ಭೋಪಾಲ್: ಒಲಿಂಪಿಕ್ ಪದಕವಿಜೇತೆ ಲವ್ಲಿನಾ ಬೊರ್ಗೊಹೇನ್ ಹಾಗೂ ಹಾಲಿ ವಿಶ್ವ ಚಾಂಪಿಯನ್ ನಿಖತ್ ಜರೀನ್ ಇಲ್ಲಿ ನಡೆದ ಎಲೀಟ್ ರಾಷ್ಟ್ರೀಯ ಮಹಿಳಾ ಬಾಕ್ಸಿಂಗ್(Boxing Nationals) ಟೂರ್ನಿಯಲ್ಲಿ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ.
ವಿಶ್ವ ಚಾಂಪಿಯನ್ 26 ವರ್ಷದ ನಿಖತ್ ಜರೀನ್ 50 ಕೆ.ಜಿ. ವಿಭಾಗದಲ್ಲಿ ಆರ್‌ಎಸ್‌ಪಿಬಿಯ ಅನಾಮಿಕಾ ವಿರುದ್ಧ 4-1 ಅಂತರದಿಂದ ಗೆದ್ದು ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. 75 ಕೆ.ಜಿ. ಫೈನಲ್‌ನಲ್ಲಿ ಅಸ್ಸಾಂ ತಂಡದ ಲವ್ಲಿನಾ ಅವರು ಸರ್ವಿಸಸ್‌ನ ಅರುಂಧತಿ ಚೌಧರಿ ವಿರುದ್ಧ 5-0 ಅಂತರದ ಮೇಲುಗೈ ಸಾಧಿಸಿದರು. ಒಟ್ಟಾರೆ ರೈಲ್ವೇ ಕ್ರೀಡಾ ಅಭಿವೃದ್ಧಿ ಮಂಡಳಿ (ಆರ್‌ಎಸ್‌ಪಿಬಿ) 10 ಪದಕಗಳನ್ನು ಗೆದ್ದು ತಂಡ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿತು.
48 ಕೆ.ಜಿ. ವಿಭಾಗದಲ್ಲಿ ವಿಶ್ವ ಚಾಂಪಿಯನ್‌ಷಿಪ್ ಬೆಳ್ಳಿ ಪದಕ ವಿಜೇತೆ ಮಂಜು ರಾಣಿ 5-0ಯಿಂದ ತಮಿಳುನಾಡಿನ ಎಸ್. ಕಲೈವಾಣಿ ಅವರನ್ನು ಮಣಿಸಿಸಿದರೆ, ಶಿಕ್ಷಾ (54ಕೆ.ಜಿ), ಪೂನಂ (60 ಕೆ.ಜಿ), ಶಶಿ ಚೋಪ್ರಾ (63ಕೆ.ಜಿ) ಮತ್ತು ನೂಪುರ್ (+81 ಕೆಜಿ) ಅವರೂ ಚಿನ್ನದ ಪದಕಗಳನ್ನು ಜಯಿಸಿದರು.
ಹರಿಯಾಣದ ಮನೀಷಾ (57ಕೆ.ಜಿ), ಸ್ವೀಟಿ (81 ಕೆ.ಜಿ), ಎಸ್‌ಎಸ್‌ಸಿಬಿಯ ಸಾಕ್ಷಿ (52ಕೆ.ಜಿ), ಮಧ್ಯಪ್ರದೇಶದ ಮಂಜು ಬೆಂಬೊರಿಯಾ (66 ಕೆ.ಜಿ) ಕೂಡ ಚಿನ್ನದ ಸಾಧನೆ ಮಾಡಿದರು. ಟೂರ್ನಿಯ 12 ವಿಭಾಗಗಳಲ್ಲಿ 302 ಬಾಕ್ಸಿಂಗ್ ಪಟುಗಳು ಸ್ಪರ್ಧಿಸಿದ್ದರು. ಇವರ ಈ ಸಾಧನೆ ಮುಂದಿನ ವಿಶ್ವ ಮಟ್ಟದ ಸ್ಪರ್ಧೆಗಳಲ್ಲಿ ಭಾರತ ಮತ್ತಷ್ಟು ಪದಕ ಗೆಲ್ಲುವ ಭರವಸೆ ಮೂಡಿಸಿದೆ.
ಇದನ್ನೂ ಓದಿ | Indian Cricket Team | ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಸಂಜುಗೆ ಚಾನ್ಸ್ ಎಂದು ಭವಿಷ್ಯ ನುಡಿದ ಜಾಫರ್