Site icon Vistara News

Pro Kabaddi League | ಹಾಲಿ ಚಾಂಪಿಯನ್​ ಡೆಲ್ಲಿ ಮಣಿಸಿ ಉಪಾಂತ್ಯಕ್ಕೆ ಲಗ್ಗೆ ಇಟ್ಟ ಬೆಂಗಳೂರು ಬುಲ್ಸ್

pro kabaddi league

ಮುಂಬಯಿ : ದಬಾಂಗ್​ ಡೆಲ್ಲಿ ತಂಡದ ವಿರುದ್ಧ 56-24 ಅಂಕಗಳ ಭಾರೀ ಅಂತರದ ವಿಜಯ ಸಾಧಿಸಿದ ಬೆಂಗಳೂರು ಬುಲ್ಸ್​ ತಂಡ ಪ್ರೊ ಕಬಡ್ಡಿ ಲೀಗ್​ನ 9ನೇ ಆವೃತ್ತಿಯಲ್ಲಿ (Pro Kabaddi League) ಸೆಮಿ ಫೈನಲ್ಸ್​ಗೆ ಲಗ್ಗೆ ಇಟ್ಟಿದೆ. ಮಂಗಳವಾರ ಇಲ್ಲಿನ ಡೋಮ್​ ಎನ್​ಎಸ್​ಸಿಐ ಎಸ್​ವಿಪಿ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಆರಂಭದಿಂದಲೇ ಆಕ್ರಮಣಕಾರಿ ಆಟವಾಡಿದ ಬೆಂಗಳೂರು ಬಳಗ ಸುಲಭ ಜಯ ತನ್ನದಾಗಿಸಿಕೊಂಡಿತು.

ಪಂದ್ಯ ಆರಂಭಗೊಂಡ ಕ್ಷಣದಿಂದಲೇ ಮುನ್ನುಗ್ಗಲು ಆರಂಭಿಸಿದ ಬೆಂಗಳೂರು ಗೂಳಿ, ಕೊನೇ ತನಕವೂ ಅದೇ ಮಾದರಿಯ ಪ್ರದರ್ಶನ ನೀಡಿತು. ರೇಡಿಂಗ್​ ಹಾಗೂ ಡಿಫೆನ್ಸ್​ನಲ್ಲಿ ಹಿಡಿದ ಸಾಧಿಸಿದ ಬೆಂಗಳೂರು ಬಳಗದ ಆಟಗಾರರು ಎದುರಾಳಿ ತಂಡವನ್ನು ನಾಲ್ಕು ಬಾರಿ ಆಲ್ಔಟ್ ಮಾಡಿತು.

ಪ್ರಥಮಾರ್ಧ ಮುಕ್ತಾಯದ ವೇಳೆಗೆ ಬುಲ್ಸ್​ ಬಳಗ 31-15 ಅಂಕಗಳ ಮುನ್ನಡೆ ಪಡೆದುಕೊಂಡಿತ್ತು. ಈ ಅವಧಿಯಲ್ಲಿ ಎರಡು ಬಾರಿ ಡೆಲ್ಲಿ ತಂಡದ ಕೋರ್ಟ್​ ಖಾಲಿ ಮಾಡಿಸಿತು. ಅದೇ ಮಾದರಿಯ ಪ್ರದರ್ಶನ ಮುಂದುವರಿಸಿ ದ್ವಿತೀಯಾರ್ಧದಲ್ಲೂ ಎರಡು ಬಾರಿ ಆಲ್​ಔಟ್​ ಮಾಡಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.

ರೇಡಿಂಗ್​ನಲ್ಲಿ ಭರತ್​ 15 ಹಾಗೂ ವಿಕಾಸ್ ಕಂಡೋಲಾ 12 ಅಂಕಗಳನ್ನು ತಂದುಕೊಟ್ಟರು. ರಕ್ಷಣಾ ವಿಭಾಗದ ಕಲಿಗಳಾದ ಪಾರ್ಥಿಬನ್​ ಏಳು ಅಂಕ ಹಾಗೂ ಸೌರಭ್​ 05 ಅಂಕ ಸಂಪಾದಿಸಿದರು.

ಗುರುವಾರ ನಡೆಯಲಿರುವ ಸೆಮಿ ಫೈನಲ್ ಹಣಾಹಣಿಯಲ್ಲಿ ಬಲಿಷ್ಠ ಜೈಪುರ ಪಿಂಕ್​ ಪ್ಯಾಂಥರ್ಸ್​ ಬಳಗಕ್ಕೆ ಬೆಂಗಳೂರು ತಂಡ ಎದುರಾಗಲಿದೆ.

Exit mobile version