ಬೆಂಗಳೂರು: ಕನ್ನಡದ ಬಿಗ್ ಬಾಸ್ ಸೀಸನ್ 10(Bigg Boss Kannada) ಆರಂಭಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಅಕ್ಟೋಬರ್ 8ರಂದು ಬಿಗ್ ಬಾಸ್ನಲ್ಲಿ ಸ್ಪರ್ಧಿಸುವ ಪಟ್ಟಿ ಬಿಡುಗಡೆಗೊಳ್ಳಲಿದೆ. ವರದಿಯೊಂದರ ಪ್ರಕಾರ ಟೀಮ್ ಇಂಡಿಯಾದ ಮಾಜಿ ಆಟಗಾರ, ಕರ್ನಾಟಕದ ಯಶಸ್ವಿ ಪೇಸ್ ಬೌಲರ್, “ದಾವಣಗೆರೆ ಎಕ್ಸ್‌ಪ್ರೆಸ್’ ಖ್ಯಾತಿಯ ಆರ್. ವಿನಯ್ ಕುಮಾರ್(Vinay Kumar) ಕೂಡ ಬಿಗ್ ಬಾಸ್ನಲ್ಲಿ ಇರಲಿದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಇನ್ಸ್ಟಾಗ್ರಾಮ್ನಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದೆ.
ಆರ್. ವಿನಯ್ ಕುಮಾರ್ ಮತ್ತು ಕಲರ್ಸ್ ಕನ್ನಡ ವಾಹಿನಿ ಮಾತ್ರ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯನ್ನು ನೀಡಿಲ್ಲ. ಆದರೆ ನೆಟ್ಟಿಗರು ಮಾತ್ರ ವಿನಯ್ ಕುಮಾರ್ ಪಾಲ್ಗೊಳ್ಳುವುದು ಖಚಿತ ಎನ್ನುತ್ತಿದ್ದಾರೆ.
ಮೂರು ಮಾದರಿಯ ಕ್ರಿಕೆಟ್‌ನಲ್ಲಿ ಆಡಿದ್ದ ವಿನಯ್ ಕುಮಾರ್
“ದಾವಣಗೆರೆ ಎಕ್ಸ್‌ಪ್ರೆಸ್’ ಖ್ಯಾತಿಯ ಆರ್. ವಿನಯ್ ಕುಮಾರ್ ಅವರು ಮೂರೂ ಮಾದರಿಯ ಕ್ರಿಕೆಟ್‌ನಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 2021ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್ ಮಾದರಿಗೆ ನಿವೃತ್ತಿ ನೀಡಿದ್ದರು. 1984ರ ಫೆ. 12ರಂದು ದಾವಣಗೆರೆಯಲ್ಲಿ ಜನಿಸಿದ ರಂಗನಾಥ್ ವಿನಯ್ ಕುಮಾರ್ ಭಾರತದ ಪರ ಏಕೈಕ ಟೆಸ್ಟ್, 31 ಏಕದಿನ ಹಾಗೂ 9 ಟಿ20 ಪಂದ್ಯಗಳನ್ನಾಡಿದ್ದಾರೆ. 2012ರ ಆಸ್ಟ್ರೇಲಿಯ ಪ್ರವಾಸದ ವೇಳೆ ಪರ್ತ್‌ನಲ್ಲಿ ಆಡಿದ ಟೆಸ್ಟ್‌ನಲ್ಲಿ ಅವರು ಜಹೀರ್, ಉಮೇಶ್ ಯಾದವ್ ಮತ್ತು ಇಶಾಂತ್ ಜತೆಗೂಡಿ ಬೌಲಿಂಗ್ ನಡೆಸಿದ್ದರು. ಮೊದಲ ಇನ್ನಿಂಗ್ಸ್‌ನಲ್ಲಿ ಮೈಕಲ್ ಹಸ್ಸಿ ಅವರ ವಿಕೆಟ್ ಉರುಳಿಸಿದ್ದಷ್ಟೇ ಅವರ ಸಾಧನೆಯಾಗಿದೆ. ಏಕದಿನದಲ್ಲಿ 38 ಮತ್ತು ಟಿ20ಯಲ್ಲಿ 10 ವಿಕೆಟ್ ಕೆಡವಿದ್ದರು.
ಕರ್ನಾಟಕ ಪರ ಉತ್ತಮ ಸಾಧನೆ
2004-05ರ ರಣಜಿ ಋತುವಿನಲ್ಲಿ ಅವರು ಕರ್ನಾಟಕ ಪರ ಪದಾರ್ಪಣೆ ಮಾಡಿದ್ದರು. ಯಶಸ್ವಿ ನಾಯಕನಾಗಿಯೂ ಮೂಡಿಬಂದರು. ಕೊನೆಯಲ್ಲೊಂದು ವರ್ಷ ಪುದುಚೆರಿಯನ್ನು ಪ್ರತಿನಿಧಿಸಿದ ವಿನಯ್, 139 ಪ್ರಥಮ ದರ್ಜೆ ಪಂದ್ಯಗಳಿಂದ 504 ವಿಕೆಟ್ ಹಾಗೂ 3,311 ರನ್ ಸಂಪಾದಿಸಿದ್ದಾರೆ. 32ಕ್ಕೆ 8 ವಿಕೆಟ್ ಕೆಡವಿದ್ದು ಅತ್ಯುತ್ತಮ ಸಾಧನೆ. ಎರಡು ಶತಕಗಳನ್ನೂ ಬಾರಿಸಿ ತಮ್ಮ ಆಲ್‌ರೌಂಡ್ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಐಪಿಎಲ್‌ನಲ್ಲಿ ಕೊಚ್ಚಿ, ಕೆಕೆಆರ್, ಮುಂಬೈ ಮತ್ತು ಆರ್‌ಸಿಬಿ ತಂಡಗಳ ಪರ ಆಡಿದ್ದಾರೆ.
ಇದನ್ನೂ ಓದಿ Bigg Boss Kannada: ಬಿಗ್ ಬಾಸ್ ʻಹತ್ತನೇ’ ಸೀಸನ್ ‘ಹತ್ತು’ ದಿನ ಬಾಕಿ; ಪ್ರಸಾರದ ಸಮಯ ರಿವೀಲ್!
ಕನ್ನಡ ಬಿಗ್ಬಾಸ್ 10ನೇ ಸೀಸನ್ ಪ್ರಸಾರ ಅಕ್ಟೋಬರ್ 08 ರಿಂದ ಆರಂಭವಾಗಲಿದೆ. ಪ್ರಸಾರದ ದಿನಾಂಕ ಫಿಕ್ಸ್ ಆದ ಬೆನ್ನಲ್ಲೇ ಸ್ಪರ್ಧಿಗಳು ಯಾರೆಲ್ಲ ಇರಬಹುದೆಂಬ ಚರ್ಚೆಗಳು ಸೋಷಿಯಲ್ ಮೀಡಿಯಾದಲ್ಲಿ ಆಗುತ್ತಿವೆ. ಬೆಸ್ಟ್ ರೇಟೆಡ್ ಚಲನಚಿತ್ರ – 777 ಚಾರ್ಲಿ. ಬಿಗ್ ಬಾಸ್ ಕನ್ನಡ ಸೀಸನ್ 10 ಮೊದಲ ಕಂಟೆಸ್ಟೆಂಟ್ ಆಗಿ ಎಂಟ್ರಿ ಕೊಡುತ್ತಿರುವ ಚಾರ್ಲಿ!! ಅಭಿನಂದನೆಗಳು ಚಾರ್ಲಿ ಎಂದು ವಾಹಿನಿಯು ಸೋಷಿಯಲ್ ಮೀಡಿಯಾದಲ್ಲಿ ಈಗಾಗಲೇ ವಾಹಿನಿ ಹಂಚಿಕೊಂಡಿದೆ.