ಮುಂಬಯಿ : ಟಿ೨೦ ವಿಶ್ವ ಕಪ್‌ಗೆ ಟೀಮ್ ಇಂಡಿಯಾ (Team India) ಪ್ರಕಟಗೊಳ್ಳುತ್ತಿದ್ದಂತೆ ಬಾಯ್ಕಾಟ್ ಬಿಸಿಸಿಐ ಎಂಬ ಅಭಿಯಾನವೊಂದು ಆರಂಭಗೊಂಡಿದೆ. ಬಿಸಿಸಿಐ ಪ್ರತಿಭಾವಂತರಿಗೆ ಅವಕಾಶ ಕೊಡುತ್ತಿಲ್ಲ. ತಮಗೆ ಬೇಕಾದವರಿಗೆ ಮಣೆ ಹಾಕುತ್ತಿದ್ದಾರೆ ಎಂಬುದೇ ಈ ಅಭಿಮಾನಿಗಳ ಬೇಸರದ ಸಂಗತಿ. ಅದರಲ್ಲೂ ವಿಕೆಟ್ ಕೀಪರ್ ಸಂಜು ಸ್ಯಾಮ್ಸನ್ ಅವರಿಗೆ ತಂಡದಲ್ಲಿ ಅವಕಾಶ ಕೊಟ್ಟಿಲ್ಲ ಎಂಬುದಾಗಿ ಅವರ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
ಸೋಮವಾರ ಸಂಜೆ ಬಿಸಿಸಿಐ ಹಿರಿಯರ ತಂಡದ ಆಯ್ಕೆ ಸಮಿತಿ ಆಸ್ಟ್ರೇಲಿಯಾದಲ್ಲಿ ಮುಂದಿನ ತಿಂಗಳು ಆರಂಭವಾಗುವ ಟಿ೨೦ ವಿಶ್ವ ಕಪ್‌ಗೆ ತಂಡವನ್ನು ಪ್ರಕಟಿಸಿದೆ. ಈ ತಂಡ ಸಮತೋಲಿತವಾಗಿರುವ ಹೊರತಾಗಿಯೂ ಇತ್ತೀಚಿನ ದಿನಗಳಲ್ಲಿ ಪ್ರದರ್ಶನ ವೈಫಲ್ಯ ಎದುರಿಸುತ್ತಿರುವ ಕೆ.ಎಲ್ ರಾಹುಲ್ ಹಾಗೂ ರಿಷಭ್ ಪಂತ್‌ಗೆ ಅವಕಾಶ ನೀಡಲಾಗಿದೆ ಎಂದು ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.
ಕೆ.ಎಲ್ ರಾಹುಲ್ ಜಿಂಬಾಬ್ವೆ ಪ್ರವಾಸದ ವೇಳೆ ಭಾರತ ತಂಡದ ನಾಯಕರಾಗಿದ್ದರು. ಮೂರು ಪಂದ್ಯಗಳಲ್ಲಿ ಅವರು ಉತ್ತಮ ಪ್ರದರ್ಶನ ತೋರಿಲ್ಲ. ಅಂತೆಯೇ ಏಷ್ಯಾ ಕಪ್ ಐದು ಪಂದ್ಯಗಳಲ್ಲಿ ಆಘ್ಘನ್ ವಿರುದ್ಧ ಅರ್ಧ ಶತಕ ಬಾರಿಸಿದ್ದು ಬಿಟ್ಟರೆ ಉಳಿದ ಪಂದ್ಯಗಳಲ್ಲಿ ಫೇಲ್ ಎಂಬುದು ನೆಟ್ಟಿಗರ ಅಭಿಪ್ರಾಯ.
ರಿಷಭ್ ಪಂತ್ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ನಿರ್ಲಕ್ಷ್ಯಕ್ಕೆ ವಿಕೆಟ್ ಒಪ್ಪಿಸುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ತಂಡಕ್ಕೆ ಅಗತ್ಯ ಸಂದರ್ಭದಲ್ಲಿ ನೆರವು ನೀಡುತ್ತಿಲ್ಲ. ಸಂಜು ಸ್ಯಾಮ್ಸನ್ ಜವಾಬ್ದಾರಿಯುತವಾಗಿ ಬ್ಯಾಟ್ ಮಾಡಬಲ್ಲರು. ಆದರೆ, ಬಿಸಿಸಿಐ ಅವರಿಗೆ ಮಣೆ ಹಾಕುತ್ತಿಲ್ಲ ಎಂಬುದಾಗಿ ನೆಟ್ಟಿಗರು ದೂರಿದ್ದಾರೆ.
ಇದನ್ನೂ ಓದಿ | Team India | ಬೌಲಿಂಗ್‌ಗೆ ಬಲ, ಹಿರಿತನಕ್ಕೆ ಬೆಲೆ: ಏನದು ವಿಶ್ವ ಕಪ್ ಟೀಮ್ ಆಯ್ಕೆ ಹಿಂದಿನ ತಂತ್ರಗಾರಿಕೆ?