Site icon Vistara News

ಭಾರತೀಯ ಬೌಲರ್​ಗಳಿಗೆ ವಿಶೇಷ ಚೆಂಡು ನೀಡಲಾಗುತ್ತದೆ ಎಂದ ರಾಝಾಗೆ ಚಳಿ ಬಿಡಿಸಿದ ವಾಸಿಂ ಅಕ್ರಮ್

wasim akram

ಕರಾಚಿ: ಈ ಬಾರಿಯ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ (World Cup) ಶ್ರೇಷ್ಠ ಪ್ರದರ್ಶನ ತೋರುತ್ತಿರುವ ಭಾರತ ತಂಡದ ಬೌಲರ್​ಗಳಿಗೆ ಐಸಿಸಿ, ಬಿಸಿಸಿಐ ವಿಶೇಷ ಚೆಂಡುಗಳನ್ನು ಒದಗಿಸುತ್ತಿದೆ ಎಂದು ಆರೋಪ ಮಾಡಿದ್ದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಾಝಾ(Hasan Raza) ಅವರ ಹೇಳಿಕೆಗೆ ಪಾಕ್​ನ ಮಾಜಿ ಆಟಗಾರ ವಾಸಿಂ ಅಕ್ರಮ್(wasim akram) ತಿರುಗೇಟು ನೀಡಿದ್ದಾರೆ.

ಭಾರತ ತಂಡ ಲಂಕಾ ತಂಡವನ್ನು 55 ರನ್​ಗಳಿಗೆ ಆಲೌಟ್​ ಮಾಡಿ ಸೆಮಿಫೈನಲ್​ ಪ್ರವೇಶಿಸಿದ ಬಳಿಕ ಪಾಕಿಸ್ತಾನದ ಕ್ರೀಡಾ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಹಸನ್ ರಾಝಾ, ʼʼಭಾರತೀಯ ಬೌಲರ್‌ಗಳ ಸೀಮ್ ಮತ್ತು ಸ್ವಿಂಗ್ ಪ್ರಮಾಣವನ್ನು ಗಮನಿಸಿದರೆ ಅನುಮಾನವೊಂದು ಮೂಡುತ್ತದೆ. ಭಾರತ ಬೌಲಿಂಗ್ ಮಾಡಲು ಬಂದಾಗ ಚೆಂಡು ಬದಲಾಗುತ್ತದೆ. ಬಹುಶಃ ಐಸಿಸಿ ಅಥವಾ ಬಿಸಿಸಿಐ ಭಾರತಕ್ಕೆ ವಿಭಿನ್ನ ಚೆಂಡನ್ನು ನೀಡುತ್ತಿದೆ. ಮೂರನೇ ಅಂಪೈರ್ ಕೂಡ ವಿಶ್ವಕಪ್ ಪಂದ್ಯಗಳಲ್ಲಿ ಭಾರತದ ಪರವಾಗಿದ್ದಾರೆʼʼ ಎಂದು ಆರೋಪಿಸಿದ್ದರು.

ನಿಮ್ಮಿಂದ ನಮಗೆ ಮುಜುಗರ

ರಾಝಾ ಅವರ ಹೇಳಿಕೆಗೆ ಪ್ರತಿಕ್ರಿಕೆ ನೀಡಿರುವ ಪಾಕಿಸ್ತಾನ ದಿಗ್ಗಜ ಆಟಗಾರ ವಾಸಿಂ ಅಕ್ರಮ್​ ಅವರು, “ಅಸಂಬದ್ದ ಹೇಳಿಕೆ ನೀಡುವುದರಿಂದ ನಿಮ್ಮಗೆ ಮಾತ್ರವಲ್ಲದೆ ನಮಗೂ ಮುಜುಗರವನ್ನುಂಟು ಮಾಡುತ್ತಿದ್ದೀರಿ” ಎಂದು ಬಹಿರಂಗವಾಗಿಯೇ ಟಿವಿ ಸಂದರ್ಶನದಲ್ಲಿ ರಾಝಾ ಹೇಳಿಕೆಯನ್ನು ಕಡ್ಡಿ ಮುರಿದಂತೆ ಖಂಡಿಸಿದ್ದಾರೆ.

ಭಾರತಕ್ಕೆ ಬೆಂಬಲ ಸೂಚಿಸಿದ ಅಕ್ರಮ್​

“ಪಂದ್ಯವೊಂದು ಆರಂಭಗೊಳ್ಳುವಾಗ ಮೊದಲು ಅಂಪೈರ್​ಗಳು ಚೆಂಡುಗಳ ಬಾಕ್ಸ್‌ನೊಂದಿಗೆ ಮೊದಲು ಬೌಲಿಂಗ್ ಮಾಡುವ ತಂಡದ ಬಳಿಗೆ ಹೋಗಿ 2 ಚೆಂಡುಗಳನ್ನು ಆರಿಸಿಕೊಳ್ಳುವ ಅವಕಾಶ ನೀಡುತ್ತಾರೆ. ಈ ವೇಳೆ ಪಂದ್ಯದ ಎಲ್ಲ ಅಂಪೈರ್​ಗಳು ಐಸಿಸಿ ಮತ್ತು ತಂಡದ ಕೆಲ ಅಧಿಕಾರಿಗಳು ಉಪಸ್ಥಿತರಿರುತ್ತಾರೆ. ಬೌಲರ್​ಗಳು ತಮ್ಮ ಆದ್ಯತೆಗೆ ಅನುಗುಣವಾಗಿ ಎರಡು ಚೆಂಡುಗಳನ್ನು ಆಯ್ಕೆ ಮಾಡಿದ ಬಳಿಕ ಉಳಿದ ಚೆಂಡುಗಳನ್ನು ಅಂಪೈರ್​ಗಳು ಡ್ರೆಸ್ಸಿಂಗ್ ಕೋಣೆಗೆ ಕೊಂಡೊಯ್ಯುತ್ತಾರೆ. ಆ ಬಳಿಕ ಮೊದಲು ಬ್ಯಾಟಿಂಗ್ ಮಾಡಿದ ತಂಡ ಬೌಲಿಂಗ್​ಗೆ ಇಳಿದಾಗ ಅವರಿಗೂ ಇದೇ ಕ್ರಮವನ್ನು ಅನುಸರಿಸಲಾಗುತ್ತದೆ. ಇಲ್ಲಿಯೂ ಸಹ ಬೌಲಿಂಗ್ ಮಾಡುವ ತಂಡದ ಬೌಲರ್​ಗಳು ತಮ್ಮ ಆದ್ಯತೆಗೆ ಅನುಗುಣವಾಗಿ ಎರಡು ಚೆಂಡುಗಳನ್ನು ಆಯ್ಕೆ ಮಾಡುತ್ತಾರೆ. ನಂತರ ಬಾಕ್ಸ್​ನಲ್ಲಿ ಉಳಿದ ಚೆಂಡುಗಳನ್ನು ನಾಲ್ಕನೇ ಅಂಪೈರ್‌ಗೆ ಹಸ್ತಾಂತರಿಸುತ್ತಾರೆ. ಹೀಗಾಗಿ ಭಾರತ ತಂಡದ ಬೌಲರ್​ಗಳಿಗೆ ಮಾತ್ರ ಬೇರೆಯದ್ದೆ ಚೆಂಡುಗಳನ್ನು ನೀಡುವುದು ಅಸಾಧ್ಯ. ಇದೊಂದು ಅಸಂಬದ್ದ ಹೇಳಿಕೆ. ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ” ಎಂದು ಅಕ್ರಮ್ ಹೇಳಿದ್ದಾರೆ.

ಇದನ್ನೂ ಓದಿ PAK vs NZ: ಪಾಕಿಸ್ತಾನವನ್ನು ಕಾಪಾಡಿದ ಮಳೆರಾಯ; ಕಿವೀಸ್​ ವಿರುದ್ಧ 21 ರನ್​ ಗೆಲುವು

ಇದೇ ವೇಳೆ ಈ ಚರ್ಚೆಯ ಕಾರ್ಯಕ್ರಮದಲ್ಲಿದ್ದ ಮಾಜಿ ಆಟಗಾರ ಶೊಯೇಬ್​ ಮಲಿಕ್​ ಅವರು ಚೆಂಡಿನಲ್ಲಿ ಡಿವೈಸ್​ ಇಟ್ಟು ಸ್ವಿಂಗ್​ ಮಾಡಬಹುದಲ್ಲವೇ ಎಂದು ಹೇಳಿದರು. ತಕ್ಷಣ ಇದಕ್ಕೆ ಉತ್ತರಿಸಿದ ಅಕ್ರಮ್​ ಅರೇ.. ಇದು ಹೇಗೆ ಸಾಧ್ಯ. ಈಗಾಗಕೇ ಒಬ್ಬರು ಅಸಂಬದ್ಧ ಹೇಳಿಕೆ ನೀಡಿದ್ದಾರೆ ಈಗ ನೀವು ಕೂಡ ಈ ರೀತಿ ಹಳಿದರೆ ಹೇಗೆ ಎಂದು ಹೇಳಿ ಮಲಿಕ್​ಗೆ ತಕ್ಕ ಉತ್ತರ ನೀಡಿದರು. ಮಲಿಕ್​ ನಗುತ್ತಾ ಸುಮ್ಮನಾದರು.

ಶ್ರೇಷ್ಠ ಬೌಲಿಂಗ್​

ಭಾರತ ತಂಡದ ಬೌಲಿಂಗ್​ ಪ್ರದರ್ಶನವನ್ನು ಕೊಂಡಾಡಿದ ಅಕ್ರಮ್​, ಭಾರತೀಯ ಬೌಲರ್‌ಗಳನ್ನು ಮೆಚ್ಚಲೇಬೇಕು. ಬುಮ್ರಾ, ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ಈ ಮೂವರು ವೇಗಿಗಳು ಎಲ್ಲ ತಂಡದ ಬೌಲರ್​ಗಳಿಂದ ಬಲಿಷ್ಠವಾಗಿದ್ದಾರೆ. ಉತ್ತಮ ಲೆಂತ್​ ಮತ್ತು ಲೈನ್​ನಲ್ಲಿ ಬೌಲಿಂಗ್​ ನಡೆಸುವ ಸಾಮರ್ಥ್ಯ ಇವರಲ್ಲಿದೆ. ನಮ್ಮ ತಂಡದ ಬೌಲರ್​ಗಳು ಈ ರೀತಿಯ ಪ್ರದರ್ಶನ ತೋರುತಿಲ್ಲ. ಇದನ್ನು ನಾವು ಒಪ್ಪಲೇ ಬೇಕು ಎಂದು ಹೇಳುವ ಮೂಲಕ ಭಾರತೀಯ ಬೌಲರ್​ಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

Exit mobile version