Site icon Vistara News

BCCI Succession Plan | ಟಿ20 ತಂಡದಿಂದ ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿಗೆ ಕೊಕ್​ ಸಾಧ್ಯತೆ!

rohit sharma and virat kohli

ನವದೆಹಲಿ: ಯುವ ಆಟಗಾರರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ಭಾರತ ಟಿ20 ತಂಡದಿಂದ ರೋಹಿತ್ ಶರ್ಮಾ, ವಿರಾಟ್‌ ಕೊಹ್ಲಿ ಸೇರಿದಂತೆ ಹಲವು ಹಿರಿಯ ಆಟಗಾರಿಗೆ ಕೊಕ್​ ನೀಡಲಾಗುವುದು ಎಂದು ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ(BCCI Succession Plan) ಮೂಲಗಳು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.

“ಮುಂದಿನ ವರ್ಷ 2023ರ ಏಕ ದಿನ ವಿಶ್ವ ಕಪ್‌ ಟೂರ್ನಿ ಹಾಗೂ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಪ್ರಮುಖ ಪಂದ್ಯಗಳು ನಡೆಯಲಿವೆ. ಈ ಹಿನ್ನೆಲೆಯಲ್ಲಿ ಈ ಎರಡೂ ಮಹತ್ವದ ಟೂರ್ನಿಗಳಿಗೆ ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಆರ್‌. ಅಶ್ವಿನ್‌ ಸೇರಿದಂತೆ ಹಿರಿಯ ಆಟಗಾರರು ಹೆಚ್ಚಿನ ಗಮನಹರಿಸಬೇಕಿದೆ. ಆದ್ದರಿಂದ ಮುಂದಿನ ವರ್ಷ ಭಾರತದ ಟಿ20 ತಂಡದಲ್ಲಿ ಹಿರಿಯ ಆಟಗಾರರು ಕಾಣಿಸಿಕೊಳ್ಳುವುದಿಲ್ಲ” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

“ಟಿ20 ಕ್ರಿಕೆಟ್‌ ವೃತ್ತಿ ಜೀವನಕ್ಕೆ ವಿದಾಯ ಹೇಳುವಂತೆ ಬಿಸಿಸಿಐ ಎಂದಿಗೂ ಯಾವ ಆಟಗಾರರನ್ನು ಕೇಳುವುದಿಲ್ಲ. ಇದು ಅವರವರ ವೈಯಕ್ತಿಕ ನಿರ್ಧಾರ. ಆದರೆ ಮುಂದಿನ ವರ್ಷ ನಡೆಯಲಿರುವ ಟಿ20 ಸರಣಿಯಲ್ಲಿ ಬಹುತೇಕ ಹಿರಿಯ ಆಟಗಾರರನ್ನು ನೋಡಲು ಸಾಧ್ಯವಿಲ್ಲ” ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಈಗಾಗಲೇ ಬಿಸಿಸಿಐ ಕಳೆದ ಟಿ20 ವಿಶ್ವ ಕಪ್​ ಸೋಲಿನ ಬಳಿಕ ಕೆಲ ಮಹತ್ವದ ಬದಲಾವಣೆಯನ್ನು ಮಾಡಿದ್ದು ಅದರಂತೆ ಚೇತನ್​ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ವಜಾಗೊಳಿಸಿತ್ತು. ಇದೀಗ 2024ರಲ್ಲಿ ವೆಸ್ಟ್ ಇಂಡೀಸ್‌ ಹಾಗೂ ಅಮೆರಿಕ ರಾಷ್ಟ್ರಗಳ ಜಂಟಿ ಆತಿಥ್ಯದಲ್ಲಿದಲ್ಲಿ ನಡೆಯುವ ಟಿ20 ವಿಶ್ವ ಕಪ್‌ ಟೂರ್ನಿಗೆ ತಂಡವನ್ನು ರಚಿಸುವ ನಿಟ್ಟಿನಲ್ಲಿ ನ್ಯೂಜಿಲ್ಯಾಂಡ್​ ವಿರುದ್ಧದ ಸರಣಿಗೆ ಸಂಪೂರ್ಣ ಯುವ ಆಟಗಾರರನ್ನು ಆಯ್ಕೆ ಮಾಡಿ ಯಶಸ್ಸು ಕಂಡಿದೆ. ಈ ಸರಣಿಗೆ ನಾಯಕತ್ವ ವಹಿಸಿದ ಹಾರ್ದಿಕ್​ ಪಾಂಡ್ಯ ಅವರನ್ನೇ ನಾಯಕತ್ವದಲ್ಲಿ ಮುಂದುವರಿಸಲು ಬಿಸಿಸಿಐ ಚಿಂತನೆ ನಡೆಸುತ್ತಿದೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದನ್ನೂ ಓದಿ | IND VS NZ | ಭಾರತ ಮತ್ತು ಕಿವೀಸ್​ ವಿರುದ್ಧದ ಅಂತಿಮ ಪಂದ್ಯದ ಪಿಚ್​ ರಿಪೋರ್ಟ್​, ಹವಾಮಾನ ವರದಿ ಹೇಗಿದೆ?

Exit mobile version