ಜೋಹಾನ್ಸ್ ಬರ್ಗ್: ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ಆಲ್‌ರೌಂಡರ್ ಫರ್ಹಾನ್ ಬೆಹಾರ್ಡಿಯನ್(Behardien) ತಮ್ಮ ಕ್ರಿಕೆಟ್ ವೃತ್ತಿಜೀವನಕ್ಕೆ ತೆರೆ ಎಳೆದಿದ್ದಾರೆ. ಬೆಹಾರ್ಡಿಯನ್ ಅವರು ವೃತ್ತಿಪರ ಕ್ರಿಕೆಟ್‌ನಿಂದ ನಿವೃತ್ತಿಯಾಗುವ ನಿರ್ಧಾರವನ್ನು ಮಂಗಳವಾರ(ಡಿ.27) ಟ್ವಿಟರ್‌ನಲ್ಲಿ ಪ್ರಕಟಿಸಿದ್ದಾರೆ.
“ಕಳೆದ ಎರಡು ವಾರಗಳಿಂದ ಸಾಕಷ್ಟು ಭಾವನಾತ್ಮಕವಾಗಿದೆ. ಕ್ರಿಕೆಟ್ ವೃತ್ತಿಜೀವನದಲ್ಲಿ 18 ವರ್ಷಗಳು ಬಂದು ಹೋಗಿವೆ. ಈ ಪಯಣದಲ್ಲಿ ನನ್ನ ದೇಶಕ್ಕಾಗಿ 97 ಪಂದ್ಯಗಳು ಸೇರಿದಂತೆ ಎಲ್ಲ ಸ್ವರೂಪಗಳಲ್ಲಿ 560 ಪಂದ್ಯಗಳು, 17 ಟ್ರೋಫಿಗಳು ಮತ್ತು 4 ವಿಶ್ವ ಕಪ್‌ಗಳಲ್ಲಿ ಆಡಿದ ಅಪಾರ ಅನುಭವ ಜೀವನದುದ್ದಕ್ಕೂ ಸ್ಮರಣೀಯ” ಎಂದು ವಿದಾಯದ ಬಳಿಕ ಫರ್ಹಾನ್ ಬೆಹಾರ್ಡಿಯನ್ ಹೇಳಿದರು.
“ಅಚಲವಾದ ಬೆಂಬಲ ನೀಡಿದ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಧನ್ಯವಾದಗಳು. ನನ್ನ ವೃತ್ತಿಜೀವನದಲ್ಲಿ ನಾನು ಕಂಡ ಎಲ್ಲ ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ, ಅದೇ ರೀತಿ ನನ್ನ ಎಲ್ಲ ಸಹ ಆಟಗಾರರು, ನಾಯಕರಿಗೆ ಧನ್ಯವಾದಗಳು” ಎಂದು ಬೆಹಾರ್ಡಿಯನ್ ತಿಳಿಸಿದ್ದಾರೆ.
2004ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಫರ್ಹಾನ್ ಬೆಹಾರ್ಡಿಯನ್ ರಾಷ್ಟ್ರೀಯ ತಂಡದ ಪರ 18 ವರ್ಷಗಳ ಕಾಲ ಕ್ರಿಕೆಟ್ನಲ್ಲಿ ಸಕ್ರೀಯರಾಗಿದ್ದರು. ಈ ಸುದೀರ್ಘ ಪಯಣದಲ್ಲಿ 59 ಏಕ ದಿನ ಮತ್ತು 38 ಟಿ20 ಪಂದ್ಯಗಳಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಪ್ರತಿನಿಧಿಸಿದ್ದಾರೆ. ಟಿ20 ಸ್ವರೂಪಗಳಲ್ಲಿ 17 ವಿಕೆಟ್‌ಗಳನ್ನು ಪಡೆದಿದ್ದಾರೆ.
ಇದನ್ನೂ ಓದಿ | IPL 2023 | ಐಪಿಎಲ್‍ನಲ್ಲಿ ಕಡೆಗಣಿಸಿದ್ದಕ್ಕೆ ಬೇಸರ ವ್ಯಕ್ತಪಡಿಸಿದ ಪಂಜಾಬ್ ವೇಗಿ ಸಂದೀಪ್ ಶರ್ಮ!