Site icon Vistara News

Boxing Day Test: ಟೆಸ್ಟ್​ನಲ್ಲಿಯೂ ಕೀಪಿಂಗ್​ ನಡೆಸಲು ಸಜ್ಜಾದ ಕನ್ನಡಿಗ ಕೆಎಲ್​ ರಾಹುಲ್​

kl rahul keeping

ಜೊಹಾನ್ಸ್​ಬರ್ಗ್​: ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಣ ‘ಬಾಕ್ಸಿಂಗ್​ ಡೇ’ ಟೆಸ್ಟ್​(Boxing Day Test) ಸರಣಿ ಮಂಗಳವಾರದಿಂದ (ಡಿಸೆಂಬರ್​ 26)ಆರಂಭಗೊಳ್ಳಲಿದೆ. ಏಕದಿನ ವಿಶ್ವಕಪ್​ ಬಳಿಕ ವಿಶ್ರಾಂತಿಯಲ್ಲಿದ್ದ ಕೊಹ್ಲಿ, ರೋಹಿತ್​, ಬುಮ್ರಾ ಸೇರಿ ಕೆಲ ಹಿರಿಯ ಆಟಗಾರರು ತಂಡಕ್ಕೆ ಮರಳಿದ್ದಾರೆ. ಇದೀಗ ಮೊದಲ ಟೆಸ್ಟ್​ ಪಂದ್ಯಕ್ಕೆ ಆಡುವ 11ರ ಬಳಗದ ಸಂಯೋಜನೆ ಭಾರತಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

ರಾಹುಲ್​ಗೆ ಕೀಪಿಂಗ್​

ಈಗಾಗಲೆ ಏಕದಿನ ವಿಶ್ವಕಪ್​ನಲ್ಲಿ ವಿಕೆಟ್​ ಕೀಪರ್​ ಆಗಿ ಉತ್ತಮ ಯಶಸ್ಸು ಕಂಡಿರುವ ಕನ್ನಡಿಗ ಕೆಎಲ್​ ರಾಹುಲ್(KL Rahul) ಅವರು ಟೆಸ್ಟ್​ ಸರಣಿಯಲ್ಲೂ ಕೀಪಿಂಗ್​ ನಡೆಸಲು ಸಜ್ಜಾಗಿದ್ದಾರೆ. ಇಶಾನ್​ ಕಿಶನ್​ ಅವರು ವೈಯಕ್ತಿಕ ಕಾರಣ ನೀಡಿ ಸರಣಿಯಿಂದ ಹಿಂದೆ ಸರಿದ ಕಾರಣ ಕೀಪಿಂಗ್​ ಹೊಣೆ ರಾಹುಲ್​ ಹೆಗಲೇರಿದೆ. ಶ್ರೀಕರ್​ ಭರತ್​ ಅವರು ಇಶಾನ್ ಸ್ಥಾನಕ್ಕೆ ಆಯ್ಕೆಯಾಗಿದ್ದರೂ ಅವರಿಗೆ ಕೀಪಿಂಗ್​ ನೀಡುವುದು ಅನುಮಾನ. ಏಕದಿನ ಸರಣಿಯಲ್ಲಿ ನಾಯಕನಾಗಿ ಮತ್ತು ಕೀಪಿಂಗ್​ ನಡೆಸಿರುವ ರಾಹುಲ್​ ಅವರೇ ಟೆಸ್ಟ್​ನಲ್ಲಿಯೂ ಕೀಪಿಂಗ್​ ನಡೆಸಲಿದ್ದಾರೆ ಎಂದು ಈಗಾಗಲೇ ಬಿಸಿಸಿಐ ಮೂಲಗಳು ತಿಳಿಸಿವೆ.

ಇದನ್ನೂ ಓದಿ Ind vs Aus : ಟೆಸ್ಟ್​​ನಲ್ಲಿ ಆಸೀಸ್​ ವಿರುದ್ಧ ಜಯ; ಭಾರತೀಯ ಮಹಿಳೆಯರ ಚಾರಿತ್ರಿಕ ಸಾಧನೆ

ಜಟಿಲವಾದ ಬೌಲಿಂಗ್​ ಆಯ್ಕೆ

ಸೆಂಚುರಿಯನ್​ ಪಿಚ್​ ವೇಗದ ಬೌಲರ್​ಗಳಿಗೆ ಹೆಚ್ಚು ಸಹಕಾರಿ. ಪ್ರಧಾನ ವೇಗಿ ಮೊಹಮದ್​ ಶಮಿ ಗಾಯದಿಂದಾಗಿ ಸರಣಿಗೆ ಅಲಭ್ಯರಾಗಿರುವುದು ಭಾರತಕ್ಕೆ ಬೌಲಿಂಗ್​ ವಿಭಾಗದಲ್ಲಿ ಹಿನ್ನಡೆ ತಂದಿದೆ. ಸದ್ಯಕ್ಕೆ ಲಭ್ಯರಿರುವ ವೇಗಿಗಳೆಂದರೆ ಸಿರಾಜ್​ ಮತ್ತು ಬುಮ್ರಾ. ಇವರಿಗೆ ಇನ್ನೊಬ್ಬ ಬೌಲರ್​ನ ಸಾಥ್​ ಅಗತ್ಯವಿದೆ. ಶಮಿ ಸ್ಥಾನವನ್ನು ತುಂಬಲು ಕನ್ನಡಿಗ ಪ್ರಸಿದ್ಧ ಕೃಷ್ಣ ಮತ್ತು ಮುಕೇಶ್​ ಕುಮಾರ್​ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಉಭಯ ಆಟಗಾರರಲ್ಲಿ ಯಾರನ್ನು ಆಯ್ಕೆ ಮಾಡಿದರೆ ಸೂಕ್ತ ಎನ್ನುವುದೇ ಭಾರತಕ್ಕೆ ದೊಡ್ಡ ಚಿಂತೆಯಾಗಿದೆ.

ಕಳೆದ ವೆಸ್ಟ್​ ಇಂಡೀಸ್​ ಸರಣಿಯಲ್ಲಿ ಟೆಸ್ಟ್​ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ್ದ ಮುಕೇಶ್​ ಕುಮಾರ್​, ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ತೋರಿರಲಿಲ್ಲ. ಹೀಗಾಗಿ ಭಾರತ ಎ ತಂಡದ ಪರ ಹ್ಯಾಟ್ರಿಕ್​ ವಿಕೆಟ್​ ಕಬಳಿಸಿದ ಪ್ರಸಿದ್ಧ ಕೃಷ್ಣರನ್ನು ಕಣಕ್ಕಿಳಿಸುವ ಚಿಂತನೆಯೂ ನಡೆದಿದೆ.

ಪಂದ್ಯಕ್ಕೆ ಮಳೆ ಭೀತಿ

ಇತ್ತಂಡಗಳ ನಡುವಣ ಈ ಮೊದಲ ಟೆಸ್ಟ್​ ಪಂದ್ಯಕ್ಕೆ ಮಳೆ ಅಡಚಣೆಯ ಭೀತಿ ಕಾಡಿದೆ. ಪಂದ್ಯದ ಮೊದಲ ದಿನದಾಟಕ್ಕೆ ಶೇ. 96ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. 2ನೇ ದಿನಕ್ಕೆ ಮಳೆ ಭೀತಿ ಶೇ. 25ಕ್ಕೆ ತಗ್ಗಲಿದೆ. 3ನೇ ದಿನದಾಟದಲ್ಲಿ ಬೆಳಗ್ಗಿನ ಅವಧಿಗೆ ಮಾತ್ರ ಮಳೆ ಭೀತಿ ಇದೆ. 4 ಮತ್ತು 5ನೇ ದಿನದಾಟಗಳಲ್ಲಿ ಮಳೆ ಕಾಡುವ ಭೀತಿ ಏರಿಕೆ ಕಂಡು ಶೇ. 60ರಷ್ಟು ಇರಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಒಟ್ಟಾರೆ ಪಂದ್ಯ ಸಂಪೂರ್ಣವಾಗಿ 5 ದಿನಗಳ ಕಾಲ ನಡೆಯುವು ಕಷ್ಟ ಸಾಧ್ಯ ಎನ್ನಲಾಗಿದೆ.

ಅಭ್ಯಾಸ ಆರಂ

ಏಕದಿನ ಸರಣಿಯಿಂದ ಹೊರಗುಳಿದಿದ್ದ ತಂಡದ ಪ್ರಧಾನ ಕೋಚಿಂಗ್​ ಸಿಬ್ಬಂದಿಗಳೆಲ್ಲ ಮತ್ತೆ ವಾಪಸ್​ ಆಗಿದ್ದು ಕೋಚ್​ ರಾಹುಲ್​ ದ್ರಾವಿಡ್​ ಮಾರ್ಗದರ್ಶನದಲ್ಲಿ ಟೀಮ್​ ಇಂಡಿಯಾ ಆಟಗಾರರು ಭಾನುವಾರ ಸೆಂಚುರಿಯನ್​ನಲ್ಲಿ ಅಭ್ಯಾಸ ನಡೆಸಿದ್ದಾರೆ.

Exit mobile version