ಚೆನ್ನೈ: ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಗಾಗಿ (Border Gavaskar Trophy) ಭಾರತಕ್ಕೆ ಬಂದಿರುವ ಆಸ್ಟ್ರೇಲಿಯಾ ತಂಡ ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದೆ. ಬೆಂಗಳೂರಿನ ಆಲೂರಿನಲ್ಲಿರುವ ಕೆಎಸ್ಸಿಎ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಅಭ್ಯಾಸ ನಡೆಸುತ್ತಿದೆ. ಫೆಬ್ರವರಿ 9ರಂದು ಮೊದಲ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದ್ದು ಜಿದ್ದಾಜಿದ್ದಿನ ಹೋರಾಟಕ್ಕೆ ವೇದಿಕೆ ಸಜ್ಜಗೊಂಡಿದೆ. ಏತನ್ಮಧ್ಯೆ, ಅಭ್ಯಾಸ ಪಂದ್ಯದಲ್ಲಿ ಆಡಲು ನಿರಾಕರಿಸಿರುವ ಆಸ್ಟ್ರೇಲಿಯಾ ತಂಡದ ಉಪನಾಯಕ ಸ್ಟೀವ್ ಸ್ಮಿತ್ ನೀಡಿರುವ ಕಾರಣ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಅಸಮಧಾನ ಮೂಡಿಸಿದೆ. ಅದೇ ರೀತಿ ಭಾರತ ತಂಡದ ಸ್ಪಿನ್ ಬೌಲರ್ ಆರ್ ಅಶ್ವಿನ್ ಅವರು ಇದೊಂದು ಮೈಂಡ್ ಗೇಮ್ ತಂತ್ರ ಎಂದೂ ಹೇಳಿದ್ದಾರೆ.
ಭಾರತದಲ್ಲಿ ಅಭ್ಯಾಸ ಪಂದ್ಯಕ್ಕೆ ಒಂದು ಪಿಚ್ ನೀಡಲಾಗುತ್ತದೆ. ಪಂದ್ಯಕ್ಕೆ ಬೇರೆಯೇ ರೀತಿಯ ಪಿಚ್ಗಳನ್ನು ನೀಡುತ್ತಾರೆ. ಹೀಗಾಗಿ ಅಭ್ಯಾಸ ಪಂದ್ಯದ ಅಗತ್ಯ ನಮಗಿಲ್ಲ ಎಂದು ಸ್ಟೀವ್ ಸ್ಮಿತ್ ಹೇಳಿದ್ದರು. ಅವರ ಹೇಳಿಕೆ ಭಾರತದ ಕ್ರಿಕೆಟ್ ಅಭಿಮಾನಿಗಳ ಪಾಲಿಗೆ ಅಪಥ್ಯ ಎನಿಸಿಕೊಂಡಿದೆ. ಆದರೆ, ಸ್ಪಿನ್ನರ್ ಆರ್. ಅಶ್ವಿನ್ ಅವರು ಇದೊಂದು ತಂತ್ರಗಾರಿಕೆ ಎಂಬುದಾಗಿ ಹೇಳಿದ್ದಾರೆ.
ಕ್ರಿಕೆಟ್ ಪಂದ್ಯಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಆಟಗಾರರಿಗೆ ಅಭ್ಯಾಸ ಪಂದ್ಯಗಳಲ್ಲಿ ಆಡಲು ಸಾಧ್ಯವಾಗುವುದಿಲ್ಲ. ಹೀಗಾಗಿ ಆಸ್ಟ್ರೇಲಿಯಾ ತಂಡ ಕೇವಲ ನೆಟ್ ಅಭ್ಯಾಸ ನಡೆಸಲು ಮುಂದಾಗಿದೆ. ಮೊದಲೇ ಮೈಂಡ್ ಗೇಮ್ ಆಡುವಲ್ಲಿ ನಿಸ್ಸೀಮರೆನಿಸಿಕೊಂಡಿರುವ ಆಸ್ಟ್ರೇಲಿಯಾ ತಂಡ ಅದಕ್ಕೆ ಈ ರೀತಿ ವ್ಯಾಖ್ಯಾನ ನೀಡಿದೆ ಎಂಬುದಾಗಿ ಹಿರಿಯ ಸ್ಪಿನ್ನರ್ ಹೇಳಿದ್ದಾರೆ.
ಇದನ್ನೂ ಓದಿ : Steve Smith | ಆಸ್ಟ್ರೇಲಿಯಾದ ಕ್ರಿಕೆಟಿಗ ಸ್ಟೀವ್ ಸ್ಮಿತ್ ಟೋಪಿಯನ್ನೇ ಕತ್ತರಿಸಿ ಹಾಕಿದ ಇಲಿ!
ಭಾರತ ತಂಡವೂ ವಿದೇಶಿ ಪ್ರವಾಸದ ವೇಳೆ ಹಲವು ಬಾರಿ ಅಭ್ಯಾಸ ಪಂದ್ಯಗಳಲ್ಲಿ ಆಡಲು ನಿರಾಕರಿಸಿತ್ತು. ಹೀಗಾಗಿ ಇಂಥದ್ದೊಂದು ನಿರ್ಧಾರವನ್ನು ಆಸ್ಟ್ರೇಲಿಯಾವೇ ಮೊದಲು ತೆಗೆದುಕೊಂಡಿದ್ದಲ್ಲ. ಈ ಒಂದು ತೀರ್ಮಾನದ ಹಿಂದೆ ಹೊಸತನವೇನೂ ಇಲ್ಲ ಹಾಗೂ ಆರೋಪ ಮಾಡುವ ಅಗತ್ಯವೂ ಇಲ್ಲ ಎಂಬುದಾಗಿ ತಮಿಳುನಾಡು ಮೂಲದ ಆಟಗಾರ ಹೇಳಿದ್ದಾರೆ.