ಲಂಡನ್: ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ಏಕ ದಿನ ವಿಶ್ವ ಕಪ್ ಟೂರ್ನಿಯ ಮೇಲೆ ಗಂಭೀರವಾಗಿ ಚಿತ್ತ ನೆಟ್ಟಿರುವ ಇಂಗ್ಲೆಂಡ್ ಕ್ರಿಕೆಟ್ ತಂಡದ ಕೋಚ್ ಮ್ಯಾಥ್ಯೂ ಮಾಟ್ ಏಕ ದಿನ ವಿಶ್ವ ಕಪ್ ಟ್ರೋಫಿ ತಮ್ಮಲ್ಲೇ ಉಳಿಸಿಕೊಳ್ಳಬೇಕಾದರೆ ಬೆನ್ ಸ್ಟೋಕ್ಸ್(Ben Stokes) ತಮ್ಮ ನಿರ್ಧಾರವನ್ನು ಬದಲಾಯಿಸಿಕೊಳ್ಳಬೇಕಾಗಿದೆ ಎಂದಿದ್ದಾರೆ.
ಟಿ20 ವಿಶ್ವ ಕಪ್ ಗೆಲುವಿನ ಕುರಿತು ಮಂಗಳವಾರ ಮಾತನಾಡಿದ ಮ್ಯಾಥ್ಯೂ ಮಾಟ್ “ಟಿ20 ವಿಶ್ವ ಸಮರ ಗೆದ್ದಾಗಿದೆ. ಈಗ ನಾವು ಏಕ ದಿನ ವಿಶ್ವ ಕಪ್‌ನ ವರ್ಷದತ್ತ ಹೆಜ್ಜೆಯಿಡುತ್ತಿದ್ದೇವೆ. ಆದರೆ ತಂಡದ ಪ್ರಮುಖ ಆಟಗಾರ ಬೆನ್ ಸ್ಟೋಕ್ಸ್ ಈ ತಂಡದ ಭಾಗವಾದರೆ ಉತ್ತಮವಾಗಿರುತ್ತಿತ್ತು. ಅವರು ನಿವೃತ್ತಿಯನ್ನು ಹಿಂಪಡೆದರೆ ಇಂಗ್ಲೆಂಡ್ ತಂಡ ಮುಂದಿನ ಏಕ ದಿನ ವಿಶ್ವ ಕಪ್ನಲ್ಲಿಯೂ ಮೇಲುಗೈ ಸಾಧಿಸಿ ಟ್ರೋಫಿಯನ್ನು ಉಳಿಸಿಕೊಳ್ಳುಬಹುದು” ಎಂದು ಹೇಳುವ ಮೂಲಕ ಸ್ಟೋಕ್ಸ್ ಅವರನ್ನು ಮತ್ತೆ ತಂಡಕ್ಕೆ ಮರಳುವಂತೆ ಮಾಡಲು ಮ್ಯಾಥ್ಯೂ ಮಾಟ್ ಪ್ರಯತ್ನಿಸಿದ್ದಾರೆ.
ಈ ಬಾರಿಯ ಟಿ20 ವಿಶ್ವ ಕಪ್‌ನ ಫೈನಲ್‌ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಬೆನ್ ಸ್ಟೋಕ್ಸ್ ವಿಶ್ವ ಕಪ್ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದ್ದರು. ಅದರಂತೆ 2019ರಲ್ಲಿ ನಡೆದ ಏಕ ದಿನ ವಿಶ್ವ ಕಪ್ ಗೆಲುವಿನಲ್ಲೂ ಸ್ಟೋಕ್ಸ್ ಹೀರೋ ಆಗಿ ಮಿಂಚಿದ್ದರು. ಆದರೆ ಕೆಲ ತಿಂಗಳ ಹಿಂದೆಯಷ್ಟೇ ಅತಿಯಾದ ಕ್ರಿಕೆಟ್ ಒತ್ತಡದಿಂದ ಬೆನ್ ಸ್ಟೋಕ್ಸ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ ಮಾದರಿಗೆ ವಿದಾಯವನ್ನು ಘೋಷಣೆ ಮಾಡಿ ಟಿ20 ಹಾಗೂ ಟೆಸ್ಟ್ ಮಾದರಿಯಲ್ಲಿ ಮಾತ್ರವೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದರು.
ಕೋಚ್ ಮ್ಯಾಥ್ಯೂ ಮಾಟ್ ಅವರ ಈ ಹೇಳಿಕೆಯಿಂದ ಸ್ಟೋಕ್ಸ್ ತಮ್ಮ ನಿರ್ಧಾರವನ್ನು ಬದಲಿಸಿ ತಂಡಕ್ಕೆ ಮತ್ತೆ ಮರಳಿದರೂ ಅಚ್ಚರಿ ಪಡಬೇಕಿಲ್ಲ. ಏಕೆಂದರೆ ಹಲವು ಕ್ರಿಕೆಟಿಗರು ನಿವೃತ್ತಿ ಘೋಷಿಸಿ ಮತ್ತೆ ಕ್ರಿಕೆಟ್ಗೆ ಮರಳಿದ ಹಲವು ದೃಷ್ಟಾಂತಗಳು ಕಣ್ಣ ಮುಂದಿವೆ.
ಇದನ್ನೂ ಓದಿ | IND VS PAK | ಟ್ವೀಟ್ ಸಮರ ನಿಲ್ಲಿಸಿ; ವಾಸಿಂ ಅಕ್ರಂ ಖಡಕ್ ವಾರ್ನಿಂಗ್ ಕೊಟ್ಟಿದ್ದು ಯಾರಿಗೆ?