ಬೆಂಗಳೂರು: ಏಷ್ಯಾಕಪ್(Asia Cup 2023)ಗೆ ಸಿದ್ಧತೆ ನಡೆಸುತ್ತಿರುವ ಟೀಮ್ ಇಂಡಿಯಾ ಆಟಗಾರರು ಬೆಂಗಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ(NCA)ಯಲ್ಲಿ ಗುರುವಾರ ಫಿಟ್‌ನೆಸ್ ಪರೀಕ್ಷೆಯಾದ ಯೋ-ಯೋ(Yo-Yo Test) ಟೆಸ್ಟ್‌ಗೆ ಒಳಪಟ್ಟಿದ್ದರು. ಯೋ-ಯೋ ಟೆಸ್ಟ್‌ಗೆ ಒಳಗಾದ ಬಗ್ಗೆ ವಿರಾಟ್ ಕೊಹ್ಲಿ(Virat Kohli) ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿದ್ದರು. ಈ ಪೋಸ್ಟ್ ಇದೀಗ ಕೊಹ್ಲಿಗೆ ಕಂಟಕ ತಂದಿದೆ.
ಗುರುವಾರ ಯೋ-ಯೋ ಟೆಸ್ಟ್‌ಗೆ ಒಳಗಾದ ಕೊಹ್ಲಿ, ತಮ್ಮ ಫೋಟೊವನ್ನು ಹಂಚಿಕೊಂಡು ತಾನು ಯೋ-ಯೋ ಟೆಸ್ಟ್ನಲ್ಲಿ 17.2 ಅಂಕ ಪಡೆಯುವ ಮೂಲಕ ಈ ಫಿಟ್‌ನೆಸ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡಿದ್ದೇನೆ(Virat Kohli passed the Yo-Yo Test) ಎಂದು ಸ್ವತಃ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ನೀಡಿದ್ದರು. ಆದರೆ ಕೊಹ್ಲಿಯ ಈ ಪೋಸ್ಟ್ ಬಿಸಿಸಿಐ(BCCI) ಕೆಂಗಣ್ಣಿಗೆ ಗುರಿಯಾಗಿದೆ.
ಕೊಹ್ಲಿಗೆ ವಾರ್ನಿಂಗ್
ಆಟಗಾರರು ತಮ್ಮ ಫಿಟ್‌ನೆಸ್ ಅಂಕಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಹಂಚಿಕೊಳ್ಳಬಾರದು, ತಂಡದ ಗೌಪ್ಯ ವಿಷಯವನ್ನು ಎಲ್ಲೂ ಬಹಿರಂಗ ಪಡಿಸಿಕೊಳ್ಳಬಾರದು ಎಂದು ಎಲ್ಲ ಆಟಗಾರರಿಗೂ ಟೀಮ್ ಮ್ಯಾನೆಜ್ಮೆಂಟ್ ಖಡಕ್ ಎಚ್ಚರಿಕೆ ನೀಡಿರುವುದಾಗಿ ಐಟಿಐ ವರದಿ ಮಾಡಿದೆ. ಇದೇ ವಿಚಾರವಾಗಿ ಕೊಹ್ಲಿಗೂ ಕೂಡ ಬಿಸಿಸಿಐ ಈ ರಿತಿಯ ತಪ್ಪುಗಳು ಇನ್ನೊಂದು ಸಾರಿ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿರುವುದಾಗಿ ವರದಿಯಾಗಿದೆ.
ಬಿಸಿಸಿಐ ಏಷ್ಯಾಕಪ್ ಆಡುವ 17 ಮಂದಿ ಆಟಗಾರರಿಗೆ ಬೆಂಗಳೂರಿನ ಎನ್ಸಿಎಯಲ್ಲಿ 6 ದಿನಗಳ ಶಿಬಿರವನ್ನು ಏರ್ಪಡಿಸಿದೆ. ಈ ವೇಳೆ ಎಲ್ಲ ಆಟಗಾರರು ಯೋ-ಯೋ ಟೆಸ್ಟ್ ಮತ್ತು ಡೆಕ್ಸಾ ಪರೀಕ್ಷೆಗೆ (ಮೂಳೆಗಳ ಸಾಂದ್ರತೆಯನ್ನು ಅಳೆಯುವ ವಿಶೇಷ ರೀತಿಯ ಎಕ್ಸ್-ರೇ, ಡ್ಯುಯೆಲ್ ಎನರ್ಜಿ ಎಕ್ಸ್-ರೇ ಎಬಾಪ್ಟಿಮೆಟ್ರಿ) ಒಳಪಡೆಸಲಾಗುತ್ತದೆ. ಇದೀಗ ಕೊಹ್ಲಿ ತಮ್ಮ ಯೋ-ಯೋ ಟೆಸ್ಟ್ ಅಂಕವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹಿನ್ನಲೆ ಬಿಸಿಸಿಐ ಆಟಗಾರರು ಬೇಕಿದ್ದರೆ ಟ್ರ್ಯಾಕ್ನಲ್ಲಿ ಓಡುವ ಫೋಟೋಗಳನ್ನು ಪೋಸ್ಟ್ ಮಾಡಬಹುದು. ಆದರೆ ಯೋ ಯೋ ಟೆಸ್ಟ್ನಲ್ಲಿ ಪಡೆದ ಅಂಕಗಳನ್ನು ಪೋಸ್ಟ್ ಮಾಡುವುದು ನಿಯಮ ಉಲ್ಲಂಘನೆ ಎಂದು ತಿಳಿಸಿದೆ. ಹೀಗಾಗಿ ಎಲ್ಲ ಆಟಗಾರರಿಗೂ ಸ್ಪಷ್ಟ ಸಂದೇಶ ನೀಡಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ Virat Kohli: ಯೋ-ಯೋ ಟೆಸ್ಟ್ ಪಾಸ್ ಆದ ಕೊಹ್ಲಿ; ಗಳಿಸಿದ ಅಂಕವೆಷ್ಟು?
ಯೋ-ಯೋ ಟೆಸ್ಟ್ ಪಾಸ್ ಆದ ನಾಯಕ ರೋಹಿತ್
ತಂಡದ ನಾಯಕ ರೋಹಿತ್ ಶರ್ಮಾ(Rohit Sharma) ಹಾಗೂ ಉಪ ನಾಯಕ ಹಾರ್ದಿಕ್ ಪಾಂಡ್ಯ(Hardik Pandya) ಇಬ್ಬರು ಯೋ-ಯೋ ಟೆಸ್ಟ್ನಲ್ಲಿ ಪಾಸ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಕೆಎಸ್‌ಸಿಎ-ಆಲೂರು ಮೈದಾನದಲ್ಲಿ ರೋಹಿತ್ ಮತ್ತು ಹಾರ್ದಿಕ್ ಪರೀಕ್ಷೆಯಲ್ಲಿ ಭಾಗವಹಿಸಿ ಯಶಸ್ವಿಯಾಗಿದ್ದಾರೆ ಎಂದು ಪಿಟಿಐ ತಿಳಿಸಿದೆ. ಆದರೆ ಗಾಯದಿಂದ ಚೇತರಿಕೆ ಕಂಡಿರುವ ಕನ್ನಡಿಗ ಕೆ.ಎಲ್ ರಾಹುಲ್(KL Rahul) ಅವರು ಈ ಟೆಸ್ಟ್‌ಗೆ ಒಳಪಟ್ಟಿಲ್ಲ ಎಂದು ತಿಳಿದುಬಂದಿದೆ.
ಮುಂದಿನ ವಾರ ಟೀಮ್ ಇಂಡಿಯಾ ಲಂಕಾ ಪ್ರಯಾಣ
ಆಗಸ್ಟ್ 29ರ ವರೆಗೆ ಎನ್ಸಿಎಯಲ್ಲಿ ಶಿಬಿರ ನಡೆಯಲಿದ್ದು ಇದು ಮುಕ್ತಾಯ ಕಂಡ ಬೆನ್ನಲ್ಲೇ ಆಟಗಾರರು ಶ್ರೀಲಂಕಾಕ್ಕೆ ಪ್ರಯಾಣಿಸಲಿದ್ದಾರೆ. ಭಾರತ ತನ್ನ ಮೊದಲ ಪಂದ್ಯವನ್ನು ಸಂಪ್ರದಾಯಿಕ ಬದ್ದ ಎದುರಾಳಿ ಪಾಕಿಸ್ತಾನ ವಿರುದ್ಧ ಸೆಪ್ಟಂಬರ್ 2ರಂದು ಲಂಕಾದ ಕ್ಯಾಂಡಿಯಲ್ಲಿ ಆಡಲಿದೆ. ಏಷ್ಯಾಕಪ್ ಕ್ರಿಕೆಟ್ ಟೂರ್ನಿ ಆಗಸ್ಟ್ 30ರಿಂದ ಸೆಪ್ಟೆಂಬರ್ 17ರ ವರೆಗೆ ಪಾಕಿಸ್ತಾನ, ಶ್ರೀಲಂಕಾದಲ್ಲಿ ನಡೆಯಲಿದೆ. ಒಟ್ಟು 13 ಪಂದ್ಯಗಳ ಪೈಕಿ ಪಾಕಿಸ್ತಾನದಲ್ಲಿ 4 ಪಂದ್ಯಗಳು ಮತ್ತು ಶ್ರೀಲಂಕಾದಲ್ಲಿ 9 ಪಂದ್ಯಗಳು ನಡೆಯಲಿದೆ.