ಮುಂಬಯಿ: ಭಾರತೀಯ ಕ್ರಿಕೆಟ್ ಮಂಡಳಿ(ಬಿಸಿಸಿಐ) ಆಟಗಾರರ ಮೇಲೆ ಹಲವು ನಿರ್ಬಂಧಗಳನ್ನು ಪಾಲಿಸುತ್ತಿದೆ. ಅದರಂತೆ ಬಿಸಿಸಿಐ ಅನುಮತಿ ಇಲ್ಲದೆ ಯಾವುದೇ ವಿದೇಶಿ ಲೀಗ್ನಲ್ಲಿ ಭಾರತೀಯ ಆಟಗಾರರು ಪಾಲ್ಗೊಳ್ಳುವಂತಿಲ್ಲ. ಬಿಸಿಸಿಐಯಿಂದ(BCCI) ಅನುಮತಿ ಸಿಕ್ಕರಷ್ಟೇ ಆಟಗಾರರು ಬೇರೆ ದೇಶದ ಕ್ರಿಕೆಟ್ ಲೀಗ್ಗಳಲ್ಲಿ ಪಾಲ್ಗೊಳ್ಳಬಹುದಾಗಿದೆ. ಒಂದೊಮ್ಮೆ ಈ ನಿಯಮವನ್ನು ಉಲ್ಲಂಘಿಸಿದಲ್ಲಿ ಅಂತಹ ಆಟಗಾರರ ವಿರುದ್ಧ ಶಿಸ್ತು ಕ್ರಮದ ಜತೆಗೆ ಅವರನ್ನು ಭಾರತದ ಕ್ರಿಕೆಟ್ ತಂಡದಿಂದ ನಿಷೇಧ ಮಾಡುವ ಹಕ್ಕು ಕೂಡ ಬಿಸಿಸಿಐಗೆ ಇದೆ. ಆದರೆ ನಿವೃತ್ತಿಯಾದ ಆಟಗಾರರಿಗೆ ಈ ನಿಯಮ ಅನ್ವಯವಾಗುತ್ತಿರಲಿಲ್ಲ. ಇದೀಗ ಮಾಜಿ ಆಟಗಾರರಿಗೂ ಕೆಲ ನಿಯಮವನ್ನು ಜಾರಿಗೆ ತರಲು ಬಿಸಿಸಿಐ ಮುಂದಾಗಿದೆ.
ಐಪಿಎಲ್ ಸೇರಿ ಭಾರತ ಕ್ರಿಕೆಟ್ನಿಂದ ನಿವೃತ್ತಿ ಹೊಂದಿರುವ ಕೆಲ ಆಟಗಾರರು ವಿದೇಶದಲ್ಲಿ ನಡೆಯುತ್ತಿರುವ ಮೇಜರ್ ಲೀಗ್ನಲ್ಲಿ ಕಾಣಿಸಿಕೊಂಡಿದ್ದಾರೆ. ರಾಬಿನ್ ಉತ್ತಪ್ಪ, ಯೂಸೂಫ್ ಪಠಾಣ್ ದುಬೈ ಲೀಗ್ನಲ್ಲಿ ಭಾಗವಹಿಸುತ್ತಿದ್ದಾರೆ. ಇದೇ ಆವೃತ್ತಿಯ ಐಪಿಎಲ್ಗೆ ನಿವೃತ್ತಿ ಘೋಷಿಸಿದ್ದ ಅಂಬಾಟಿ ರಾಯುಡು ಅಮೇರಿಕಾದ ಮೇಜರ್ ಲೀಗ್ ಕ್ರಿಕೆಟ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಒಡೆತನದ ಟೆಕ್ಸಾಸ್ ಸೂಪರ್ ಕಿಂಗ್ಸ್ ಪರ ಆಡಲು ಸಜ್ಜಾಗಿದ್ದಾರೆ. ಆದರೆ ಅವರ ಕನಸಿಗೆ ಇದೀಗ ಬಿಸಿಸಿಐ ಅಡ್ಡಿಪಡಿಸುವ ಸಾಧ್ಯತೆಯೊಂದು ಕಂಡುಬಂದಿದೆ.
ಭಾರತೀಯ ಆಟಗಾರರು ವಿದೇಶಿ ಲೀಗ್ನಲ್ಲಿ ಆಡುತ್ತಿರುವ ಕಾರಣ ಐಪಿಎಲ್ನ ಮಹತ್ವದ ಕಳೆದುಕೊಳ್ಳುವ ಸಾಧ್ಯತೆ ಅಧಿಕ ಎಂದು ಮನಗಂಡ ಬಿಸಿಸಿಐ, ಇದೀಗ ಮಾಜಿ ಆಟಗಾರರಿಗೂ ನಿಯಮವೊಂದನ್ನು ಜಾರಿಗೆ ತರಲು ಮುಂದಾಗಿದೆ. ಐಪಿಎಲ್ ಅಥವಾ ಭಾರತ ತಂಡದಿಂದ ನಿವೃತ್ತಿ ಹೇಳಿದ ಒಂದು ವರ್ಷಗಳ ವರೆಗೆ ಯಾವುದೇ ವಿದೇಶಿ ಲೀಗ್ನಲ್ಲಿ ಭಾಗವಹಿಸದಂತೆ ಹೊಸ ಪಾಲಿಸಿಯನ್ನ ಜಾರಿಗೆ ತರಲಿದೆ. ಈ ಬಗ್ಗೆ ಜುಲೈ 7ರಂದು ನಡೆಯುವ ಬಿಸಿಸಿಐ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಚರ್ಚೆ ನಡೆಯಲಿದ್ದು ಸ್ಪಷ್ಟ ನಿರ್ಧಾರ ಹೊರಬೀಳುವ ಸಾಧ್ಯತೆ ಇದೆ.
ವಿಶ್ವಕಪ್ ಪಂದ್ಯ ಆಯೋಜನೆ ಕೈತಪ್ಪಿದ ಸ್ಟೇಡಿಯಂಗಳಿಗೆ ಆಫರ್ ಘೋಷಿಸಿದ ಬಿಸಿಸಿಐ
ಏಕದಿನ ವಿಶ್ವಕಪ್‌ಗೆ ಅವಕಾಶ ಸಿಗದ ಕ್ರೀಡಾಂಗಣಗಳಲ್ಲಿ ಮುಂಬರುವ ಪ್ರಮುಖ ತವರು ಏಕದಿನ ಪಂದ್ಯಗಳ ಸರಣಿಯನ್ನು ಆಡಿಸುವ ಚಿಂತನೆ ಬಿಸಿಸಿಐ ಮಾಡಿದೆ. ಇದೇ ವಿಚಾರವಾಗಿ ಮಾತನಾಡಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, “ತವರಿನಲ್ಲಿ ನಡೆಯುವ ಸರಣಿಗಳ ಪಂದ್ಯಕ್ಕೆ ವಿಶ್ವಕಪ್ ಪಂದ್ಯಗಳ ಆತಿಥ್ಯ ಸಿಗದ ಕ್ರೀಡಾಂಗಣಗಳಿಗೆ ಪಂದ್ಯ ನಡೆಸಲು ಮೊದಲ ಆದ್ಯತೆ ನೀಡಲಾಗುವುದು” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ ICC World Cup 2023: ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಇಂಡೋ-ಪಾಕ್ ತಂಡಗಳದ್ದೇ ಒಂದು ಪ್ರತ್ಯೇಕ ಇತಿಹಾಸ!
“ಏಕದಿನ ವಿಶ್ವಕಪ್ ಆತಿಥ್ಯ ಪಡೆದ ಎಲ್ಲ ಕ್ರಿಕೆಟ್ ಸ್ಟೇಡಿಯಂಗೆ ಮುಂದಿನ ತವರಿನಲ್ಲಿ ನಡೆಯುವ ಸರಣಿಗೆ ಕಡಿಮೆ ಆತಿಥ್ಯ ನೀಡಲಾಗುತ್ತದೆ. ಈ ಅವಕಾಶವನ್ನು ಇತರ ಸ್ಟೇಡಿಯಂಗೆ ನೀಡಲಾಗುತ್ತದೆ. ಇದೇ ವಿಚರವಾಗಿ ಎಲ್ಲ ರಾಜ್ಯ ಕ್ರಿಕೆಟ್ ಸಂಘಗಳ ಜತೆ ಮಾತುಕತೆ ನಡೆಸಲಾಗಿದೆ. ಹಾಗೂ ಇದಕ್ಕೆ ಸರ್ವಾನುಮತದ ಒಪ್ಪಿಗೆಯೂ ಸಿಕ್ಕಿದೆ” ಎಂದು ಎಂದು ಜಯ್ ಶಾ ಹೇಳಿದ್ದಾರೆ.