ಮುಂಬಯಿ: ಭಾರತ ಪ್ರವಾಸದಲ್ಲಿರುವ ಮೈಕ್ರೋಸಾಫ್ಟ್ ಸಹ-ಸಂಸ್ಥಾಪಕ ಬಿಲ್ ಗೇಟ್ಸ್ (Bill Gates) ಅವರು ವಲ್ಡ್ ಯೂತ್ ಬ್ರಿಡ್ಜ್ ಚಾಂಪಿಯನ್ಶಿಪ್(World Youth Bridge Championship) ವಿಜೇತ ಅನ್ಶುಲ್ ಭಟ್(Anshul Bhatt) ಅವರನ್ನು ಭೇಟಿ ಮಾಡಿದ್ದಾರೆ. ಈ ಇಬ್ಬರು ಭೇಟಿಯಾದ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅನ್ಶುಲ್ ಭಟ್ ಅವರು ಕಳೆದ ವರ್ಷ ಇಟಲಿಯಲ್ಲಿ ನಡೆದ ವಲ್ಡ್ ಯೂತ್ ಬ್ರಿಡ್ಜ್ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಅತಿ ಕಿರಿಯ ವಯಸ್ಸಿನಲ್ಲಿ ಗೆದ್ದು ಇತಿಹಾಸ ನಿರ್ಮಿಸಿದ್ದರು. ಈ ಪ್ರಶಸ್ತಿ ಗೆದ್ದ ಮೊದಲ ಅತಿ ಕಿರಿಯ ಕ್ರೀಡಾಪಟು ಎಂಬ ದಾಖಲೆ ಬರೆದಿದ್ದರು. ಇಸ್ಪೀಟ್ ಕಾರ್ಡ್ಗಳನ್ನು ಜೋಡಿಸುವ ಮೂಲಕ ಸೇತುವೆ ನಿರ್ಮಿಸುವ ಆಟವನ್ನು ಬ್ರಿಡ್ಜ್ ಚಾಂಪಿಯನ್ಶಿಪ್ ಎಂದು ಕರೆಯಲಾಗುತ್ತದೆ.
ವಿಶ್ವದ ಶ್ರೀಮಂತ ವ್ಯಕ್ತಿಯಾಗಿದ್ದರೂ ಯಾವುದೇ ಅಹಂ ಇಲ್ಲದೆ ಬಿಲ್ ಗೇಟ್ಸ್ ಅವರು ಈ ಕಿರಿಯ ಸಾಧಕನನ್ನು ಮುಂಬಯಿಯಲ್ಲಿ ಭೇಟಿ ಮಾಡಿ ನಿಮ್ಮ ಸಾಧನೆ ನನಗೂ ಸ್ಫೂರ್ತಿ ನೀಡಿದೆ ಎಂದರು. “ನಿಮ್ಮನ್ನು ಭೇಟಿಯಾಗಿರುವುದು ನಿಜಕ್ಕೂ ಸಂತಸ ತಂದಿದೆ. ಶೀಘ್ರದಲ್ಲೇ ನಿಮ್ಮ ಜತೆ ಬ್ರಿಡ್ಜ್ ಆಟವನ್ನು ಆಡಲು ಎದುರು ನೋಡುತ್ತಿರುವೆ” ಎಂದು ಬಿಲ್ ಗೇಟ್ಸ್ ಹೇಳಿದರು.
ಇದನ್ನೂ ಓದಿ Sachin Tendulkar: ಬಿಲ್ ಗೇಟ್ಸ್ ಭೇಟಿಯಾದ ಸಚಿನ್ ತೆಂಡೂಲ್ಕರ್
ಶುಕ್ರವಾರವಷ್ಟೇ(ಮಾರ್ಚ್ 3) ಬಿಲ್ ಗೇಟ್ಸ್ ಅವರು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನು ಭೇಟಿ ಮಾಡಿ ಆರೋಗ್ಯ, ಹವಾಮಾನ ಬದಲಾವಣೆ ಮತ್ತು ಇತರ ನಿರ್ಣಾಯಕ ಕ್ಷೇತ್ರಗಳ ಅಭಿವೃದ್ಧಿ ಮತ್ತು ಸವಾಲುಗಳ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದರು. ಇದಕ್ಕೂ ಮುನ್ನ ಅವರು ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಅವರನ್ನು ಭೇಟಿ ಮಾಡಿ ಮಕ್ಕಳ ಆರೋಗ್ಯದ ಬಗ್ಗೆ ಕೆಲ ವಿಚಾರವನ್ನು ಚರ್ಚಿಸಿದ್ದರು.