ದೋಹಾ: ಫಿಫಾ ವಿಶ್ವಕಪ್ ಫುಟ್‌ಬಾಲ್(Fifa World Cup) ಟೂರ್ನಿಯ ಉದ್ಘಾಟನಾ ಸಮಾರಂಭವನ್ನು ಸ್ಮರಣೀಯವನ್ನಾಗಿಸಲು ಸಂಘಟಕರು ಎಲ್ಲ ಸಿದ್ಧತೆ ಮಾಡಿದ್ದಾರೆ. ನವೆಂಬರ್ 20ರಂದು ದೋಹಾದ ಅಲ್ ಬೈತ್ ಕ್ರೀಡಾಂಗಣದಲ್ಲಿ ಟೂರ್ನಿಗೆ ವರ್ಣರಂಜಿತ ಚಾಲನೆ ಲಭಿಸಲಿದೆ. ಆದರೆ ಇದೀಗ ಸಂಘಟಕರು ಮಹತ್ವದ ನಿರ್ಧಾರವೊಂದನ್ನು ಕೈಗೊಂಡಿದ್ದು ಪಂದ್ಯ ನಡೆಯುವ ಮೈದಾನದ ಸುತ್ತ ಮುತ್ತ ಬಿಯರ್(ಅಲ್ಕೋಹಾಲಿಕ್ ಬಿಯರ್) ಮಾರಾಟ ನಿಷೇಧಿಸಿದ್ದಾರೆ.
ಫಿಫಾ ಫುಟ್ಬಾಲ್ ಹಬ್ಬ ಆರಂಭಕ್ಕೂ 2 ದಿನ ಮುನ್ನ ಕತಾರ್ ಫುಟ್ಬಾಲ್ ಸಂಘಟನೆ ಮತ್ತು ಫಿಫಾ ಈ ಮಹತ್ವದ ನಿರ್ಧಾರ ಕೈಗೊಂಡಿದೆ. “ವಿಶ್ವದ ಪ್ರತಿಷ್ಠಿತ ಫುಟ್ಬಾಲ್ ಹಬ್ಬವನ್ನು ಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಪಂದ್ಯಾಟ ನಡೆಯುವ ಎಲ್ಲ ಸ್ಟೇಡಿಯಂನ ಅಸುಪಾಸಿನ ಸ್ಥಳದಲ್ಲಿ ಮದ್ಯ ಮಾರಾಟ ಮತ್ತು ಮದ್ಯಪಾನ ನಿಷೇಧಿಸಲಾಗಿದೆ. ಈ ನಿರ್ಧಾರಕ್ಕೆ ಎಲ್ಲ ಫುಟ್ಬಾಲ್ ಅಭಿಮಾನಿಗಳು ಮತ್ತು ಪ್ರೇಕ್ಷಕರು ಸಹಕರಿಸಬೇಕು ” ಎಂದು ಕತಾರ್ ಫಿಫಾ ಸಂಘಟನೆ ತಿಳಿಸಿದೆ.
“ಪಂದ್ಯದ ವೇಳೆ ಪ್ರೇಕ್ಷಕರಿಗೆ ಒಂದೊಮ್ಮೆ ಬಿಯರ್ ಸೇವಿಸಲು ಅವಕಾಶ ನೀಡಿದರೆ ಅದು ಕೆಲವೊಮ್ಮೆ ಅಹಿತಕರ ಘಟನೆಗೆ ದಾರಿ ಮಾಡಿಕೊಡಬಹುದು. ಇದರಿಂದ ಭಾರಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ. ಆದ್ದರಿಂದ ಇಂತಹ ಘಟನೆಗೆ ಎಡೆಮಾಡಿಕೊಡಬಾರದೆನ್ನುವ ದೂರದೃಷ್ಟಿಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಟೂರ್ನಿಯ ಸಂಘಟರು ತಿಳಿಸಿದ್ದಾರೆ.
ಫಿಫಾ ಫುಟ್ಬಾಲ್ ವಿಶ್ವ ಕಪ್ ಕೂಟದ ಉದ್ಘಾಟನಾ ಸಮಾರಂಭ(ನವೆಂಬರ್ 20) ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಆರಂಭವಾಗಲಿದೆ. ಅದೇ ದಿನ ರಾತ್ರಿ 9.30ಕ್ಕೆ ಆತಿಥೇಯ ಕತಾರ್ ಮತ್ತು ಈಕ್ವೆಡಾರ್ ಮಧ್ಯೆ ಮೊದಲ ಪಂದ್ಯ ನಡೆಯಲಿದೆ.
ಇದನ್ನೂ ಓದಿ | fifa world cup history | ಫಿಫಾ ವಿಶ್ವಕಪ್ ಇತಿಹಾಸದ ಮೊದಲ 5 ಚಾಂಪಿಯನ್ ತಂಡಗಳ ಪರಿಚಯ