Site icon Vistara News

BCCI: ವನಿತೆಯರ ರೆಡ್‌ ಬಾಲ್ ಕ್ರಿಕೆಟ್‌ ಟೂರ್ನಿ ನಡೆಸಲು ಮುಂದಾದ ಬಿಸಿಸಿಐ

BCCI

ಮುಂಬಯಿ: ಭಾರತದಲ್ಲಿ ಸದ್ಯ ಮಹಿಳಾ ಕ್ರಿಕೆಟ್ ಕೂಡಾ ಹೆಚ್ಚಿನ ಮಹತ್ವ ಪಡೆಯುತ್ತಿದೆ. ಪುರುಷರ ಕ್ರಿಕೆಟ್​ನಂತೆ ಮಹಿಳಾ ಕ್ರಿಕೆಟ್​ಗೂ ಹೆಚ್ಚಿನ ಅವಕಾಶ ನೀಡುವ ಸಲುವಾಗಿ ಮಹಿಳಾ ಕ್ರಿಕೆಟ್​ ಲೀಗ್​ ಮತ್ತು ಮಹಿಳಾ ಕ್ರಿಕೆಟಿಗರಿಗೂ ಪುರುಷರಂತೆ ಸಮಾನವಾದ ವೇತನವನ್ನು ಈಗಾಗಲೇ ಬಿಸಿಸಿಐ(BCCI) ಜಾರಿಗೆ ತಂದಿರುವುದು ನಿಮಗೆ ಗೊತ್ತೆ ಇದೆ. ಅದೇ ರೀತಿ ಇದೀಗ ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದೆ.

ಪುರುಷರ ದೇಶಿಯ ಕ್ರಿಕೆಟ್‌ ಮಾದರಿಯಲ್ಲೇ ವನಿತೆಯರಿಗೂ ರೆಡ್‌ ಬಾಲ್‌ ಕ್ರಿಕೆಟ್‌(Women’s Red-Ball Tournament) ಪಂದ್ಯವನ್ನು ನಡೆಸಲು ಬಿಸಿಸಿಐ ಮುಂದಾಗಿದೆ. ಇದಕ್ಕಾಗಿ ಮಾರ್ಚ್ 28ರಿಂದ ಸೀನಿಯರ್ ಇಂಟರ್ ಜೋನಲ್ ಮಲ್ಟಿ-ಡೇ ಟ್ರೋಫಿಯನ್ನು (Senior Inter Zonal Multi Day Trophy) ನಡೆಸಲು ನಿರ್ಧರಿಸಲಾಗಿದೆ.

ಈ ಹಿಂದೆ ಮಹಿಳಾ ಕ್ರಿಕೆಟಿಗರಿಗೆ ಪುರುಷರಿಗಿಂತ ಕಡಿಮೆ ವೇತನ ಸಿಗುತ್ತಿತ್ತು. ಈ ತಾರತಮ್ಯವನ್ನು ಹೋಗಲಾಡಿಸಲು ಬಿಸಿಸಿಐ 2022ರಲ್ಲಿ ಪ್ರಮುಖ ನಿರ್ಧರವೊಂದನ್ನು ಕೈಗೊಂಡಿತ್ತು. ಗುತ್ತಿಗೆಯಲ್ಲಿರುವ ಆಟಗಾರರಿಗೆ ಸಮಾನ ಮ್ಯಾಚ್ ಫೀಸ್ ನೀಡಲು ನಿರ್ಧರಿಸಿತ್ತು. ಅದರಂತೆ ಈಗ ಮಹಿಳಾ ಕ್ರಿಕೆಟಿಗರಿಗೆ ಪುರುಷರಿಗೆ ಸಮಾನವಾದ ಪಂದ್ಯ ಶುಲ್ಕವನ್ನು ನೀಡಲಾಗುತ್ತದೆ. ಟೆಸ್ಟ್​ನಲ್ಲಿ ಪ್ರತಿ ಪಂದ್ಯಕ್ಕೆ 15 ಲಕ್ಷ ರೂ., ಪ್ರತಿ ಏಕದಿನ ಪಂದ್ಯಕ್ಕೆ 6 ಲಕ್ಷ ರೂ., ಟಿ20 ಅಂತಾರಾಷ್ಟ್ರೀಯ ಪಂದ್ಯಕ್ಕೆ 3 ಲಕ್ಷ ರೂ ನೀಡಲಾಗುತ್ತದೆ.

ಇದೀಗ ಮಹಿಳೆಯರಿಗೂ ದೇಶೀಯ ಕ್ರಿಕೆಟ್​ ಟೂರ್ನಿಯನ್ನು ಏರ್ಪಡಿಸಿ ಈ ಮೂಲಕ ಮಹಿಳಾ ಕ್ರಿಕೆಟ್​ನ ಶ್ರೇಯಕ್ಕಾಗಿ ಬಿಸಿಸಿಐ ಪಣತೊಟ್ಟಿದೆ. ಪುಣೆಯಲ್ಲಿ ಪಂದ್ಯಗಳನ್ನು ನಡೆಸಲು ಅಂತಿಮ ಸಿದ್ಧತೆ ನಡೆದಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ. ಬಿಸಿಸಿಐ ತೆಗೆದುಕೊಂಡ ಈ ನಿರ್ಧಾರಕ್ಕೆ ಅನೇಕ ಮಹಿಳಾ ಮತ್ತು ಪುರುಷ ಕ್ರಿಕೆಟಿಗರು ಸ್ವಾಗತಿಸಿದ್ದಾರೆ.

ಇದನ್ನೂ ಓದಿ WPL 2024: ಮೈದಾನಕ್ಕೆ ನುಗ್ಗಿ ಪಂದ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯ ಬಂಧನ

ಮಹಾರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಈ ಪಂದ್ಯಾವಳಿಗೆ ಆತಿಥ್ಯ ವಹಿಸಲಿದೆ. ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಮಧ್ಯ ಮತ್ತು ಈಶಾನ್ಯ ವಲಯಗಳನ್ನು ಪ್ರತಿನಿಧಿಸುವ ಆರು ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ತಲಾ ಮೂರು ದಿನಗಳ ಐದು ಪಂದ್ಯಗಳ ಸರಣಿಯಲ್ಲಿ ತಂಡಗಳು ಸ್ಪರ್ಧಿಸಲಿವೆ.

ಪ್ರಸಕ್ತ ಸಾಗುತ್ತಿಡುವ 2ನೇ ಆವೃತ್ತಿಯ ಡಬ್ಲ್ಯುಪಿಎಲ್​ ಟೂರ್ನಿ ಮುಕ್ತಾಯದ ಬಳಿಕ ರೆಡ್‌ ಬಾಲ್‌ ಪಂದ್ಯಾವಳಿ ಪ್ರಾರಂಭವಾಗಲಿದೆ. ಮಾರ್ಚ್ 28ರಂದು ಪೂರ್ವ ವಲಯ ಮತ್ತು ಈಶಾನ್ಯ ವಲಯ, ಪಶ್ಚಿಮ ವಲಯ ಮತ್ತು ಕೇಂದ್ರ ವಲಯಗಳ ನಡುವೆ ಕ್ವಾರ್ಟರ್ ಫೈನಲ್ ಪಂದ್ಯಗಳು ಆರಂಭವಾಗಲಿವೆ. ಏಪ್ರಿಲ್ 3ರಂದು ಸೆಮಿಫೈನಲ್ ಪಂದ್ಯಗಳು, ಫೈನಲ್ ಪಂದ್ಯ ಏಪ್ರಿಲ್ 9ರಂದು ನಡೆಯಲಿದೆ.

Exit mobile version