ಟಾಷ್ಕೆಂಟ್: ಇಲ್ಲಿ ನಡೆದ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ(Boxing Championship) ಭಾರತ ಮೂರು ಕಂಚಿನ ಪದಕಕ್ಕೆ ತೃಪ್ತಿಪಟ್ಟಿದೆ. ಮೊಹಮ್ಮದ್ ಹುಸ್ಸಮುದ್ದೀನ್, ದೀಪಕ್ ಕುಮಾರ್ ಭೋರಿಯಾ ಮತ್ತು ನಿಶಾಂತ್ ದೇವ್ ಕಂಚಿನ ಪದಕಕ್ಕೆ ಕೊರಳೊಡ್ಡಿದ ಬಾಕ್ಸರ್ಗಳಾಗಿದ್ದಾರೆ.
ಇದೇ ಮೊದಲ ಸಲ ವಿಶ್ವ ಬಾಕ್ಸಿಂಗ್ ಪಂದ್ಯಾವಳಿಯಲ್ಲಿ ಭಾರತದ ಮೂರು ಬಾಕ್ಸರ್ಗಳು ಸ್ಪರ್ಧೆಗಿಳಿದಿದ್ದರು. 57 ಕೆ.ಜಿ. ವಿಭಾಗದಲ್ಲಿ ಕಣಕ್ಕಿಳಿದಿದ್ದ ಮೊಹಮ್ಮದ್ ಹುಸ್ಸಮುದ್ದೀನ್ ಅವರು ಗಾಯಾದ ಸಮಸ್ಯೆಯಿಂದಾಗಿ ಸೈಮಿಫೈನಲ್ ಸ್ಪರ್ಧೆಯಿಂದ ಹಿಂದೆ ಸರಿದರು. ಕ್ವಾರ್ಟರ್ ಫೈನಲ್ ದಾಟಿದ ಸಾಧನೆಗೆ ಅವರಿಗೆ ಕಂಚಿನ ಪದಕ ನೀಡಲಾಯಿತು. 51 ಕೆ.ಜಿ. ವಿಭಾಗದಲ್ಲಿ ದೀಪಕ್ 2 ಬಾರಿಯ ವಿಶ್ವ ಚಾಂಪಿಯನ್‌ಶಿಪ್ ಪದಕ ವಿಜೇತ, ಫ್ರಾನ್ಸ್ನ ಬಿಲಾಲಾ ಬೆನ್ನಾಮ ವಿರುದ್ಧ ತೀವ್ರ ಪೈಪೋಟಿ ನೀಡಿ 3-4 ಸಣ್ಣ ಅಂತರದಲ್ಲಿ ಸೋಲು ಕಂಡರು. 71 ಕೆ.ಜಿ. ವಿಭಾಗದಲ್ಲಿ ನಿಶಾಂತ್ ದೇವ್ ಅವರು 2022ರ ಏಷ್ಯನ್ ಚಾಂಪಿಯನ್, ಕಜಕ್ಸ್ತಾನದ ಅಸ್ಲನ್ಬೆಕ್ ವಿರುದ್ಧ ಪರಾಭವಗೊಂಡರು.
ಪುರುಷರ ಬಾಕ್ಸಿಂಗ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಪ್ರವೇಶಿಸಿ ದಾಖಲೆಯ ಮೂರು ಕಂಚಿನ ಪದಕ ಗೆದ್ದ ಸಾಧನೆ ಮಾಡಿದರು. ಆದರೆ 5 ದಶಕಗಳಲ್ಲೇ ಚೊಚ್ಚಲ ಚಿನ್ನ ಗೆಲ್ಲುವ ಭಾರತದ ಕನಸು ಕನಸಾಗಿಯೇ ಉಳಿದಿದೆ. 1974ರಿಂದಲೂ ನಡೆಯುತ್ತಿರುವ ಪುರುಷರ ಕೂಟದಲ್ಲಿ ಭಾರತ ಇದೇ ಮೊದಲ ಬಾರಿ ಕೂಟದಲ್ಲಿ 3 ಪದಕ ತನ್ನದಾಗಿಸಿಕೊಂಡಿತು. ಭಾರತ ಈ ವರೆಗೆ 8 ಕಂಚು, 1 ಬೆಳ್ಳಿ ಪದಕ ಗೆದ್ದಿದೆ. 2009ರಲ್ಲಿ ವಿಜೇಂದರ್ ಸಿಂಗ್ ಅವರು ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ತಂದುಕೊಟ್ಟಿದ್ದರು. ಬಳಿಕ 2011ರಲ್ಲಿ ವಿಕಾಸ್ ಕೃಷ್ಣನ್, 2015ರಲ್ಲಿ ಶಿವ ಥಾಪ, 2017ರಲ್ಲಿ ಗೌರವ್ ಬಿಧೂರಿ, 2021ರಲ್ಲಿ ಆಕಾಶ್ ಕುಮಾರ್ ಕಂಚು ಗೆದ್ದಿದ್ದರು. 2019ರಲ್ಲಿ ಅಮಿತ್ ಪಂಘಾಲ್ ಏಕೈಕ ಬೆಳ್ಳಿ, ಮನೀಶ್ ಕೌಶಿಕ್ ಕಂಚು ಗೆದ್ದಿದ್ದರು.