ಬೆಂಗಳೂರು: ಬಾರ್ಡರ್ ಗವಾಸ್ಕರ್ ಟ್ರೋಫಿ (Border Gavaskar Trophy) ಟೆಸ್ಟ್ ಸರಣಿಗಾಗಿ ಭಾರತಕ್ಕೆ ಆಗಮಿಸಿರುವ ಆಸ್ಟ್ರೇಲಿಯಾ ತಂಡ ಬೆಂಗಳೂರಿನ ಆಲೂರಿನಲ್ಲಿರುವ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಗ್ರೌಂಡ್ನಲ್ಲಿ ಅಭ್ಯಾಸ ಆರಂಭಿಸಿದೆ. ಫೆಬ್ರವರಿ 8ರಂದು ಮೊದಲ ಪಂದ್ಯ ನಡೆಯಲಿದ್ದು, ಒಟ್ಟು ನಾಲ್ಕು ಪಂದ್ಯಗಳು ನಡೆಯಲಿವೆ. ಈ ಸರಣಿ ಭಾರತ ತಂಡಕ್ಕೆ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಕೊನೇ ಸರಣಿಯಾಗಿದೆ. ಸದ್ಯ ಭಾರತ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದು, ಆಸ್ಟ್ರೇಲಿಯಾ ತಂಡ ಮೊದಲ ಸ್ಥಾನದಲ್ಲಿದೆ.
ಪ್ರವಾಸಿ ತಂಡದ ನಾಯಕತ್ವವನ್ನು ವೇಗದ ಬೌಲರ್ ಪ್ಯಾಟ್ ಕಮಿನ್ಸ್ ವಹಿಸಿಕೊಂಡಿದ್ದು, ಅನುಭವಿ ಬ್ಯಾಟರ್ ಸ್ಟೀವ್ ಸ್ಮಿತ್ ಉಪನಾಯಕರಾಗಿದ್ದಾರೆ. ಅವರು ತಡವಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ ಎನ್ನಲಾಗಿದೆ. ಆಸ್ಟ್ರೇಲಿಯಾ ತಂಡದ ಸ್ಪಿನ್ ಬೌಲಿಂಗ್ ಆಲ್‌ರೌಂಡರ್ ಆಸ್ಟನ್ ಅಗರ್, ಅಭ್ಯಾಸದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಟೆಸ್ಟ್ ಸರಣಿ ಫೆಬ್ರವರಿ 9ರಿಂದ ಟೆಸ್ಟ್ ಸರಣಿ ನಡೆಯಲಿದ್ದು, ಅದು ಮುಗಿದ ಬಳಿಕ ಮಾರ್ಚ್ 17ರಂದು ಏಕ ದಿನ ಪಂದ್ಯಗಳ ಸರಣಿ ಆರಂಭಗೊಳ್ಳಲಿದೆ. ನವ ದೆಹಲಿ, ಹಿಮಾಚಲ ಪ್ರದೇಶದ ಧರ್ಮಶಾಲಾ ಕ್ರಿಕೆಟ್ ಸ್ಟೇಡಿಯಮ್ ಹಾಗೂ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಪಂದ್ಯ ನಡೆಯಲಿದೆ. ಮುಂಬಯಿ, ವಿಶಾಖಪಟ್ಟಣಮ್, ಚೆನ್ನೈನಲ್ಲಿ ಏಕ ದಿನ ಸರಣಿ ನಡೆಯಲಿದೆ.
ಇದನ್ನೂ ಓದಿ : Border Gavaskar Trophy: ಬಾರ್ಡರ್ ಗವಾಸ್ಕರ್ ಟ್ರೋಫಿಯಲ್ಲಿ ಗರಿಷ್ಠ ರನ್ರೇಟ್ ಹೊಂದಿರುವ ಬ್ಯಾಟರ್ಗಳು
ಟೆಸ್ಟ್ ಸರಣಿಗೆ ರವೀಂದ್ರ ಜಡೇಜಾ ಅವರು ಫಿಟ್ ಎನಿಸಿಕೊಂಡಿದ್ದಾರೆ. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ರವೀಂದ್ರ ಜಡೇಜಾ ಅವರಿಗೆ ಫಿಟ್ನೆಸ್ ಟೆಸ್ಟ್ ನಡೆದಿತ್ತು. ಅದರಲ್ಲಿ ಅವರು ಪಾಸ್ ಆಗಿದ್ದಾರೆ. ಇದೇ ವೇಳೆ ಪ್ರಮುಖ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಬೆನ್ನು ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್‌ನಿಂದ ಹೊರಗುಳಿಯಲಿದ್ದಾರೆ ಎಂದು ವರದಿಯಾಗಿದೆ.