Site icon Vistara News

Bhuvneshwar Kumar | ಒಂದೇ ಪಂದ್ಯದಲ್ಲಿ ಹಲವು ದಾಖಲೆ ನಿರ್ಮಿಸಿದ ವೇಗಿ ಭುವನೇಶ್ವರ್​ ಕುಮಾರ್​

t20

ಸಿಡ್ನಿ: ನೆದರ್ಲೆಂಡ್ಸ್​​ ವಿರುದ್ಧದ ಟಿ20 ವಿಶ್ವ ಕಪ್ ಪಂದ್ಯದಲ್ಲಿ ಭಾರತ ತಂಡದ ವೇಗಿ ಭುವನೇಶ್ವರ್ ಕುಮಾರ್ (Bhuvneshwar Kumar) ಹೊಸ ಇತಿಹಾಸ ಬರೆದಿದ್ದಾರೆ. ಈ ಪಂದ್ಯದಲ್ಲಿ ಬ್ಯಾಕ್ ಟು ಬ್ಯಾಕ್ 2 ಮೇಡನ್ ಓವರ್ ಎಸೆದು ಟಿ20 ಕ್ರಿಕೆಟ್​ನಲ್ಲಿ ಈ ದಾಖಲೆ ಬರೆದ ಮೊದಲ ಟೀಮ್ ಇಂಡಿಯಾ ಬೌಲರ್ ಎನಿಸಿಕೊಂಡರು.

ಅಷ್ಟೇ ಅಲ್ಲದೆ ಭುವಿ ಟಿ20 ವಿಶ್ವ ಕಪ್​ನಲ್ಲಿ ಈ ಸಾಧನೆ ಮಾಡಿದ ಮೂರನೇ ಬೌಲರ್ ಎನಿಸಿಕೊಂಡರು. ಇದಕ್ಕೂ ಮುನ್ನ ಇಂಗ್ಲೆಂಡ್​ನ ಗ್ರೇಮ್ ಸ್ವಾನ್ (2012), ಶ್ರೀಲಂಕಾದ ನುವಾನ್ ಕುಲಶೇಖರ (2014) ಮತ್ತು ರಂಗನಾ ಹೆರಾತ್ (2014) ಈ ಸಾಧನೆ ಮಾಡಿದ್ದರು. ಇದೀಗ ಭುವಿ ಕೂಡ ಈ ಸಾಧಕರ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ಬುಮ್ರಾ ದಾಖಲೆ ಸರಿಗಟ್ಟಿದ ಭುವಿ

ಟಿ20 ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಪರ ಅತ್ಯಧಿಕ ಮೇಡನ್ ಓವರ್ ಎಸೆದ ಜಸ್​ಪ್ರೀತ್ ಬುಮ್ರಾ ದಾಖಲೆಯನ್ನು ಕೂಡ ಭುವಿ ಸರಿಗಟ್ಟಿದರು. ಬುಮ್ರಾ-ಭುವಿ ಟಿ20 ಕ್ರಿಕೆಟ್​ನಲ್ಲಿ ಒಟ್ಟು 9 ಮೇಡನ್ ಓವರ್ ಎಸೆಯುವ ಮೂಲಕ ಜಂಟಿ ವಿಶೇಷ ದಾಖಲೆ ಹೊಂದಿದ್ದಾರೆ. ಹಾಗೆಯೇ ಒಂದು ವರ್ಷದಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅತ್ಯಧಿಕ ಮೇಡನ್ ಓವರ್​ ಮಾಡಿದ ದಾಖಲೆ ಕೂಡ ಭುವಿ ಪಾಲಾಗಿದೆ. ಇದಕ್ಕೂ ಮುನ್ನ ಈ ದಾಖಲೆ ಬುಮ್ರಾ ಹೆಸರಿನಲ್ಲಿತ್ತು. ಬುಮ್ರಾ 2016ರಲ್ಲಿ 4 ಮೇಡನ್ ಓವರ್ ಮಾಡಿದ್ದರು. ಇದೀಗ 2022 ರಲ್ಲಿ ಭುವನೇಶ್ವರ್ ಕುಮಾರ್ 5 ಮೇಡನ್ ಓವರ್ ಎಸೆಯುವ ಮೂಲಕ ಒಂದು ವರ್ಷದಲ್ಲಿ ಟಿ20 ಕ್ರಿಕೆಟ್​ನಲ್ಲಿ ಅತ್ಯಧಿಕ ಮೇಡನ್ ಓವರ್ ಎಸೆದ ಬೌಲರ್ ಎಂಬ ವಿಶ್ವ ದಾಖಲೆ ಬರೆದಿದ್ದಾರೆ.

ಗುರುವಾರದ ನೆದರ್ಲೆಂಡ್ಸ್​ ವಿರುದ್ಧದ ಪಂದ್ಯದಲ್ಲಿ ಭುವನೇಶ್ವರ್​ ಕುಮಾರ್​ ಮೂರು ಓವರ್​ನಲ್ಲಿ 9 ರನ್​ ಬಿಟ್ಟುಕೊಟ್ಟು 2 ವಿಕೆಟ್​ ಕಿತ್ತು ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಇದನ್ನೂ ಓದಿ | Rohit Sharma | ಸಿಕ್ಸರ್​ ಮೂಲಕ ಯುವರಾಜ್​ ಸಿಂಗ್​ ದಾಖಲೆ ಮುರಿದ ರೋಹಿತ್​ ಶರ್ಮಾ

Exit mobile version