ಮೆಲ್ಬೋರ್ನ್ : ವಿಶ್ವ ಕಪ್ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಸುಲಭ ಜಯ ದಾಖಲಿಸಿದ ಇಂಗ್ಲೆಂಡ್ ತಂಡ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಈ ಗೆಲುವು ಆಂಗ್ಲರ ಪಡೆಯ ಸಂಘಟಿತ ಹೋರಾಟದ ಫಲ. ಆದರೆ, ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಅವರು ಈ ಪಂದ್ಯದ ಹೀರೋ. ಬೌಲಿಂಗ್‌ನಲ್ಲಿ ೪ ಓವರ್‌ಗಳ ಸ್ಪೆಲ್‌ನಲ್ಲಿ ೩೨ ರನ್ ನೀಡಿ ೧ ವಿಕೆಟ್ ಕಬಳಿಸಿದ್ದ ಅವರು ಬ್ಯಾಟಿಂಗ್‌ನಲ್ಲಿ ಅಜೇಯ ೫೨ ರನ್ ಬಾರಿಸಿದ್ದಾರೆ. ಅದರಲ್ಲೂ ಆರಂಭಿಕ ಕುಸಿತ ಕಂಡಿದ್ದ ತಂಡವನ್ನು ಗೆಲುವಿನೆಡೆಗೆ ಕೊಂಡೊಯ್ಯುವಲ್ಲಿ ಅವರ ಪಾತ್ರ ದೊಡ್ಡದು. ಈ ಮೂಲಕ ಇಂಗ್ಲೆಂಡ್ ತಂಡದ ಅಪ್ತತ್ಬಾಂಧವ ಎಂದು ಎನಿಸಿಕೊಂಡಿದ್ದಾರೆ.
ಬೆನ್‌ಸ್ಟೋಕ್ಸ್ ಅವರು ಪ್ರಮುಖ ಘಟ್ಟದಲ್ಲಿ ತಂಡಕ್ಕೆ ನೆರವಾಗುತ್ತಿರುವುದು ಇದು ಮೊದಲೇನಲ್ಲ. ೨೦೧೯ರಲ್ಲಿ ಇಂಗ್ಲೆಂಡ್ ತಂಡ ಏಕ ದಿನ ವಿಶ್ವ ಕಪ್ ಗೆಲ್ಲುವಲ್ಲಿ ಅವರು ಪ್ರಧಾನ ಪಾತ್ರ ವಹಿಸಿದ್ದರು. ನ್ಯೂಜಿಲೆಂಡ್ ವಿರುದ್ಧದ ಆ ಫೈನಲ್ ಪಂದ್ಯದಲ್ಲಿ ಅವರು ಅಜೇಯ ೮೪ ರನ್ ಬಾರಿಸಿದ್ದರು. ಮೊದಲು ಬ್ಯಾಟ್ ಮಾಡಿದ ನ್ಯೂಜಿಲೆಂಡ್ ೮ ವಿಕೆಟ್‌ಗೆ ೨೪೧ ರನ್ ಬಾರಿಸಿದ್ದರೆ ಪ್ರತಿಯಾಗಿ ಆಡಿದ ಇಂಗ್ಲೆಂಡ್ ತಂಡ ೮೬ ರನ್‌ಗಳಿಗೆ ೪ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿದ್ದಿತ್ತು. ಈ ವೇಳೆ ಕೊನೇ ತನಕ ಕ್ರೀಸ್‌ಗೆ ತಳವೂರಿ ಆಡಿದ್ದ ಸ್ಟೋಕ್ಸ್ ಪಂದ್ಯ ಟೈ ಆಗುವಂತೆ ನೋಡಿಕೊಂಡಿದ್ದರು. ಬಳಿಕ ನಡೆದ ಸೂಪರ್ ಓವರ್ ಕೂಡ ಟೈ ಆಗಿತ್ತು. ಬಳಿಕ ಬೌಂಡರಿ ಲೆಕ್ಕಾಚಾರದಲ್ಲಿ ಇಂಗ್ಲೆಂಡ್ ಗೆಲುವು ಸಾಧಿಸಿತ್ತು. ಆದಾಗ್ಯೂ ಅರ್ಧ ಶತಕ ಬಾರಿಸಿದ್ದ ಬೆನ್ ಸ್ಟೋಕ್ಸ್ ಅವರೇ ಗೆಲುವಿನ ರೂವಾರಿ ಎನಿಕೊಂಡಿದ್ದರು.
ಅದೇ ರೀತಿ ೨೦೧೯ರ Ashes ಸರಣಿಯಲ್ಲಿ ಬೆನ್ ಸ್ಟೋಕ್ಸ್ ಬಾರಿಸಿದ ಅಜೇಯ ೧೩೫ ರನ್ ಟೆಸ್ಟ್ ಕ್ರಿಕೆಟ್‌ನ ಅತ್ಯಂತ ಸ್ಮರಣೀಯ ಇನಿಂಗ್ಸ್ ಎನಿಸಿಕೊಂಡಿದೆ. ಅದರಲ್ಲೂ ೧೧ನೇ ಬ್ಯಾಟರ್ ಜತೆ ಅವರು ಮುರಿಯದ ೭೩ ರನ್ ಜತೆಯಾಟ ನೀಡಿ ದಾಖಲೆ ಮಾಡಿದ್ದರು. ಅವರ ಬ್ಯಾಟಿಂಗ್ ಸಾಹಸದಿಂದ ಇಂಗ್ಲೆಂಡ್ ತಂಡ ಸರಣಿ ತಮ್ಮದಾಗಿಸಿಕೊಂಡಿತ್ತು. ಒಟ್ಟಾರೆಯಾಗಿ ಅವರು ಇಂಗ್ಲೆಂಡ್ ತಂಡದ ಆಪ್ತರಕ್ಷಕ ಎನಿಸಕೊಂಡಿದೆ.
ಇದನ್ನೂ ಓದಿ | ODI CRICKET | ಏಕದಿನ ಮಾದರಿಗೆ ವಿದಾಯ ಹೇಳಿದ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್