ಬೆಂಗಳೂರು: ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿವೊ ಪ್ರೊ ಕಬಡ್ಡಿ ಲೀಗ್‌ನ ಭಾನುವಾರದ ಪಂದ್ಯದಲ್ಲಿ ಯುಪಿ ಯೋಧಾಸ್ ಪಡೆ ಬೆಂಗಳೂರು ಬುಲ್ಸ್ ವಿರುದ್ಧ 44-37 ಅಂತರದಲ್ಲಿ ಜಯ ಗಳಿಸಿ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಿಗಿಯಿತು. ಸತತ ಎರಡು ಸೋಲಿನಿಂದ ಬೆಂಗಳೂರು ಬುಲ್ಸ್ ಅಂಕಪಟ್ಟಿಯಲ್ಲಿ ಆರನೇ ಸ್ಥಾನಕ್ಕೆ ಕುಸಿದಿದೆ.
ಪ್ರದೀಪ್ ನರ್ವಾಲ್ ಹಾಗೂ ಸುರಿಂದರ್ ಸಿಂಗ್ ತಲಾ 14 ಅಂಕಗಳನ್ನು ಗಳಿಸುವ ಮೂಲಕ ಜಯದ ಹಾದಿಯನ್ನು ಸುಗಮಗೊಳಿಸಿದರು. ಪ್ರದೀಪ್ ನರ್ವಾಲ್ 21 ರೈಡಿಂಗ್ ಮೂಲಕ 14 ಅಂಕ ಗಳಿಸಿದರೆ, ಸುರಿಂದರ್ ಕೇವಲ 18 ರೈಡಿಂಗ್ ಮೂಲಕ 14 ಅಂಕಗಳನ್ನು ಗಳಿಸಿ ಜಯದ ರೂವಾರಿ ಎನಿಸಿದರು.
ಬೆಂಗಳೂರು ಬುಲ್ಸ್ ಪ್ರಥಮಾರ್ಧದಲ್ಲಿ ನೀರಸ ಪ್ರದರ್ಶನ ತೋರಿತ್ತು. ಆದರೆ ದ್ವಿತಿಯಾರ್ಧದ ಕೊನೆಯ ಹಂತದಲ್ಲಿ ಮಿಂಚಿನ ಆಟ ಪ್ರದರ್ಶಿಸಿದರೂ ಆಗಲೇ ಕಾಲ ಮಿಂಚಿತ್ತು. ಬೆಂಗಳೂರು ಬುಲ್ಸ್ ಪರ ವಿಕಾಶ್ ಕಂಡೋಲ (12) ಹಾಗೂ ಭರತ್ (9) ರೈಡಿಂಗ್ ಅಂಕಗಳನ್ನು ಗಳಿಸಿದರು. ಆದರೆ ಈ ಪ್ರಯತ್ನ ಬಲಿಷ್ಠ ಯುಪಿ ಯೋಧಾಸ್ ಪಡೆಯನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ. ಬೆಂಗಳೂರು ದ್ವಿತೀಯಾರ್ಧದ ಕೊನೆಯಲ್ಲಿ ಯುಪಿ ಯೋಧಾಸ್ ಪಡೆಯನ್ನು ಆಲೌಟ್ ಮಾಡುವಲ್ಲಿ ಯಶಸ್ವಿಯಾಯಿತು. ಆದರೆ ಪ್ರಥಮಾರ್ಧದಲ್ಲಿ ಬೆಂಗಳೂರು ಎರಡು ಬಾರಿ ಆಲೌಟ್ ಆದದ್ದು ಫಲಿತಾಂಶದ ಮೇಲೆ ಪರಿಣಾಮ ಬೀರಿತು.
ಯುಪಿ ಯೋಧಾಸ್‌ಗೆ ಬೃಹತ್ ಮುನ್ನಡೆ
ಸುರೇಂದರ್ ಗಿಲ್ ಹಾಗೂ ಪ್ರದೀಪ್ ನರ್ವಾಲ್ ಅವರ ಅದ್ಭುತ ರೈಡಿಂಗ್ ಅಂಕಗಳ ನೆರವಿನಿಂದ ಯುಪಿ ಯೋಧಾಸ್ ಪಡೆ ಬೆಂಗಳೂರು ಬುಲ್ಸ್ ವಿರುದ್ಧದ ಪಂದ್ಯದ ಪ್ರಥಮಾರ್ಧದಲ್ಲಿ 26-12 ಅಂತರದಲ್ಲಿ ಬೃಹತ್ ಮುನ್ನಡೆ ಕಂಡಿತು. ಈ ಇಬ್ಬರು ಆಟಗಾರರು 16 ರೈಡಿಂಗ್ ಅಂಕಗಳನ್ನು ಗಳಿಸಿ, ಜಯಕ್ಕೆ ಅಗತ್ಯವಿರುವ ವೇದಿಕೆ ನಿರ್ಮಿಸಿದರು. 5 ಟ್ಯಾಕಲ್ ಅಂಕಗಳ ಜೊತೆಯಲ್ಲಿ ಎರಡು ಬಾರಿ ಬೆಂಗಳೂರು ಬುಲ್ಸ್ ತಂಡವನ್ನು ಆಲೌಟ್ ಮಾಡುವ ಮೂಲಕ ಯುಪಿ ಯೋಧಾಸ್ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿತು. ಬೆಂಗಳೂರು ಬುಲ್ಸ್ ಯಾವುದೇ ವಿಭಾಗದಲ್ಲೂ ಮಿಂಚುವಲ್ಲಿ ವಿಫಲವಾಗಿ ಪ್ರಥಮಾರ್ಧದಲ್ಲಿ ಮನೆಯಂಗಣದ ಪ್ರೇಕ್ಷಕರಿಗೆ ನಿರಾಸೆಮೂಡಿಸಿತು.
ಇದನ್ನೂ ಓದಿ : Pro Kabaddi | ಮಹಾರಾಷ್ಟ್ರ ಡರ್ಬಿ ಗೆದ್ದ ಪುಣೇರಿ ಪಲ್ಟನ್, ಯು ಮುಂಬಾ ವಿರುದ್ಧ ರೋಚಕ ಜಯ