ಪುಣೆ: ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿದ ಇಂಗ್ಲೆಂಡ್ ತಂಡದ ಸ್ಟಾರ್ ಆಲ್ರೌಂಡರ್ ಬೆನ್ ಸ್ಟೋಕ್ಸ್(Ben Stokes) ಅವರು ನೂತನ ಮೈಲುಗಲ್ಲೊಂದನ್ನು ತಲುಪಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 10 ಸಾವಿರಕ್ಕೂ ಹೆಚ್ಚು ರನ್ ಹಾಗೂ 100ಕ್ಕೂ ಹೆಚ್ಚು ವಿಕೆಟ್ ಗಳಿಸಿದ ಇಂಗ್ಲೆಂಡ್‌ನ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. ಈ ಸಾಧನೆ ಮೂಲಕ ಭಾರತದ ಸಚಿನ್ ತೆಂಡೂಲ್ಕರ್(sachin tendulkar), ಸೌರವ್ ಗಂಗೂಲಿ(sourav ganguly) ಅವರೊಂದಿಗೆ ಎಲೈಟ್ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್ಗೆ ಹೆಚ್ಚಿನ ಒತ್ತು ನೀಡುವ ಸಲುವಾಗಿ ಏಕದಿನ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದ ಬೆನ್ ಸ್ಟೋಕ್ಸ್ ಅವರು ವಿಶ್ವಕಪ್ ಆಡುವ ಸಲುವಾಗಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯ ಒತ್ತಾಯದ ಮೇರೆಗೆ ತಮ್ಮ ನಿವೃತ್ತಿಯನ್ನು ವಾಪಸ್ ಪಡೆದು ಕ್ರಿಕೆಟ್ಗೆ ಮತ್ತೆ ಕಮ್ಬ್ಯಾಕ್ ಮಾಡಿದ್ದರು. ಆದರೆ ಗಾಯಕ್ಕೆ ತುತ್ತಾದ ಕಾರಣ ಆರಂಭಿಕ ಪಂದ್ಯಗಳಿಂದ ಸ್ಟೋಕ್ಸ್ ಹೊರಗುಳಿದಿದ್ದರು. ಕೊನೆಯ ಹಂತದಲ್ಲಿ ತಂಡ ಸೇರಿದ ಅವರು ಶತಕ ಬಾರಿಸಿ ಮಿಂಚಿದರು.
ಬೆನ್ ಸ್ಟೋಕ್ಸ್ ಅವರು ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ 84 ಎಸೆತಗಳಲ್ಲಿ ತಲಾ ಆರು ಬೌಂಡರಿ ಹಾಗೂ ಸಿಕ್ಸರ್‌ಗಳಿಂದ 108 ರನ್ ಗಳಿಸಿದರು. ಈ ಮೂಲಕ ವಿಶ್ವಕಪ್ನಲ್ಲಿ ಚೊಚ್ಚಲ ಶತಕ ಬಾರಿಸಿದರು. ಅವರ ಈ ಬ್ಯಾಟಿಂಗ್ ನೆರವಿನಿಂದ ಇಂಗ್ಲೆಂಡ್ ಒಂಬತ್ತು ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿತು. ಗುರಿ ಬೆನ್ನಟ್ಟಿದ ನೆದರ್ಲೆಂಡ್ಸ್ 37.2 ಓವರ್‌ಗಳಲ್ಲಿ 179 ರನ್‌ಗಳಿಗೆ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು 160 ರನ್ಗಳ ಸೋಲಿಗೆ ತುತ್ತಾಯಿತು.
ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಹಾಗೂ 100 ವಿಕೆಟ್ ಕಿತ್ತ ಸಾಧಕರು
ಸಚಿನ್ ತೆಂಡೂಲ್ಕರ್ (ಭಾರತ), ಸೌರವ್ ಗಂಗೂಲಿ (ಭಾರತ), ಜ್ಯಾಕ್ ಕಾಲಿಸ್ (ದಕ್ಷಿಣ ಆಫ್ರಿಕಾ),ಸನತ್ ಜಯಸೂರ್ಯ (ಶ್ರೀಲಂಕಾ), ತಿಲಕರತ್ನೆ ದಿಲ್ಶಾನ್ (ಶ್ರೀಲಂಕಾ).
ಇದನ್ನೂ ಓದಿ ENG vs NED: ಸತತ 6 ಸೋಲಿನ ಬಳಿಕ ಗೆಲುವು ಕಂಡ ಹಾಲಿ ಚಾಂಪಿಯನ್ ಇಂಗ್ಲೆಂಡ್
32 ವರ್ಷದ ಬೆನ್ ಸ್ಟೋಕ್ಸ್ ಈ ವರೆಗೆ 113 ಏಕದಿನ ಪಂದ್ಯಗಳಲ್ಲಿ 3,379 ರನ್ ಮತ್ತು 74 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಹಾಗೆಯೇ 97 ಟೆಸ್ಟ್ ಪಂದ್ಯಗಳಲ್ಲಿ 6,117 ರನ್ ಮತ್ತು 197 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಟ್ವೆಂಟಿ-20 ಕ್ರಿಕೆಟ್‌ನಲ್ಲಿ 585 ರನ್ ಹಾಗೂ 26 ವಿಕೆಟ್‌ಗಳನ್ನು ಪಡೆದಿದ್ದಾರೆ. ವಿಶ್ವಕಪ್ ಬಳಿಕ ಮತ್ತೆ ಏಕದಿನ ಕ್ರಿಕೆಟ್ಗೆ ವಿದಾಯ ಹೇಳುವ ಸಾಧ್ಯತೆ ಇದೆ. ಏಕೆಂದರೆ ಅವರು ಗಾಯದಿಂದ ಇನ್ನೂ ಚೇತರಿಕೆ ಕಂಡಿಲ್ಲ. ಜತೆಗೆ ಫಿಟ್ನೆಸ್ ಕೂಡ ಅವರಿಗೆ ಕಾಣುತ್ತಿದೆ.
ಕಮ್ಬ್ಯಾಕ್ ಪಂದ್ಯದಲ್ಲೇ ದಾಖಲೆ ಬರೆದಿದ್ದ ಸ್ಟೋಕ್ಸ್
ವಿಶ್ವಕಪ್ಗೂ ಮುನ್ನ ನಡೆದ ನ್ಯೂಜಿಲ್ಯಾಂಡ್(England vs New Zealand) ವಿರುದ್ಧದ ದ್ವಿಪಕ್ಷಿಯ ಏಕದಿನ ಸರಣಿಯಲ್ಲಿ ಬೆನ್ ಸ್ಟೋಕ್ಸ್ ಅವರು ದಾಖಲೆಯೊಂದನ್ನು ಬರೆದಿದ್ದರು. ಈ ಪಂದ್ಯದಲ್ಲಿ ಪ್ರಚಂಡ ಬ್ಯಾಟಿಂಗ್ ನಡೆಸಿದ್ದ ಸ್ಟೋಕ್ಸ್ 182 ರನ್ ಬಾರಿಸಿದ್ದರು. ಈ ಮೂಲಕ ಇಂಗ್ಲೆಂಡ್ ಪರ ಏಕದಿನ ಕ್ರಿಕೆಟ್‌ನಲ್ಲಿ ಸರ್ವಾಧಿಕ ವೈಯಕ್ತಿಕ ಗಳಿಕೆ ಮಾಡಿದ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದರು. ಇದಕ್ಕೂ ಮುನ್ನ ಈ ದಾಖಲೆ ಜೇಸನ್ ರಾಯ್(180) ಹೆಸರಿನಲ್ಲಿತ್ತು. ರಾಯ್ ಆಸ್ಟ್ರೇಲಿಯ ಎದುರಿನ 2018ರ ಮೆಲ್ಬರ್ನ್ ಪಂದ್ಯದಲ್ಲಿ ಈ ದಾಖಲೆ ನಿರ್ಮಿಸಿದ್ದರು.