ನವದೆಹಲಿ: 2026ರ ಫಿಫಾ ವಿಶ್ವಕಪ್(FIFA World Cup 2026 Qualifiers) ಮತ್ತು 2027ರ ಎಎಫ್‌ಸಿ ಏಷ್ಯಕಪ್‌ನ ಪ್ರಾಥಮಿಕ ಜಂಟಿ ಅರ್ಹತಾ ಸುತ್ತಿನ ಭಾರತದ ಮೊದಲ ಎರಡು ಪಂದ್ಯಗಳಿಗೆ ಭುವನೇಶ್ವರ(Bhubaneswar) ಮತ್ತು ಗುವಾಹಟಿ(Guwahati) ಆತಿಥ್ಯ ವಹಿಸಿದೆ. ಈ ವಿಚಾರವನ್ನು ಶನಿವಾರ ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ತನ್ನ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದೆ.
ಎ ಗುಂಪಿನಲ್ಲಿ ಭಾರತ
ಭಾರತವು ಏಷ್ಯನ್ ಅರ್ಹತಾ ಪಂದ್ಯಗಳ ಎ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿದೆ. ಕತಾರ್, ಕುವೈತ್ ಮತ್ತು ಅಫಘಾನಿಸ್ತಾನ ಮತ್ತು ಮಂಗೋಲಿಯಾ ಕೂಡ ಈ ಗುಂಪಿನಲ್ಲಿ ಕಾಣಿಸಿಕೊಂಡಿದೆ.
ಕುವೈತ್ ವಿರುದ್ಧದ ಮೊದಲ ಪಂದ್ಯವನ್ನಾಡುವ ಮೂಲಕ ಭಾರತ ತನ್ನ ಅಭಿಯಾನವನ್ನು ಆರಂಭಿಸಲಿದೆ. ಈ ಪಂದ್ಯ ನವೆಂಬರ್ 16 ರಂದು ಭುವನೇಶ್ವರದ ಕಳಿಂಗ ಸ್ಟೇಡಿಯಂನಲ್ಲಿ ನಡೆಯಲಿದೆ. ಇದಾದ ಬಳಿಕ 2024ರಲ್ಲಿ, ಭಾರತ ತಮಡ ಅಫಘಾನಿಸ್ತಾನ ಮತ್ತು ಮಂಗೋಲಿಯಾ ತಂಡದ ವಿರುದ್ಧ ಪಂದ್ಯ ಆಡಲಿದೆ.
ಈ ಪಂದ್ಯಗಳನ್ನು ಆಯೋಜಿಸಿದ್ದಕ್ಕಾಗಿ ಒಡಿಶಾದ ಫುಟ್‌ಬಾಲ್ ಸಂಸ್ಥೆ ಮತ್ತು ಅಸ್ಸಾಂ ಫುಟ್‌ಬಾಲ್ ಸಂಸ್ಥೆಯನ್ನು ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಶಾಜಿ ಪ್ರಭಾಕರನ್ ಅವರು ಅಭಿನಂದಿಸಿದ್ದಾರೆ. ವಿಶ್ವ ದರ್ಜೆಯ ಮಟ್ಟದಲ್ಲಿ ಪಂದ್ಯಗಳನ್ನು ಆಯೋಜಿಸಲು ಮುಂದಾಗಿರುವುದು ಹೆಮ್ಮೆಯ ವಿಚಾರ. ಪಂದ್ಯಕ್ಕೆ ಯಾವುದೇ ಅಡೆತಡೆ ಬಾರದೆ ಯಶಸ್ವಿಯಾಗಿ ನೆರವೇರಲಿ ಎಂದು ಸಂಬಂಧಪಟ್ಟ ರಾಜ್ಯ ಸರ್ಕಾರಗಳಿಗೆ ಹಾರೈಸಿದರು. 2027ರ ಎಎಫ್‌ಸಿ ಏಷ್ಯನ್ ಕಪ್ ಸೌದಿ ಅರೇಬಿಯಾದಲ್ಲಿ ನಡೆಯಲಿದೆ. ಯುನೈಟೆಡ್ ಸ್ಟೇಟ್ಸ್, ಮೆಕ್ಸಿಕೋ ಮತ್ತು ಕೆನಡಾವು 2026ರ ಫಿಫಾ ವಿಶ್ವಕಪ್ ಆಯೋಜಿಸುತ್ತದೆ.
ಇದನ್ನೂ ಓದಿ FIFA: ಆಟಗಾರ್ತಿಗೆ ಚುಂಬಿಸಿದ್ದ ಲೂಯಿಸ್ ರುಬೆಲೆಸ್ಗೆ ಅಮಾನತು ಶಿಕ್ಷೆ
ಏಷ್ಯಾನ್ ಗೇಮ್ಸ್ ಸಜ್ಜಾಗುತ್ತಿರುವ ಚೆಟ್ರಿ ಪಡೆ
ಸೆಪ್ಟೆಂಬರ್ 23ರಿಂದ ಅಕ್ಟೋಬರ್ 08ರ ವರೆಗೆ ಚೀನಾದ ಹ್ಯಾಂಗ್ಝೂನಲ್ಲಿ(Hangzhou, China) ನಡೆಯಲಿರುವ ಪ್ರತಿಷ್ಠಿತ ಏಷ್ಯನ್ ಗೇಮ್ಸ್ಗೆ(Asian Games) ಸುನೀಲ್ ಚೆಟ್ರಿ ಸಾರಥ್ಯದ ಭಾರತ ತಂಡ ಸಜ್ಜಾಗುತ್ತಿದೆ. ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಚೀನಾ, ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್ ಕೂಡ ಕಾಣಿಸಿಕೊಂಡಿದೆ.
ಫಿಫಾ ರ್‍ಯಾಂಕಿಂಗ್‌ನಲ್ಲಿ ಬಾಂಗ್ಲಾ ಹಾಗೂ ಮ್ಯಾನ್ಮಾರ್ ತಂಡಕ್ಕಿಂತ ಮೇಲಿರುವ ಭಾರತ ತಂಡ ಅಂತಿಮ 16ರ ಸುತ್ತು ಪ್ರವೇಶಿಸುವ ನಿರೀಕ್ಷೆ ಇದೆ. ಕಳೆದ ಒಂದು ವರ್ಷಗಳಿಂದ ಭಾರತದ ಫುಟ್ಬಾಲ್ ತಂಡ ಆಡಿದ ಎಲ್ಲ ಟೂರ್ನಿಗಳಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಲೇ ಬಂದಿದೆ. ಇಚ್ಚೀಚೆಗಷ್ಟೇ ಸ್ಯಾಫ್ ಟೂರ್ನಿಯಲ್ಲಿಯೂ ಚಾಂಪಿಯನ್ ಪಟ್ಟ ಅಲಂಕರಿಸಿತ್ತು. ತಂಡದ ಗೆಲುವಿನಲ್ಲಿ ನಾಯಕ ಸುನೀಲ್ ಚೆಟ್ರಿ ಶ್ರೇಷ್ಠ ಸಾಧನೆ ತೋರಿದ್ದರು. ಇದೀಗ ಏಷ್ಯನ್ ಗೇಮ್ಸ್ನಲ್ಲಿಯೂ ಅವರು ಕಾಲ್ಚಳಕ ತೋರ್ಪಡಿಸಲು ಸಿದ್ಧರಾಗಿದ್ದಾರೆ.
ಭಾರತ ತಂಡ
ಗೋಲ್‌ಕೀಪರ್: ಗುರುಪ್ರೀತ್ ಸಿಂಗ್ ಸಂಧು, ಗುರ್ಮೀತ್ ಸಿಂಗ್, ಧೀರಜ್ ಸಿಂಗ್.
ಡಿಫೆಂಡರ್: ಸಂದೇಶ್ ಜಿಂಗಾನ್, ಅನ್ವರ್ ಅಲಿ, ನರೇಂದರ್ ಗೆಹ್ಲೋಟ್, ಲಾಲ್‌ಚುಂಗ್‌ನುಂಗ, ಆಕಾಶ್ ಮಿಶ್ರಾ, ರೋಶನ್ ಸಿಂಗ್, ಆಶಿಷ್ ರೈ.
ಮಿಡ್‌ಫಿಲ್ಡರ್: ಜೀಕ್ಸನ್ ಸಿಂಗ್, ಸುರೇಶ್ ಸಿಂಗ್, ಅಪಿಯ ರಾಲ್ಟೆ, ಅಮರ್‌ಜೀತ್ ಸಿಂಗ್, ರಾಹುಲ್ ಕೆ.ಪಿ., ಎನ್. ಮಹೇಶ್ ಸಿಂಗ್.
ಫಾರ್ವರ್ಡ್ಸ್: ಶಿವಶಕ್ತಿ ನಾರಾಯ ಣನ್, ರಹೀಂ ಅಲಿ, ಸುನೀಲ್ ಚೆಟ್ರಿ, ಅನಿಕೇತ್ ಜಾಧವ್, ವಿಕ್ರಮ್ ಪ್ರತಾಪ್ ಸಿಂಗ್, ರೋಹಿತ್ ದಾನು.