Site icon Vistara News

ICC World Cup 2023: ವಿಶ್ವಕಪ್​ಗೂ ಮುನ್ನ ಲಂಕಾ ತಂಡಕ್ಕೆ ಆಘಾತ; ಗಾಯದಿಂದ ಸ್ಟಾರ್​ ಆಲ್​ರೌಂಡರ್ ಔಟ್​

Hasaranga to miss the World Cup

ಕೊಲಂಬೊ: ಭಾರತದ ಆತಿಥ್ಯದಲ್ಲಿ ನಡೆಯುವ ಏಕದಿನ ವಿಶ್ವಕಪ್​ ಟೂರ್ನಿ(ICC World Cup 2023) ಆರಂಭಕ್ಕೆ ಇನ್ನು ಒಂದು ವಾರ ಬಾಕಿ ಇರುವಾಗಲೇ ಶ್ರೀಲಂಕಾ ತಂಡಕ್ಕೆ(Sri Lanka World Cup Squad) ಭಾರಿ ಆಘಾತವೊಂದು ಎದುರಾಗಿದೆ. ವಿಶ್ವಕಪ್​ ತಂಡದಲ್ಲಿ ಸ್ಥಾನ ಪಡೆದಿದ್ದ ಸ್ಟಾರ್​ ಆಲ್​ರೌಂಡರ್​ ವನಿಂದು ಹಸರಂಗ(Wanindu Hasaranga) ಮಂಡಿರಜ್ಜು ಗಾಯದಿಂದಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ ಎಂದು ವರದಿಯಾಗಿದೆ. ಹಸರಂಗ ಸ್ಥಾನಕ್ಕೆ ಬದಲಿಗೆ ಆಟಗಾರನನ್ನು ಘೋಷಿಸಲು ಶ್ರೀಲಂಕಾ ಕ್ರಿಕೆಟ್‌ ಮಂಡಳಿಗೆ ಇನ್ನೂ ನಾಲ್ಕು ದಿನಗಗಳ ಅವಕಾಶವಿದೆ. ಸೆಪ್ಟೆಂಬರ್ 28ರೊಳಗೆ ಅಂತಿಮ ತಂಡವನ್ನು ಸಲ್ಲಿಸಲು ಐಸಿಸಿ ಗಡುವು ನೀಡಿದೆ.

ವಿಶ್ವಕಪ್​ ಅರ್ಹತಾ ಪಂದ್ಯದಲ್ಲಿ ಶ್ರೇಷ್ಠ ಸಾಧನೆ

ವಿಶ್ವಕಪ್​ ಟೂರ್ನಿಗೆ ಶ್ರೀಲಂಕಾ ತಂಡ ಅರ್ಹತೆ ಪಡೆಯುವಲ್ಲಿ ಹಸರಂಗ ಪ್ರಮುಖ ಪಾತ್ರವಹಿಸಿದ್ದರು. ಜಿಂಬಾಬ್ವೆಯಲ್ಲಿ ನಡೆದ ಕ್ವಾಲಿಫೈಯರ್ ಟೂರ್ನಿಯಲ್ಲಿ ಹಸರಂಗ ಒಟ್ಟು 22 ವಿಕೆಟ್​ ಉರುಳಿಸಿ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದರು. ದುರಾದೃಷ್ಟವೆಂದರೆ ಪ್ರಧಾನ ಸುತ್ತಿನ ಪಂದ್ಯದಲ್ಲಿ ಆಡುವ ಅವಕಾಶದಿಂದ ವಂಚಿತರಾಗಿದ್ದಾರೆ. ಏಷ್ಯಾಕಪ್​ ಟೂರ್ನಿಯಲ್ಲೂ ಅವರು ಗಾಯದಿಂದ ಹೊರಗುಳಿದ್ದರು.

ಟೆಸ್ಟ್ ಕ್ರಿಕೆಟ್​ಗೆ ದಿಢೀರ್​ ವಿದಾಯ ಹೇಳಿದ್ದ ಹಸರಂಗ

ಐಪಿಎಲ್​ನಲ್ಲಿ(IPL) ರಾಯಲ್​ ಚಾಲೆಂಜರ್ಸ್​ ಬೆಂಗಳೂರು(RCB) ತಂಡದ ಪರ ಆಡುವ ಶ್ರೀಲಂಕಾದ ಸ್ಪಿನ್​ ಬೌಲರ್​ ವನಿಂದು ಹಸರಂಗ ಅವರು ಕೆಲ ದಿನಗಳ ಹಿಂದಷ್ಟೇ ಟೆಸ್ಟ್​ ಕ್ರಿಕೆಟ್​ಗೆ ದಿಢೀರ್​ ನಿವೃತ್ತಿ ಘೋಷಿಸಿದ್ದರು. ಸೀಮಿತ ಓವರ್​ಗಳ ಕ್ರಿಕೆಟ್​ಗೆ ಹೆಚ್ಚಿನ ಮಹತ್ವ ನೀಡುವ ಸಲುವಾಗಿ ಅವರು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದರು.

ಆಲ್​ರೌಂಡರ್​ ಆಗಿರುವ ಹಸರಂಗ 2020ರಲ್ಲಿ ಸೆಂಚುರಿಯನ್‌ನಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಆಡುವ ಮೂಲಕ ಟೆಸ್ಟ್‌ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಒಟ್ಟಾರೆಯಾಗಿ 4 ಟೆಸ್ಟ್​ ಪಂದ್ಯಗಳನ್ನು ಆಡಿರುವ ಅವರು ಹೇಳಿಕೊಳ್ಳವಂತ ಸಾಧನೆಯನ್ನು ಮಾಡಿಲ್ಲ. ಕೇವಲ 4 ವಿಕೆಟ್​ ಮಾತ್ರ ಕಬಳಿಸಿದ್ದಾರೆ. ಬ್ಯಾಟಿಂಗ್​ನಲ್ಲಿ 196 ರನ್​ ಕಲೆಹಾಕಿದ್ದಾರೆ. 2021ರಲ್ಲಿ ಬಾಂಗ್ಲಾ ವಿರುದ್ಧ ತವರಿನಲ್ಲಿ ಕೊನೆಯ ಟೆಸ್ಟ್​ ಪಂದ್ಯ ಆಡಿದ್ದರು. ಇದಾದ ಬಳಿಕ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿದ್ದರು. 48 ಏಕದಿನ ಪಂದ್ಯಗಳು ಮತ್ತು 58 T20 ಪಂದ್ಯಗಳಲ್ಲಿ ಆಡಿರುವ ಅವರು ಒಟ್ಟು 158 ವಿಕೆಟ್​ಗನ್ನು ಪಡೆದಿದ್ದಾರೆ. ಜತೆಗೆ 1,365 ರನ್​ ಗಳಿಸಿದ್ದಾರೆ.

ಇದನ್ನೂ ಓದಿ ICC World Cup 2023: ಪಾಕ್ ತಂಡಕ್ಕೆ ಹೆಚ್ಚುವರಿ ಭದ್ರತೆ ಇಲ್ಲ; ಕೇಂದ್ರ ಸರ್ಕಾರ

10 ತಾಣಗಳಲ್ಲಿ ಪಂದ್ಯವಾಳಿ

ವಿಶ್ವಕಪ್​ನಲ್ಲಿ ಒಟ್ಟು 48 ಪಂದ್ಯಗಳು ನಡೆಯಲಿದ್ದು 10 ತಂಡಗಳು ಸೆಣಸಾಟ ನಡೆಸಲಿವೆ. ದೇಶದ ಪ್ರಮುಖ 10 ತಾಣಗಳಲ್ಲಿ ಈ ಪಂದ್ಯ ನಡೆಯಲಿದೆ. ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮತ್ತು ನ್ಯೂಜಿಲ್ಯಾಂಡ್​ ತಂಡಗಳು ಮುಖಾಮುಖಿಯಾಗಲಿವೆ. ಭಾರತ ತಂಡ ತನ್ನ ಮೊದಲ ಲೀಗ್​ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಅಕ್ಟೋಬರ್​ 8 ರಂದು ಆಡಲಿದೆ. ಅಕ್ಟೋಬರ್ 14 ರಂದು ಭಾರತ ತನ್ನ ಸಾಂಪ್ರದಾಯಿಕ ಬದ್ಧ ಎದುರಾಳಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದೆ ಈ ಪಂದ್ಯ ಕಣ್ತುಬಿಂಕೊಳ್ಳಲು ಕ್ರಿಕೆಟ್​ ಅಭಿಮಾನಿಗಳು ಕಾತರದಿಂದ ಕಾದು ಕುಳಿತಿದ್ದಾರೆ.

Exit mobile version