ಬೆಂಗಳೂರು: ನೆದರ್ಲೆಂಡ್ಸ್ ವಿರುದ್ಧದ ಪಂದ್ಯದಲ್ಲಿ ಟೀಮ್ ಇಂಡಿಯಾದ 9 ಆಟಗಾರರು ಬೌಲಿಂಗ್ ನಡೆಸಿ ಗಮನಸೆಳೆದಿದ್ದರು. ನಾಯಕ ರೋಹಿತ್ ಶರ್ಮ(Rohit Sharma) ಕೂಡ 5 ಎಸೆತ ಎಸೆದು ಒಂದು ವಿಕೆಟ್ ಕಿತ್ತು ಮಿಂಚಿದರು. ಪತಿ ವಿಕೆಟ್ ಪಡೆದ ಖುಷಿಯಲ್ಲಿ ಪತ್ನಿ ಪತ್ನಿ ರಿತಿಕಾ ಸಜ್ದೆ(Ritika Sajdeh) ಚಪ್ಪಾಳೆ ತಟ್ಟುತ್ತಾ, ಕುಣಿದು ಸಂಭ್ರಮಿಸಿದ ವಿಡಿಯೊ ವೈರಲ್ ಆಗಿದೆ.
ರೋಹಿತ್ ಅವರು ತಮ್ಮ ಮೊದಲ ಓವರ್ನ ಐದನೇ ಎಸೆತದಲ್ಲಿ ವಿಕೆಟ್ ಕಿತ್ತು ನೆದರ್ಲೆಂಡ್ಸ್ ತಂಡವನ್ನು ಆಲೌಟ್ ಮಾಡಿದರು. ಇದು ರೋಹಿತ್ ಅವರ ಏಕದಿನ ಕ್ರಿಕೆಟ್ನ 9ನೇ ವಿಕೆಟ್ ಆಗಿದೆ. ರೋಹಿತ್ ವಿಕೆಟ್ ಪಡೆದ ತಕ್ಷಣ ಡಗೌಟ್ನಲ್ಲಿದ್ದ ಪತ್ನಿ ರಿತಿಕಾ ಸಜ್ದೆ ಚಪ್ಪಾಳೆ ಕುಣಿದು ಸಂಭ್ರಮಿಸಿದರು. ಇದರ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದಕ್ಕೂ ಮುನ್ನ ವಿರಾಟ್ ಕೊಗ್ಲಿ ವಿಕೆಟ್ ಕಿತ್ತಾಗ ಅವರ ಪತ್ನಿ ಅನುಷ್ಕಾ ಶರ್ಮ ಕೂಡ ಇದೇ ರೀತಿ ಸಂಭ್ರಮ ಆಚರಿಸಿದ್ದರು. ಈ ವಿಡಿಯೊ ಕೂಡ ವೈರಲ್ ಆಗಿದೆ.
ಇದನ್ನೂ ಓದಿ Rohit Sharma : ನಿನಗೊಂದು ವಿಕೆಟ್, ನನಗೊಂದು ವಿಕೆಟ್; ರೋಹಿತ್- ಕೊಹ್ಲಿ ಹಂಚಿಕೆ ಸೂತ್ರ!
ಐಪಿಎಲ್ನಲ್ಲಿ ಹ್ಯಾಟ್ರಿಕ್
ಆಫ್ ಸ್ಪಿನ್ನರ್ ಆಗಿರುವ ರೋಹಿತ್ ಶರ್ಮ ಅವರು ಈಗಾಗಲೇ ಐಪಿಎಲ್ನಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ಸಾಧನೆ ಮಾಡಿದ್ದಾರೆ. 2009ರ ಐಪಿಎಲ್ ಆವೃತ್ತಿಯಲ್ಲಿ ರೋಹಿತ್ ಶರ್ಮ ಅವರು ಡೆಕ್ಕನ್ ಚಾರ್ಜಸ್ ತಂಡದ ಪರ ಈ ಸಾಧನೆ ಮಾಡಿದ್ದರು. ಅಂದು ಮುಂಬೈ ಎದುರಿನ ಪಂದ್ಯದಲ್ಲಿ ರೋಹಿತ್ ಅವರು ಅಭಿಷೇಕ್ ನಾಯರ್, ಹರ್ಭಜನ್ ಸಿಂಗ್ ಮತ್ತು ಜೆಪಿ ಡುಮಿನಿ ಅವರ ವಿಕೆಟ್ ಕಿತ್ತ ಹ್ಯಾಟ್ರಿಕ್ ಸಾಧನೆ ಮಾಡಿದ್ದರು. ಒಟ್ಟಾರೆಯಾಗಿ ಈ ಪಂದ್ಯದಲ್ಲಿ ರೋಹಿತ್ ಆರು ರನ್‌ಗಳಿಗೆ 4 ವಿಕೆಟ್ ಪಡೆದು ಮಿಂಚಿದ್ದರು. ಅಲ್ಲದೆ ಇದೇ ಆವೃತ್ತಿಯಲ್ಕಿ ಡೆಕ್ಕನ್ ಚಾರ್ಜಸ್ ಚಾಂಪಿಯನ್ ಪಟ್ಟ ಕೂಡ ಅಲಂಕರಿಸಿತ್ತು.
ಬೌಲಿಂಗ್ ಸಾಧನೆ
ರೋಹಿತ್ ಶರ್ಮ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಬಾಳ್ವೆಯ ಆರಂಭಿಕ ದಿನಗಳಲ್ಲಿ ಆಲ್ರೌಂಡರ್ ಪಾತ್ರ ನಿರ್ವಹಿಸುತ್ತಿದ್ದರು. ಸ್ಪಿನ್ ಬೌಲಿಂಗ್ ನಡೆಸಿ ವಿಕೆಟ್ ಕೂಡ ಕೀಳುತ್ತಿದ್ದರು. ಏಕದಿನ ಕ್ರಿಕೆಟ್ನಲ್ಲಿ 9 ವಿಕೆಟ್, ಟೆಸ್ಟ್ನಲ್ಲಿ 2 ಮತ್ತು ಟಿ20ಯಲ್ಲಿ ಒಂದು ಹಾಗೂ ಐಪಿಎಲ್ನಲ್ಲಿ 15 ವಿಕೆಟ್ ಕಿತ್ತ ಸಾಧನೆ ಮಾಡಿದ್ದಾರೆ. ಏಕದಿನದಲ್ಲಿ 27ಕ್ಕೆ 2 ವಿಕೆಟ್ ಪಡೆದದ್ದು ಉತ್ತಮ ಸಾಧನೆಯಾಗಿದೆ.
ರೋಹಿತ್ ಶರ್ಮಾ ಹಾಲಿ ವಿಶ್ವ ಕಪ್ನಲ್ಲಿ ಅತ್ಯುತ್ತಮವಾಗಿ ಫಾರ್ಮ್ ಕಂಡುಕೊಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧದ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ಅವರು ಅಫಘಾನಿಸ್ತಾನ ವಿರುದ್ಧ ಶತಕ ಬಾರಿಸಿದ್ದರು. ಆ ಬಳಿಕ ಆಡಿದ ಎಲ್ಲ ಪಂದ್ಯಗಳಲ್ಲಿಯೂ ಅವರು ಉತ್ತಮ ಪ್ರದರ್ಶನವನ್ನೇ ತೋರುತ್ತಾ ಬರುತ್ತಿದ್ದಾರೆ. ನೆದರ್ಲೆಂಡ್ಸ್ ವಿರುದ್ಧ ಅಮೋಘ ಅರ್ಧ ಶತಕ ಬಾರಿಸಿ ಸಿಕ್ಸರ್ಗಳ ಒಟ್ಟು ಗಳಿಕೆ ಸೇರಿದಂತೆ ಹಲವಾರು ದಾಖಲೆಗಳನ್ನು ಮುರಿದಿದ್ದಾರೆ. ಅವರು ಬ್ಯಾಟಿಂಗ್ ವೈಖರಿಯಿಂದಾಗಿಯೇ ಭಾರತ ತಂಡ ಸಾಕಷ್ಟು ವಿಶ್ವಾಸ ಗಳಿಸಿದೆ. ಮುಂದಿನ ಸೆಮಿಫೈನಲ್ನಲ್ಲಿಯೂ ಭರ್ಜರಿ ಯಶಸ್ಸು ಸಾಧಿಸುವ ಎಲ್ಲ ಲಕ್ಷಣವನ್ನು ತೋರುತ್ತಿದೆ.
ಪಂದ್ಯ ಗೆದ್ದ ಭಾರತ
ಇಲ್ಲಿನ ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ತನ್ನ ನಿರ್ಧಾರಕ್ಕೆ ಪೂರಕವಾಗಿ ಆಡಿತು. ಆರಂಭದಿಂದಲೂ ಕೊನೇ ತನಕ ರನ್ಗಳನ್ನು ಗಳಿಸುತ್ತಾ ನಿಗದಿತ 50 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 410 ರನ್ ಬಾರಿಸಿತು. ಪ್ರತಿಯಾಗಿ ಆಡಿದ ಸ್ಕಾಟ್ ಎಡ್ವರ್ಡ್ ನೇತೃತ್ವದ ಡಚ್ಚರ ಪಡೆ 47. 5 ಓವರ್ಗಳಲ್ಲಿ 250 ರನ್‌ಗಳಿಗೆ ಆಲ್ಔಟ್ ಆಗಿ ಸೋಲೊಪ್ಪಿಕೊಂಡಿತು