ಲಂಡನ್: ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್(Ben Stokes) ನ್ಯೂಜಿಲ್ಯಾಂಡ್(England vs New Zealand) ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ವಿಸ್ಫೋಟಕ ಬ್ಯಾಟಿಂಗ್ ನಡೆಸಿ ನೂತನ ದಾಖಲೆ ಬರೆದಿದ್ದಾರೆ. ಅವರ ಈ ಶತಕದ ಸಾಹಸದಿಂದ ಇಂಗ್ಲೆಂಡ್ ತಂಡ 181 ರನ್ಗಳ ಗೆಲುವು ದಾಖಲಿಸಿದೆ.
ಇಲ್ಲಿನ ಓವಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಆರಂಭಕಾರ ಡೇವಿಡ್ ಮಲಾನ್ ಮತ್ತು ಸ್ಟೋಕ್ಸ್ ಅವರ ಶತಕ ಮತ್ತು ಅರ್ಧಶತಕದ ನೆರವಿನಿಂದ 48.1 ಓವರ್ಗಳಲ್ಲಿ 368 ರನ್ ಗಳಿಸಿತು. ಬೃಹತ್ ಮೊತ್ತವನ್ನು ಬೆನ್ನಟ್ಟಿದ ಕಿವೀಸ್ ಆರಂಭಿಕ ಹಂತದಲ್ಲೇ ನಾಟಕೀಯ ಕುಸಿತ ಕಂಡು ಕೇವಲ 187 ರನ್ಗಳಿಗೆ ಸರ್ವಪತನ ಕಂಡಿತು.
ದಾಖಲೆ ಬರೆದ ಸ್ಟೋಕ್ಸ್
ಕಳೆದ ತಿಂಗಳಷ್ಟೇ ಏಕದಿನ ಮಾದರಿಯ ಕ್ರಿಕೆಟ್ ನಿವೃತ್ತಿಯನ್ನು ವಾಪಸ್ ಪಡೆದು ಮರಳಿದ್ದ ಸ್ಟೋಕ್ಸ್ ಈ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ಮೂಲಕ 182 ರನ್ ಬಾರಿಸಿದರು. ಈ ಮೂಲಕ ಇಂಗ್ಲೆಂಡ್ ಪರ ಏಕದಿನ ಕ್ರಿಕೆಟ್ನಲ್ಲಿ ಸರ್ವಾಧಿಕ ವೈಯಕ್ತಿಕ ಗಳಿಕೆ ಮಾಡಿದ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು. ಇದಕ್ಕೂ ಮುನ್ನ ಆಸ್ಟ್ರೇಲಿಯ ಎದುರಿನ 2018ರ ಮೆಲ್ಬರ್ನ್ ಪಂದ್ಯದಲ್ಲಿ ಜೇಸನ್ ರಾಯ್(jason roy) 180 ರನ್ ಬಾರಿಸಿದ್ದು ಇದುವರೆಗಿನ ಇಂಗ್ಲೆಂಡ್ ದಾಖಲೆಯಾಗಿತ್ತು. ಆದರೆ ಸ್ಟೋಕ್ಸ್ ಅವರು ಈ ದಾಖಲೆಯನ್ನು ಮೀರಿ ನಿಂತಿದ್ದಾರೆ.
They're still mates! 😅 ❤️
— England Cricket (@englandcricket) September 13, 2023
Stokesy's 182 edges past JRoy's 180 as the highest individual ODI score for England 🏏#ENGvNZ | #EnglandCricket pic.twitter.com/TmV55B9XFA
ವಿಶ್ವಕಪ್ಗೂ ಮುನ್ನ ಗ್ರೇಟ್ ಕಮ್ಬ್ಯಾಕ್
ನಿವೃತ್ತಿಯಿಂದ ಹೊರಬಂದು ಆಡಲಾರಂಭಿಸಿದ ಬಳಿಕ ಬೆನ್ ಸ್ಟೋಕ್ಸ್ ತೋರ್ಪಡಿಸಿದ ಅಸಾಮಾನ್ಯ ಬ್ಯಾಟಿಂಗ್ ಇದಾಗಿದೆ. 32 ವರ್ಷದ ಸ್ಟೋಕ್ಸ್ ಅತಿಯಾದ ಕ್ರಿಕೆಟ್ ಒತ್ತಡದಿಂದ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಗೆ ಜುಲೈ 2022ರಲ್ಲಿ ಹಠಾತ್ ನಿವೃತ್ತಿ ಘೋಷಣೆ ಮಾಡಿ ಟಿ20 ಹಾಗೂ ಟೆಸ್ಟ್ ಮಾದರಿಯಲ್ಲಿ ಮಾತ್ರವೇ ಮುಂದುವರಿಯಲು ನಿರ್ಧರಿಸಿದ್ದರು. ಆದರೆ ಕಳೆದ ತಿಂಗಳು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸ್ಟೋಕ್ಸ್ ಬಳಿ ವಿಶ್ವಕಪ್ ಆಡುವಂತೆ ಮನವಿ ಮಾಡಿತ್ತು. ಇದಕ್ಕೆ ಒಪ್ಪಿ ಸ್ಟೋಕ್ಸ್ ತಮ್ಮ ನಿವೃತ್ತಿಯನ್ನು ಹಿಂಡೆದಿದ್ದರು. ನ್ಯೂಜಿಲ್ಯಾಂಡ್ ವಿರುದ್ಧದ 2019ರ ವಿಶ್ವಕಪ್ನ ಮಹತ್ತರ ಪಂದ್ಯದಲ್ಲಿ ಔಟಾಗದೆ 84 ರನ್ ಗಳಿಸಿದ್ದು, ಸ್ಟೋಕ್ಸ್ ಶ್ರೇಷ್ಠ ಸಾಧನೆಗಳಲ್ಲಿ ಒಂದು.
ಇದನ್ನೂ ಓದಿ World Cup 2023 : ತಮ್ಮ ನಿರ್ಧಾರದಿಂದ ಯೂ ಟರ್ನ್ ಹೊಡೆದ ಇಂಗ್ಲೆಂಡ್ ಆಟಗಾರ ಬೆನ್ಸ್ಟೋಕ್ಸ್
ಜತೆಯಾಟದಲ್ಲೂ ದಾಖಲೆ
ಮೂರನೇ ವಿಕೆಟ್ಗೆ ಮಲಾನ್ ಮತ್ತು ಸ್ಟೋಕ್ಸ್ ಸೇರಿಕೊಂಡು 199 ರನ್ ಬಾರಿಸುವ ಮೂಲಕ ದಾಖಲೆಯೊಂದನ್ನು ಬರೆದರು. ನ್ಯೂಜಿಲ್ಯಾಂಡ್ ವಿರುದ್ಧ ಎಲ್ಲ ವಿಕೆಟ್‌ಗಳಿಗೆ ಅನ್ವಯಿಸುವಂತೆ ಇಂಗ್ಲೆಂಡ್ ನಡೆಸಿದ ದೊಡ್ಡ ಮೊತ್ತದ ಜತೆಯಾಟ ಎಂಬ ದಾಖಲೆ ನಿರ್ಮಾಣವಾಯಿತು. ಡೇವಿಡ್ ಮಲಾನ್ 95 ಎಸೆತಗಳಿಂದ 96 ರನ್ ಗಳಿಸಿದರು. ಕೇವಲ 4 ರನ್ಗಳ ಅಂತರದಿಂದ ಶತಕ ವಂಚಿತರಾದರು. ಉಭಯ ಆಟಗಾರರನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರ ಹೆಚ್ಚುಹೊತ್ತು ಕ್ರೀಸ್ ಆಕ್ರಮಿಸಲು ವಿಫಲರಾದರು. ಇಂಗ್ಲೆಂಡ್ ಪರ ಬೌಲಿಂಗ್ನಲ್ಲಿ ಮಿಂಚಿದ ಕ್ರಿಸ್ ವೋಕ್ಸ್ ಮತ್ತು ಲಿಯಾಮ್ ಲಿವಿಂಗ್ಸ್ಟೋನ್ ತಲಾ ಮೂರು ವಿಕೆಟ್ ಕೆಡವಿದರು. ನ್ಯೂಜಿಲ್ಯಾಂಡ್ ಪರ ಅನುಭವಿ ಟ್ರೆಂಟ್ ಬೌಲ್ಟ್ 5 ವಿಕೆಟ್ ಕಿತ್ತರೂ ಗೆಲುವು ಮಾತ್ರ ಒಲಿಯಲಿಲ್ಲ.