ರಾವಲ್ಪಿಂಡಿ: ಇಂಗ್ಲೆಂಡ್ ತಂಡ ೧೭ ವರ್ಷಗಳ ಬಳಿಕ ಪಾಕಿಸ್ತಾನ ನೆಲಕ್ಕೆ ಕಾಲಿಟ್ಟಿದೆ. ಅಲ್ಲಿ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲು ಸಜ್ಜಾಗಿದೆ. ಏತನ್ಮಧ್ಯೆ, ತಂಡದ ನಾಯಕ ಬೆನ್ ಸ್ಟೋಕ್ಸ್ ಅವರು ಸರಣಿ ಆಡುವುದರಿಂದ ಪಡೆಯುವ ಸಂಭಾವನೆ ಮೊತ್ತವನ್ನು ಪಾಕಿಸ್ತಾನದಲ್ಲೇ ಬಿಟ್ಟು ಹೋಗುವುದಾಗಿ ಹೇಳಿದ್ದಾರೆ! ಹಾಗೆಂದು ಅಸಮಾಧಾನದಿಂದ ಅವರು ಈ ಮಾತನ್ನು ಹೇಳಿಲ್ಲ. ಬದಲಾಗಿ ಮಾನವೀಯ ಮೌಲ್ಯವನ್ನು ಎಲ್ಲರಿಗೂ ಕಲಿಸಿಕೊಟ್ಟಿದ್ದಾರೆ.
ಕೆಲವು ತಿಂಗಳ ಹಿಂದೆ ಪಾಕಿಸ್ತಾನದಲ್ಲಿ ಸುರಿದ ಭಯಂಕರ ಮಳೆ- ನೆರೆಗೆ ಕೋಟ್ಯಂತರ ಮಂದಿ ನಿರಾಶ್ರಿತರಾಗಿದ್ದಾರೆ. ಹಲವರು ಮೃತಪಟ್ಟಿದ್ದು, ಲಕ್ಷಂತಾರ ಮಂದಿ ಮನೆಗಳನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅಲ್ಲಿನ ಸರ್ಕಾರ ಪರಿಹಾರ ಕಾರ್ಯಕ್ಕಾಗಿ ವಿದೇಶಿ ನಿಧಿಗಳ ಮೊರೆ ಹೋಗಿದೆ. ಇವೆಲ್ಲದರ ಮಧ್ಯೆ ಅಲ್ಲಿ ಸಾಂಕ್ರಾಮಿಕ ರೋಗಗಳೂ ಜನರನ್ನು ಬಿಡದೇ ಕಾಡುತ್ತಿವೆ. ಈ ವಿಚಾರದ ಅರಿವು ಹೊಂದಿರುವ ಬೆನ್ ಸ್ಟೋಕ್ಸ್ ಅವರು ತಾವು ಪಡೆಯುವ ಸಂಭಾವನೆ ಮೊತ್ತವನ್ನು ನಿರಾಶ್ರಿತರ ಪರಿಹಾರ ನಿಧಿಗೆ ನೀಡುವುದಾಗಿ ಘೋಷಿಸಿದ್ದಾರೆ.
೧೭ ವರ್ಷಗಳ ಬಳಿಕ ಇಂಗ್ಲೆಂಡ್ ತಂಡ ಪಾಕಿಸ್ತಾನಕ್ಕೆ ಕಾಲಿಡುತ್ತಿರುವ ಕಾರಣ ನನಗೆ ಇದು ವಿಶೇಷ ಎನಿಸಿದೆ. ಆದರೆ ನೆರೆಯಿಂದಾಗಿ ಪಾಕಿಸ್ತಾನದ ನಾಗರಿಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ ಎಂಬುದು ನನಗೆ ತಿಳಿದ ವಿಷಯ. ಕ್ರಿಕೆಟ್ ನನಗೆ ಜೀವನ ಹಾಗೂ ಎಲ್ಲವನ್ನೂ ಕೊಟ್ಟಿದೆ. ಹೀಗಾಗಿ ಕ್ರಿಕೆಟ್ ಹೊರತಾಗಿ ನಾನು ಏನಾದರೂ ನೀಡಬೇಕಾಗಿದೆ. ಹೀಗಾಗಿ ನನ್ನ ಪಂದ್ಯದ ಸಂಭಾವನೆಯನ್ನು ಪಾಕಿಸ್ತಾನ ನೆರೆ ಪರಿಹಾರ ನಿಧಿಗೆ ನೀಡುವೆ. ಆ ಮೊತ್ತ ಸದ್ಬಳಕೆಯಾಗಲಿ ಎಂಬುದಾಗಿ ಸ್ಟೋಕ್ಸ್ ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Ben Stokes | ನಿವೃತ್ತಿ ನಿರ್ಧಾರದಿಂದ ವಾಪಸ್ ಬರುತ್ತಾರಾ ಬೆನ್ ಸ್ಟೋಕ್ಸ್; ಕೋಚ್ ಹೇಳಿದ್ದೇನು?