ದುಬೈ: ಫ್ರಾನ್ಸ್ ತಂಡದ ಸ್ಟ್ರೈಕರ್ ಕರೀಂ ಬೆಂಜೆಮಾ ಮತ್ತು ಅರ್ಜೆಂಟೀನಾದ ಲಿಯೋನೆಲ್ ಮೆಸ್ಸಿ ಅವರು ಕ್ರಿಸ್ಟಿಯಾನೊ ರೊನಾಲ್ಡೊ ಪ್ರತಿನಿಧಿಸುವ ಸೌದಿ ಅರೇಬಿಯದ ಅಲ್ ನಾಸರ್ ಫುಟ್ಬಾಲ್ ಕ್ಲಬ್ ಪರ ಆಡಲಿದ್ದಾರೆ ಎಂದು ವರದಿಯಾಗಿದೆ. ಕಳೆದ ಶನಿವಾರವಷ್ಟೇ ಮೆಸ್ಸಿ ಅವರು ಪ್ಯಾರಿಸ್ ಸೇಂಟ್-ಜರ್ಮೈನ್(ಪಿಎಸ್‌ಜಿ) ತಂಡಕ್ಕೆ ವಿದಾಯ ಹೇಳಿದ್ದರು.
ಶನಿವಾರ ನಡೆದಿದ್ದ ಕ್ಲರ್ಮಾಂಟ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಮೂಲಕ ಮೆಸ್ಸಿ ಅವರು ಪಿಎಸ್‌ಜಿ ತಂಡ ತೊರೆದರು. ಈ ಪಂದ್ಯದಲ್ಲಿ ಪಿಎಸ್‌ಜಿ ತಂಡ 2-3 ಗೋಲುಗಳ ಅಂತರದಲ್ಲಿ ಸೋಲು ಕಂಡಿತ್ತು. ಪಂದ್ಯ ಆರಂಭಕ್ಕೂ ಮುನ್ನ ಮೆಸ್ಸಿ ಅವರು ತಮ್ಮ ಮಕ್ಕಳ ಹಣೆಯ ಮೇಲೆ ಚುಂಬಿಸಿ “ನಾನು ಈ ಎರಡು ವರ್ಷಗಳ ಕಾಲ ಪಿಎಸ್‌ಜಿ ತಂಡದ ಪರ ಆಡುವ ವೇಳೆ ನನಗೆ ಬೆಂಬಲ ನೀಡಿದ ಕ್ಲಬ್ ಮತ್ತು ಪ್ಯಾರಿಸ್ ನಗರದ ಜನರಿಗೆ ಧನ್ಯವಾದ ಹೇಳಲು ಬಯಸುತ್ತೇನೆ” ಎಂದು ಹೇಳುವ ಮೂಲಕ ಮೆಸ್ಸಿ ವಿದಾಯ ಹೇಳಿದ್ದರು.
ಮೆಸ್ಸಿ ಅವರು ಪಿಎಸ್‌ಜಿ ತಂಡ ತೊರೆದ ಎರಡೇ ದಿನಗಳಲ್ಲಿ ಮಹತ್ವದ ಸುದ್ದಿಯೊಂದು ಹೊರಬಿದ್ದಿದ್ದು ಅವರು ಅಲ್ ನಾಸರ್ ಕ್ಲಬ್ ಪರ ಒಪ್ಪಂದ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ಇವರ ಜತೆಗೆ ಕರೀಂ ಬೆಂಜೆಮಾ ಕೂಡ ಈ ತಂಡ ಸೇರಲಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಾಗಿಲ್ಲ. ಹಾಗೂ ಈ ವಿಚಾರವಾಗಿ ಉಭಯ ಆಟಗಾರರು ಕೂಡ ಎಲ್ಲಿಯೂ ಪ್ರತಿಕ್ರಿಯೆ ನೀಡಿಲ್ಲ.
ಇದನ್ನೂ ಓದಿ Lionel Messi: ಮತ್ತೆ ಬಾರ್ಸಿಲೋನಾ ಪರ ಆಡಲಿದ್ದಾರೆ ಲಿಯೋನೆಲ್ ಮೆಸ್ಸಿ!
ಮೆಸ್ಸಿ ಅವರು ಇತ್ತೀಚೆಗಷ್ಟೆ ಅನಧಿಕೃತವಾಗಿ ಪಿಎಸ್‌ಜಿ ತಂಡಕ್ಕೆ ತಿಳಿಸದೇ 2 ದಿನಗಳ ಕಾಲ ಸೌದಿ ಅರೇಬಿಯಕ್ಕೆ ತೆರಳಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಪಿಎಸ್‌ಜಿ ತಂಡ ಮೆಸ್ಸಿಗೆ ಎರಡು ವಾರಗಳ ನಿಷೇಧ ಹೇರಿತ್ತು. ಇದರ ಬೆನ್ನಲ್ಲೇ ಮೆಸ್ಸಿ ಅವರು ಸೌದಿ ತಂಡಕ್ಕೆ ವಲಸೆ ಹೋಗುವ ಸಾಧ್ಯತೆಯಿದೆ ಎಂದು ಸುದ್ದಿ ಹಬ್ಬಿತ್ತು. ಇದೀಗ ವರದಿಯಾದ ಪ್ರಕಾರ ಮೆಸ್ಸಿ ಅವರು ಸೌದಿ ತಂಡಕ್ಕೆ ಸೇರುವುದು ಬಹುತೇಕ ಖಚಿತಗೊಂಡಂತಿದೆ.