ಮುಂಬಯಿ: ಟೀಮ್ ಇಂಡಿಯಾದ ಪ್ರಧಾನ ಕೋಚ್ ಆಯ್ಕೆ ಈಗಾಗಲೇ ಪ್ರಕಟಗೊಂಡಿದೆ. ಮಾಜಿ ಆಟಗಾರ ಗೌತಮ್ ಗಂಭೀರ್ ಈ ಹುದ್ದೆಗೆ ನೇಮಕಗೊಂಡಿದ್ದಾರೆ. ಇನ್ನುಳಿದ ಬ್ಯಾಟಿಂಗ್, ಫೀಲ್ಡಿಂಗ್, ಬೌಲಿಂಗ್ ಮತ್ತು ಸಹಾಯಕ ಕೋಚ್ಗಳ ಆಯ್ಕೆಯಾಗಬೇಕಿದೆ. ಇದೀಗ ಬೌಲಿಂಗ್ ಕೋಚ್(Bowling Coach) ರೇಸ್ನಲ್ಲಿದ್ದ ಕನ್ನಡಿಗ ವಿನಯ್ ಕುಮಾರ್(Vinay Kumar) ಅವರನ್ನು ಬಿಸಿಸಿಐ ಕೈಬಿಟ್ಟು(BCCI To Pick Bowling Coach) ಇಬ್ಬರ ಹೆಸರನ್ನು ಮಾತ್ರ ಅಂತಿಮಗೊಳಿಸಿರುವುದಾಗಿ ತಿಳಿದುಬಂದಿದೆ.
ಬೌಲಿಂಗ್ ಕೋಚ್ ರೇಸ್‌ನಲ್ಲಿ ದಾವಣಗೆರೆ ಎಕ್ಸ್‌ಪ್ರೆಸ್ ಎಂದೇ ಪ್ರಸಿದ್ಧವಾಗಿರುವ ವಿನಯ್ ಕುಮಾರ್, ಜಹೀರ್ ಖಾನ್(Zaheer Khan) ಮತ್ತು ಲಕ್ಷ್ಮೀಪತಿ ಬಾಲಾಜಿ(Lakshmipathy Balaji) ಮಧ್ಯೆ ಪೈಪೋಟಿ ಏರ್ಪಟ್ಟಿತ್ತು. ಇದೀಗ ಈ ರೇಸ್ನಿಂದ ವಿನಯ್ ಕುಮಾರ್ ಅವರನ್ನು ಕೈಬಿಡಲಾಗಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ.
ವಿನಯ್ ಕುಮಾರ್ ಅವರನ್ನು ಆಯ್ಕೆ ಮಾಡುವುದಕ್ಕಿಂತ ಅನುಭವಿ ಮಾಜಿ ಕ್ರಿಕೆಟಿಗರಾದ ಜಹೀರ್ ಖಾನ್ ಇಲ್ಲವೇ ಲಕ್ಷ್ಮಿಪತಿ ಬಾಲಾಜಿ ಅವರನ್ನು ಆಯ್ಕೆಗೆ ಪರಿಗಣಿಸುವಂತೆ ಬಿಸಿಸಿಐ, ಗಂಭೀರ್‌ಗೆ ಸಲಗೆ ನೀಡಿದೆ ಎಂದು ವರದಿಯಾಗಿದೆ.
ಭಾರತ ಕ್ರಿಕೆಟ್ ತಂಡವು ಕಂಡ ಅತ್ಯಂತ ಯಶಸ್ವಿ ಎಡಗೈ ವೇಗದ ಬೌಲರ್ ಎನಿಸಿಕೊಂಡಿರುವ ಜಹೀರ್ ಖಾನ್, ಭಾರತ ಪರ 309 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿ 610 ವಿಕೆಟ್ ಕಬಳಿಸಿದ್ದಾರೆ. ಬಿಸಿಸಿಐ ಮೂಲಗಳ ಪ್ರಕಾರ, ಜಹೀರ್ ಖಾನ್, ಟೀಂ ಇಂಡಿಯಾ ಬೌಲಿಂಗ್ ಕೋಚ್ ರೇಸ್‌ನಲ್ಲಿ ಮುಂದಿದ್ದಾರೆ ಎನ್ನಲಾಗುತ್ತಿದೆ. ಇವರು ಈ ಹುದ್ದೆಗೆ ಒಪ್ಪದೇ ಇದ್ದರೆ ತಮಿಳುನಾಡು ಮೂಲದ ಲಕ್ಷ್ಮಿಪತಿ ಬಾಲಾಜಿ ಅವರಿಗೆ ಅವಕಾಶ ಸಿಗಲಿದೆ. ಐಪಿಎಲ್ನಲ್ಲಿ ಬಾಲಾಜಿ ವಹಲವು ತಂಡಗಳ ಬೌಲಿಂಗ್ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಮೂಲಗಳ ಪ್ರಕಾರ ಜಹೀರ್ ಖಾನ್ ಅವರೇ ಬೌಲಿಂಗ್ ಕೋಚ್ ಆಗಲಿದ್ದು ಅಧಿಕೃತ ಘೋಷಣೆಯೊಂದೆ ಬಾಕಿ ಎನ್ನಲಾಗಿದೆ. ಬ್ಯಾಟಿಂಗ್ ಕೋಚ್ ಆಗಿ ಅಭಿಷೇಕ್ ನಾಯರ್ ಆಯ್ಕೆಯಾಗುವ ಸಾಧ್ಯತೆ ಇದೆ.
ಕೋಚ್ ಹುದ್ದೆಗೆ ಗಂಭೀರ್ ಅವರನ್ನು ಆಯ್ಕೆ ಮಾಡುವ ಮುನ್ನ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ(virat kohli) ಜತೆ ಬಿಸಿಸಿಐ ಅಭಿಪ್ರಾಯ ಕೇಳಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಹೌದು ವಿರಾಟ್ ಕೊಹ್ಲಿ ಮತ್ತು ಗಂಭೀರ್ ಐಪಿಎಲ್ ವೇಳೆ ಹಾವು ಮುಂಗುಸಿಯಂತೆ ಕಿತ್ತಾಡಿಕೊಳ್ಳುತ್ತಿದ್ದರು. ಕಳೆದ ವರ್ಷದ ಐಪಿಎಲ್ ವೇಳೆ ಕೈ ಕೈ ಮಿಲಾಯಿಸುವ ಹಂತಕ್ಕೂ ಇಬರಿಬ್ಬರ ಜಗಳ ಮುಂದುವರಿದಿತ್ತು. ಕೊಹ್ಲಿಯ ವಿರುದ್ಧ ಹಲವು ಬಾರಿ ಬಹಿರಂಗವಾಗಿ ಮುನಿಸನ್ನು ಪ್ರದರ್ಶಿಸಿದ್ದರು. ಹೀಗಿರುವಾಗ ಬಿಸಿಸಿಐ ಗಂಭೀರ್ ಅವರನ್ನು ಕೋಚ್ ಆಗಿ ನೇಮಕ ಮಾಡುವಾಗ ಕೊಹ್ಲಿಯನ್ನು ಒಂದು ಮಾತು ಕೂಡ ಕೇಳದೇ ಇರುವುದು ಕೊಹ್ಲಿ ಮತ್ತು ಟೀಮ್ ಇಂಡಿಯಾ ಅಭಿಮಾನಿಗಳಿಗೆ ಅಸಮಾಧಾನ ಉಂಟುಮಾಡಿದೆ. ಇವರಿಬ್ಬರ ಜಗಳ ಮತ್ತೆ ಮುಂದುವರಿದರೆ ತಂಡದ ಒಗ್ಗಟ್ಟು ಇಲ್ಲದಂತಾಗಬಹುದೆಂದು ಅನೇಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.