Site icon Vistara News

Wimbeldon : ಕೊರೊನಾ ಸೋಂಕಿಗೊಳಗಾದ ಬೆರೆಟಿನಿ ಟೂರ್ನಿಯಿಂದ ಔಟ್‌

wimbeldon

ಲಂಡನ್‌: ರಷ್ಯಾ ಹಾಗೂ ಬೆಲಾರಸ್‌ನ ಆಟಗಾರರಿಗೆ ನಿಷೇಧ ಹೇರಿದ್ದ ಹಿನ್ನೆಲೆಯಲ್ಲಿ ಕಳೆಗುಂದಿದ್ದ ವರ್ಷದ ಮೂರನೇ ಗ್ರ್ಯಾನ್‌ ಸ್ಲಾಮ್‌ Wimbeldon ಕೊರೊನಾ ಕಾಟದಿಂದಲೂ ಮತ್ತಷ್ಟು ಹಿನ್ನಡೆ ಅನುಭವಿಸುವಂತಾಗಿದೆ. ಕಳೆದ ವರ್ಷದ ರನ್ನರ್ ಅಪ್‌ ಇಟಲಿಯ ಮ್ಯಾಟಿಯೊ ಬೆರೆಟಿನಿ ಮಂಗಳವಾರ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹಿಂದಕ್ಕೆ ಸರಿದಿದ್ದು, ಈ ಸಾಲಿನ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ.

೨೬ ವರ್ಷದ ಬೆರೆಟಿನಿಗೆ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ ವಿಷಾಧದ ಪೋಸ್ಟ್‌ ಹಾಕಿರುವ ಅವರು ಟೂರ್ನಿಯಿಂದ ನಿರ್ಗಮಿಸಿದ್ದಾರೆ. ಇದಕ್ಕಿಂತ ಮೊದಲು ೨೦೧೭ರ ರನ್ನರ್‌ ಅಪ್‌ ಕ್ರೊಯೇಷಿಯಾದ ಮರಿನ್‌ ಸಿಲಿಕ್‌ ಅವರೂ ಸೋಂಕಿನ ಕಾರಣಕ್ಕೆ ಹಾಲಿ ಆವೃತ್ತಿಯ ಹುಲ್ಲಿನಂಗಳದ ಟೂರ್ನಿಯಿಂದ ಹೊರ ನಡೆಯುವಂತಾಗಿತ್ತು.

“ನನಗಿದು ಅತ್ಯಂತ ಬೇಸರದ ವಿಷಯ. ಕೊರೊನಾ ಪಾಸಿಟಿವ್‌ ವರದಿ ಬಂದಿರುವ ಹಿನ್ನೆಲೆಯಲ್ಲಿ ವಿಂಬಲ್ಡನ್‌ನಿಂದ ಹೊರಗೆ ನಡೆಯಬೇಕಾಗಿದೆ,” ಎಂದು ಬೆರೆಟಿನಿ ಇನ್‌ಸ್ಟಾಗ್ರಾಮ್‌ ಪೋಸ್ಟ್‌ ಪ್ರಕಟಿಸಿದ್ದಾರೆ.

“ಕಳೆದ ಕೆಲವು ದಿನಗಳಿಂದ ನನಗೆ ಜ್ವರದ ಲಕ್ಷಣಗಳು ಕಾಣಿಸಿಕೊಂಡಿದ್ದವು. ಆದರೂ ಅದು ಗಂಭೀರವಾಗಿರಲಿಲ್ಲ. ಆದರೆ, ಆರೋಗ್ಯ ಸುರಕ್ಷತೆಯ ಹಿನ್ನೆಲೆಯಲ್ಲಿ ನಡೆಸಿದ ಪರೀಕ್ಷೆ ವೇಳೆ ಕೋವಿಡ್‌-೧೯ ಸೋಂಕಿಗೆ ಒಳಗಾಗಿರುವುದು ಪತ್ತೆಯಾಗಿದೆ,” ಎಂದು ಬೆರೆಟಿನಿ ಬರೆದುಕೊಂಡಿದ್ದಾರೆ.

ಬೆರೆಟಿನಿ ಈ ಆವೃತ್ತಿಯ ಟ್ರೋಫಿ ಗೆಲ್ಲುವ ಫೇವರಿಟ್‌ ಆಟಗಾರ ಎನಿಕೊಂಡಿದ್ದರು. ಈ ಹಿಂದಿನ ಹುಲ್ಲಿನಂಗಣದ ಟೂರ್ನಿಗಳಾಗಿರುವ ಸ್ಟುಟ್‌ಗರ್ಟ್‌ ಹಾಗೂ ಕ್ವೀನ್ಸ್‌ ಕ್ಲಬ್‌ನಲ್ಲಿ ಪ್ರಶಸ್ತಿ ಗೆದ್ದಿರುವ ಅವರಿಗೆ ವಿಂಬಲ್ಡನ್‌ ಟ್ರೋಫಿಗೆ ಮುತ್ತಿಡುವ ಅವಕಾಶವಿತ್ತು.

ಕಳೆದ ವರ್ಷ ನಡೆದಿರಲಿಲ್ಲ

ಕೊರೊನಾ ಕಾರಣಕ್ಕೆ ೨೦೨೧ನೇ ಆವೃತ್ತಿಯ ವಿಂಬಲ್ಡನ್‌ ನಡೆದಿರಲಿಲ್ಲ. ಈ ಬಾರಿ ಆಯೋಜನೆ ಮಾಡಿದ್ದರೂ, ಕೊರೊನಾ ನಿಯಮಗಳು ಜಾರಿಯಲ್ಲಿವೆ. ಅದರೆ, ವ್ಯಾಕ್ಸಿನ್‌ ಕಡ್ಡಾಯವಲ್ಲ. ಅದೇ ರೀತಿ ಪ್ರೇಕ್ಷಕರಿಗೂ ಅವಕಾಶ ಕಲ್ಪಿಸಲಾಗಿದೆ.

Exit mobile version