ಲಂಡನ್: ಜೂನ್ 7ರಿಂದ 11 ರವರೆಗೆ ಲಂಡನ್ನ ಓವಲ್ನಲ್ಲಿ ನಡೆಯಲಿರುವ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ (ಡಬ್ಲ್ಯುಟಿಸಿ) ಫೈನಲ್ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿವೆ. ಕಳೆದ ಬಾರಿಯೂ ಫೈನಲ್ಗೆ ಅರ್ಹತೆ ಪಡೆದಿದ್ದ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೋತಿತ್ತು. ಇದೀಗ ಎರಡನೇ ಅವಕಾಶ ಪಡೆದಿದ್ದು ಕಪ್ ಗೆಲ್ಲುವ ವಿಶ್ವಾಸ ಮೂಡಿದೆ. ಮತ್ತೊಂದೆಡೆ, ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯಾ ತಂಡ ತನ್ನ ಮೊದಲ ಫೈನಲ್ ಪಂದ್ಯದಲ್ಲಿಯೇ ಗೆದ್ದು ಬೀಗಲು ಮುಂದಾಗಿದೆ.
ಈ ಪಂದ್ಯದ ಹಿನ್ನೆಲೆಯಲ್ಲಿ ಇತ್ತಂಡಗಳ ನಾಯಕರಾದ ರೋಹಿತ್ ಶರ್ಮಾ ಮತ್ತು ಪ್ಯಾಟ್ ಕಮಿನ್ಸ್ ವೀಕ್ಷಕ ವಿವರಣೆಗಾರ ಹರ್ಷ ಭೋಗ್ಲೆ ಆಯೋಜಿಸಿದ್ದ ” ಆನ್ ಇವ್ನಿಂಗ್ ವಿತ್ ಟೆಸ್ಟ್ ಕ್ರಿಕೆಟ್ ಅಟ್ ಓವಲ್ ಎಂಬ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ರೋಹಿತ್ ಶರ್ಮಾ ಆಸ್ಟ್ರೇಲಿಯಾ ತಂಡವನ್ನು ಬಗ್ಗಿ ಬಡಿದು ಟ್ರೋಫಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು. ಅಲ್ಲದೆ, ಚಾಂಪಿಯನ್ಷಿಪ್ ಋತುವಿನಲ್ಲಿ ಭಾರತ ತಂಡದ ಅಭಿಯಾನದ ಬಗ್ಗೆ ಮಾತನಾಡಿದರು.
ಗಾಯಗಳು ಅಥವಾ ವೈಯಕ್ತಿಕ ಕಾರಣಗಳಿಂದಾಗಿ ಪ್ರಮುಖ ಆಟಗಾರರ ಅಲಭ್ಯತೆ ನಡುವೆಯೂ ಭಾರತ ತಂಡ ಅಜಿಂಕ್ಯ ರಹಾನೆ ನೇತೃತ್ವದಲ್ಲಿ ಆಸ್ಟ್ರೇಲಿಯಾ ಪ್ರವಾಸ ಮಾಡಿ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯನ್ನು 2-1 ರಿಂದ ಗೆದ್ದುಕೊಂಡಿತ್ತು. ಇದನ್ನು ರೋಹಿತ್ ಪುನರುಚ್ಚರಿಸಿದರು/
ಕೊರೊನಾ ಕಾರಣಕ್ಕೆ ಕ್ರಿಕೆಟ್ ಕ್ಷೇತ್ರವು ಕಳೆಗುಂದಿತ್ತು. ಜನರು ಮನೆಯೊಳಗೆ ಸಿಲುಕಿಕೊಂಡಿದ್ದರು, ನಾವೆಲ್ಲರೂ ಬಬಲ್ನಲ್ಲಿದ್ದೆವು. ನಮ್ಮ ನಿರೀಕ್ಷೆಗಳ ಬಗ್ಗೆ ಸ್ಪಷ್ಟತೆ ಇರಲಿಲ್ಲ. ನಮ್ಮ ತಂಡದ ಕಿರಿಯ ಆಟಗಾರರು ಬಬಲ್ ಬಗ್ಗೆ ಸಾಕಷ್ಟು ಅಸಮಾಧಾನಗೊಂಡಿದ್ದರು. ಆದರೆ, ಎಲ್ಲರೂ ಅಡೆತಡೆಗಳನ್ನು ಜಯಿಸಿದೆವು. ಪರಿಸ್ಥಿತಿಯಿಂದ ಹೊರಬಂದೆವು ಎಂದು ರೋಹಿತ್ ಈ ಸಂದರ್ಭದಲ್ಲಿ ಹೇಳಿದರು.
ನಾವು ಆಸ್ಟ್ರೇಲಿಯಾದಲ್ಲಿ ಆಡಿದ ರೀತಿ ಫೈನಲ್ ಪಂದ್ಯಕ್ಕೂ ಸ್ಫೂರ್ತಿಯಾಗಿದೆ. ಅಡಿಲೆಡ್ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತು ನಂತರ ನಾವು ಆತಿಥೇಯ ತಂಡಕ್ಕೆ ತಿರುಗೇಟು ಕೊಟ್ಟೆವು. ಆಗ ತಂಡ ಗಾಯದ ಸಮಸ್ಯೆಹಾಗೂ ಹಿರಿಯರ ಅಲಭ್ಯತೆಯಿಂದ ನಲುಗಿತ್ತು ಎಂದು ರೋಹಿತ್ ಹೇಳಿದರು.
ನಾವು ನಮ್ಮ ಉತ್ಸಾಹವನ್ನು ಸರಿಯಾಗಿ ಬಳಸಿಕೊಂಡೆವು ಹಾಗೂ ಅಗ್ರಸ್ಥಾನಕ್ಕೆ ಏರಿದೆವು. ಈ ಫಲಿತಾಂಶದ ಹಿನ್ನೆಲೆಯಲ್ಲಿ ಸಾಕಷ್ಟು ಕಷ್ಟಗಳಿವೆ. ನಮ್ಮ ತಂಡದ ಯುವ ಆಟಗಾರರು ಶ್ರಮಪಟ್ಟರು ಹಾಗೂ ತಂಡಕ್ಕೆ ಉತ್ತಮ ಫಲಿತಾಂಶ ತಂದುಕೊಟ್ಟರು. ಒಟ್ಟಿನಲ್ಲಿ ಆ ಸರಣಿಯು ಭಾರತದ ಹೊರಗಡೆ ನಮ್ಮ ಪ್ರದರ್ಶನಕ್ಕೆ ಮಾದರಿಯಾಗಿದೆ. ವಿದೇಶಗಳಲ್ಲಿ ಉತ್ತಮ ಕ್ರಿಕೆಟ್ ಆಡಬಲ್ಲೆವು ಎಂಬುದಕ್ಕೆ ಅದು ಉದಾಹರಣೆ ಎಂದರು.
ಈ ವರ್ಷದ ಆರಂಭದಲ್ಲಿ ತವರು ನೆಲದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಭಾರತ 2-1 ಅಂತರದಿಂದ ಗೆದ್ದುಕೊಂಡಿತ್ತು. ಈ ಸರಣಿಗೆ ಆಯ್ಕೆ ಮಾಡಿದ ಪಿಚ್ಗಳು ಟೀಕೆಗಳಿಗೆ ಕಾರಣವಾಗಿದ್ದವು.
ತಮ್ಮ ನಾಯಕತ್ವದಲ್ಲಿ ಪಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವನ್ನು ನೆನಪಿಸಿಕೊಂಡ ರೋಹಿತ್, ಆಸ್ಟ್ರೇಲಿಯಾ ವಿರುದ್ಧದ ಹಿಂದಿನ ಸರಣಿ ರೋಮಾಂಚನಕಾರಿಯಾಗಿತ್ತು. ಕಠಿಣ ಪರಿಸ್ಥಿತಿಗಳು, ಸವಾಲಿನ ಪಿಚ್ಗಳನ್ನು ಎದುರಿಸುವಲ್ಲಿ ಯಶಸ್ವಿಯಾದೆವು ಎಂದು ರೋಹಿತ್ ಹೇಳಿದ್ದಾರೆ.