಿನಲ್ಲಿ ಐಪಿಎಲ್‌ಗೆ ಜಾಗ ಮೀಸಲಿಡುವ ಉದ್ದೇಶದಿಂದ ಈ ಬಾರಿ ದೇಶಿ ಟೂರ್ನಿಗಳನ್ನು ನಿಗದಿತ ಅವಧಿಗಿಂತ ಬೇಗ ಆರಂಭಿಸಿ ಬೇಗ ಮುಕ್ತಾಯಗೊಳಿಸಲು ಬಿಸಿಸಿಐ ಚಿಂತನೆ ನಡೆಸಿದೆ.
ಪ್ರತಿ ವರ್ಷ ಮಹಿಳೆಯರ ದೇಶೀಯ ಕ್ರಿಕೆಟ್ ಪಂದ್ಯಗಳ ನವೆಂಬರ್‌ನಲ್ಲಿ ಆರಂಭಗೊಂಡು, ಏಪ್ರಿಲ್‌ನಲ್ಲಿ ಮುಕ್ತಾಯಗೊಳ್ಳುತ್ತದೆ. ಆದರೆ, ಈ ಬಾರಿ ಅಕ್ಟೋಬರ್ ಮೊದಲ ವಾರದಲ್ಲಿ ಆರಂಭಗೊಂಡು, ೨೦೨೩ರ ಫೆಬ್ರವರಿ ಅಂತ್ಯಕ್ಕೆ ಮುಗಿಸುವುದು ಬಿಸಿಸಿಐ ಯೋಜನೆಯಾಗಿದೆ. ಇದರಲ್ಲಿ ಅಂತರ್‌ವಲಯ ಸೇರಿದಂತೆ ನಾನಾ ಕ್ರಿಕೆಟ್ ಟೂರ್ನಿಗಳು ನಡೆಯಲಿವೆ.
ಮಹಿಳೆಯರ ಐಪಿಎಲ್‌ಗೆ ಚಾಲನೆ
೨೦೧೮ರಿಂದ ಬಿಸಿಸಿಐ ಮಹಿಳೆಯರ ಟಿ೨೦ ಚಾಲೆಂಜ್ ಆಯೋಜಿಸುತ್ತಿದೆ. ಆರಂಭದ ವರ್ಷ ಎರಡು ತಂಡಗಳ ನಡುವೆ ಪಂದ್ಯ ನಡೆದಿದ್ದರೆ, ಈಗ ಮೂರು ತಂಡಗಳ ಸರಣಿ ನಡೆಯುತ್ತಿದೆ. ವಿದೇಶಿ ಆಟಗಾರ್ತಿಯರೂ ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದರೆ, ಹೆಚ್ಚು ತಂಡಗಳ ಜತೆ ಇನ್ನಷ್ಟು ಜನಪ್ರಿಯ ಪೂರ್ಣ ಪ್ರಮಾಣದ ಐಪಿಎಲ್ ಆಯೋಜಿಸುವುದು ಬಿಸಿಸಿಐ ಯೋಜನೆಯಾಗಿದ್ದು ೨೦೨೩ರಿಂದ ಅದನ್ನು ಆರಂಭಿಸುವುದಾಗಿ ಮಾತು ಕೊಟ್ಟಿದೆ.