ಮುಂಬಯಿ: ಕಳೆದ ಆಗಸ್ಟ್ ೨೮ರಂದು ನಡೆದ ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ೨೬ ರನ್ ವೆಚ್ಚದಲ್ಲಿ ೪ ವಿಕೆಟ್ ಕಬಳಿಸಿದ್ದರು. ಆ ಪಂದ್ಯದಲ್ಲಿ ಭಾರತ ತಂಡ (Team India) ೫ ವಿಕೆಟ್‌ಗಳ ಜಯವನ್ನು ತನ್ನದಾಗಿಸಿಕೊಂಡಿತ್ತು. ಆ ವೇಳೆ ಬಹುತೇಕ ಕ್ರಿಕೆಟ್ ವಿಶ್ಲೇಷಕರ ಮನದಲ್ಲಿ ಮೂಡಿದ ಸಂಗತಿ ಏನೆಂದರೆ ಮುಂಬರುವ ಟಿ೨೦ ವಿಶ್ವ ಕಪ್‌ನಲ್ಲಿ ಭುವನೇಶ್ವರ್ ಕುಮಾರ್ ನಿರ್ಣಾಯಕ ಬೌಲರ್ ಎನಿಸಿಕೊಳ್ಳಲಿದ್ದಾರೆ ಎಂದು. ಆದರೆ, ಒಂದೇ ತಿಂಗಳಲ್ಲಿ ಅಭಿಪ್ರಾಯ ಬದಲಾಗಿವೆ. ಡೆತ್ ಓವರ್‌ಗಳಲ್ಲಿ ಅವರು ಈ ರೀತಿ ಚೆಂಡೆಸೆದರೆ ವಿಶ್ವ ಕಪ್ ಪಂದ್ಯಗಳಲ್ಲಿ ಎದುರಾಳಿ ತಂಡದ ರನ್‌ಗೆ ಕಡಿವಾಣ ಹಾಕುವ ಜವಾಬ್ದಾರಿ ಕೊಡುವುದು ಯಾರಿಗೆ?
ಕಳೆದ ನಾಲ್ಕು ಪಂದ್ಯಗಳ ಮೂರು ಇನಿಂಗ್ಸ್‌ಗಳಲ್ಲಿ ಭುವನೇಶ್ವರ್ ಕುಮಾರ್ ಅವರು ಚೆನ್ನಾಗಿ ದಂಡಿಸಿಕೊಂಡಿದ್ದಾರೆ. ಒಂದರ್ಥದಲ್ಲಿ ಭಾರತದ ಸೋಲಿಗೂ ಕಾರಣರಾಗಿದ್ದಾರೆ. ತಮ್ಮ ಬಳಿ ಇರುವ ಯಾರ್ಕರ್, ವೈಡ್ ಯಾರ್ಕರ್, ನಿಧಾನ ಎಸೆತ, ನಕಲ್ ಬಾಲ್, ಬೌನ್ಸರ್ ಅಸ್ತ್ರಗಳನ್ನು ಪ್ರಯೋಗಿಸಿದರೂ ಅವರಿಗೆ ಅದು ಉಪಯೋಗಕ್ಕೆ ಬರಲಿಲ್ಲ. ೧೯ ನೇ ಓವರ್‌ನಲ್ಲಿ ಸಿಕ್ಕಾಪಟ್ಟೆ ರನ್ ಬಿಟ್ಟುಕೊಟ್ಟರು. ಈ ರೀತಿಯಾಗಿ ಸ್ಪೆಷಲಿಸ್ಟ್ ಬೌಲರ್ ಭಾರತ ತಂಡದ ದೊಡ್ಡ ಚಿಂತೆಯಾಗಿ ಮಾರ್ಪಟ್ಟಿದ್ದಾರೆ.
ಹೀಗಿತ್ತು ಬೌಲಿಂಗ್
ಏಷ್ಯಾ ಕಪ್ ಸೂಪರ್-೪ ಗೇಮ್‌ನ ಭಾರತ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನಕ್ಕೆ ಕೊನೇ ಎರಡು ಓವರ್‌ಗಳಲ್ಲಿ ೨೬ ರನ್ ಬೇಕಾಗಿತ್ತು. ೧೯ನೇ ಓವರ್ ಎಸೆದ ಭುವನೇಶ್ವರ್ ಕುಮಾರ್ ೧೯ ರನ್ ಬಿಟ್ಟುಕೊಟ್ಟರು. ಆ ಪಂದ್ಯದಲ್ಲಿ ಅವರು ನಾಲ್ಕು ಓವರ್‌ಗಳ ಸ್ಪೆಲ್‌ನಲ್ಲಿ ೪೦ ರನ್ ನೀಡಿ ಒಂದೇ ಒಂದು ವಿಕೆಟ್ ಕಬಳಿಸಲಿಲ್ಲ. ಲಂಕಾ ವಿರುದ್ಧದ ಮುಂದಿನ ಪಂದ್ಯದಲ್ಲಿ ಎದುರಾಳಿ ಶ್ರೀಲಂಕಾಕ್ಕೆ ೨ ಓವರ್‌ಗಳಲ್ಲಿ ೨೧ ರನ್ ಬೇಕಾಗಿತ್ತು. ಭುವಿ ೧೯ ನೇ ಓವರ್‌ನಲ್ಲಿ ೧೪ ರನ್ ಸೋರಿಕೆ ಮಾಡಿದರು. ಆ ಪಂದ್ಯದಲ್ಲೂ ಅನುಭವಿಯಾಗಿರುವ ಅವರು ವಿಕೆಟ್ ಪಡೆಯದೇ ೩೦ ರನ್ ಕೊಟ್ಟರು.
ಮೊಹಾಲಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಎದುರಾಳಿ ತಂಡಕ್ಕೆ ಕೊನೇ ನಾಲ್ಕು ಓವರ್‌ಗಳಲ್ಲಿ ೪೪ ರನ್ ಬೇಕಾಗಿತ್ತು. ೧೫ ಹಾಗೂ ೧೭ನೇ ಓವರ್ ಎಸೆದ ಭುವಿ, ೧೬ ಮತ್ತು ೧೯ ರನ್ ಸೋರಿಕೆ ಮಾಡಿದರು. ಅವರ ನಾಲ್ಕು ಓವರ್‌ಗಳ ಪೂರ್ಣ ಸ್ಪೆಲ್ ಹೀಗಿದೆ. ೪-೦-೫೨-೦. ಟಿ೨೦ ಮಾದರಿಯಲ್ಲಿ ಮೊದಲ ಬಾರಿಗೆ ಅವರು ೫೦ಕ್ಕಿಂತ ಅಧಿಕ ರನ್ ಬಿಟ್ಟುಕೊಟ್ಟರು.
ಸುನೀಲ್ ಗವಾಸ್ಕರ್ ಏನಂದರು?
ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಉತ್ತಮವಾಗಿ ಬೌಲ್ ಮಾಡಲಿಲ್ಲ. ಈ ವಿಭಾಗವೇ ಭಾರತ ತಂಡದ ದೊಡ್ಡ ಚಿಂತೆ. ಅದರಲ್ಲೂ ಭುವನೇಶ್ವರ್ ಕುಮಾರ್ ಅವರಂಥ ಅನುಭವಿ ಬೌಲರ್ ಪ್ರತಿಯೊಂದು ಓವರ್‌ನಲ್ಲಿ ಮಿತಿಗಿಂತ ಹೆಚ್ಚು ರನ್ ಬಿಟ್ಟುಕೊಡುತ್ತಿರುವುದು ಚಿಂತೆಯ ವಿಚಾರ. ಅವರ ದುರ್ಬಲ ಬೌಲಿಂಗ್ ಕಾರಣಕ್ಕೆ ಭಾರತ ತಂಡ ಪಾಕಿಸ್ತಾನ, ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡಿತು. ಆ ಪಂದ್ಯಗಳ ಪ್ರತಿಯೊಂದು ಎಸೆತಕ್ಕೆ ತಲಾ ಮೂರು ರನ್‌ಗಳಂತೆ ಬಿಟ್ಟುಕೊಟ್ಟಿದ್ದಾರೆ,” ಎಂದು ಬರೆದುಕೊಂಡಿದ್ದಾರೆ.
ಮಾಜಿ ಮಧ್ಯಮ ವೇಗಿ ಇರ್ಪಾನ್ ಪಠಾಣ್ ಕೂಡ ಇದೇ ಕಾಳಜಿ ವ್ಯಕ್ತಪಡಿಸಿದ್ದಾರೆ. ಇನಿಂಗ್ಸ್‌ನ ಕೊನೇ ಐದು ಓವರ್‌ಗಳಲ್ಲಿ ಒಂದು ಓವರ್ ಅನ್ನು ಮಾತ್ರ ಭುವನೇಶ್ವರ್ ಕುಮಾರ್‌ಗೆ ಮೀಸಲಿಡಿ ಎಂಬುದಾಗಿ ಹೇಳಿದ್ದಾರೆ.
ಇದನ್ನೂ ಓದಿ | IND vs PAK | ಪಾಕಿಸ್ತಾನ ವಿರುದ್ಧ ವಿಶೇಷ ದಾಖಲೆ ಸೃಷ್ಟಿಸಿದ ಭುವನೇಶ್ವರ್ ಕುಮಾರ್