Site icon Vistara News

Boycott Maldives: ಮರವಂತೆ ಬೀಚ್ ಫೋಟೊ ಹಂಚಿಕೊಂಡು ಮಾಲ್ಡೀವ್ಸ್‌ಗೆ ತಿರುಗೇಟು ನೀಡಿದ ವೀರೇಂದ್ರ ಸೆಹವಾಗ್

virender sehwag

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಬೀಚ್‌ಗಳಲ್ಲಿ ತಿರುಗಾಡಿದ ಫೋಟೊಗಳನ್ನು ಹಂಚಿಕೊಂಡಿರುವುದಕ್ಕೆ ಮಾಲ್ಡೀವ್ಸ್‌ ಅಸಮಾಧಾನ ವ್ಯಕ್ತಪಡಿಸಿತ್ತು. ಮಾಲ್ಡೀವ್ಸ್‌ ಸಚಿವವರು ಸೇರಿ ಹಲವರು ಭಾರತ ಹಾಗೂ ನರೇಂದ್ರ ಮೋದಿ ವಿರುದ್ಧ ಪೋಸ್ಟ್‌ ಹಂಚಿಕೊಂಡಿದ್ದರು. ಇಂತಹ ಉದ್ಧಟತನಕ್ಕೆ ಪ್ರತಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌(Boycott Maldives) ಎಂಬ ಅಭಿಯಾನ ಶುರುವಾಗಿದೆ. ಈ ಅಭಿಯಾನಕ್ಕೆ ಈಗಾಗಲೇ ಹಲವು ಕ್ರಿಕೆಟಿಗರು, ಸಿನೆಮಾ ನಟ-ನಟಿಯರು ಸೇರಿ ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್‌ಗಳು ಕೈಜೋಡಿಸಿದ್ದಾರೆ.

ಟೀಮ್​ ಇಂಡಿಯಾದ ಮಾಜಿ ಡ್ಯಾಶಿಂಗ್​ ಓಪನರ್​ ವೀರೇಂದ್ರ ಸೆಹವಾಗ್ ಕೂಡ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ.​ ಅವರು ತಮ್ಮ ಸ್ಫೋಟಕ ಬ್ಯಾಟಿಂಗ್​ ಶೈಲಿಯಲ್ಲೇ ಪದಗಳನ್ನು ಬರೆದು ಭಾರತವನ್ನು ಕೆಣಕಿದ ಮಾಲ್ಡೀವ್ಸ್‌ ತಕ್ಕ ಉತ್ತರ ನೀಡಿದ್ದಾರೆ. ತಮ್ಮ ಎಕ್ಸ್​ ಖಾತೆಯಲ್ಲಿ ಉಡುಪಿಯ ಮರವಂತೆ ಬೀಚ್, ಪಾಂಡಿಚೇರಿಯ ಪ್ಯಾರಡೈಸ್ ಬೀಚ್, ಅಂಡಮಾನ್ ನಿಕೋಬಾರ್‌ನ ನೈಲ್ ಹಾಗೂ ಹ್ಯಾವ್ಲಾಕ್ ಬೀಚ್ ಫೋಟೋಗಳನ್ನು ಹಂಚಿಕೊಂಡು ಟಕ್ಕರ್​ ನೀಡಿದ್ದಾರೆ.

“ಭಾರತದಲ್ಲಿ ಹಲವರು ಅನ್ವೇಷಿಸಿದ ಸ್ಥಳಗಳಿವೆ. ಈ ತಾಣಗಳಿಗೆ ಮೂಲಸೌಕರ್ಯ ಒದಗಿಸಿದರೆ ಮಾಲ್ಡೀವ್ಸ್‌ ಲೆಕ್ಕಕ್ಕೆ ಇಲ್ಲ. ಪರಿಸ್ಥಿತಿಯನ್ನು ಅವಕಾಶವಾಗಿ ಪರಿವರ್ತಿಸುವುದು ಭಾರತಕ್ಕೆ ತಿಳಿದಿದೆ. ನಮ್ಮ ಸುಂದರ ಪ್ರವಾಸಿ ತಾಣಗಳಿಗೆ ಮೂಲಭೂತ ಸೌಕರ್ಯ ನೀಡಿ ಆರ್ಥಿಕತೆಯ ವೇಗ ಹೆಚ್ಚಿಸಬೇಕಿದೆ” ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ Boycott Maldives: ಮಾಲ್ಡೀವ್ಸ್ ಜತೆ ವ್ಯಾಪಾರ ಬೇಡ! ಭಾರತೀಯ ವ್ಯಾಪಾರಿಗಳಿಗೆ ಸಿಎಐಟಿ ಫರ್ಮಾನು

ಮಾಲ್ಡೀವ್ಸ್‌ ಆರೋಪಗಳೇನು?


“ಭಾರತವು ಸುಖಾಸುಮ್ಮನೆ ಮಾಲ್ಡೀವ್ಸ್‌ ಪ್ರವಾಸೋದ್ಯಮವನ್ನು ಟಾರ್ಗೆಟ್​ ಮಾಡುತ್ತಿದೆ. ಬೀಚ್‌ ಪ್ರವಾಸೋದ್ಯಮದಲ್ಲಿ ಭಾರತವು ಮಾಲ್ಡೀವ್ಸ್‌ಗೆ ಸವಾಲೊಡ್ಡಬೇಕು ಎಂದರೆ ತುಂಬ ಸವಾಲುಗಳನ್ನು ಎದುರಿಸಬೇಕಾಗುತ್ತದೆ” ಎಂದು ಮಾಲ್ಡೀವ್ಸ್‌ ಸಚಿವ ಅಬ್ದುಲ್ಲಾ ಮಹ್ಜೂಮ್‌ ಮಾಜಿದ್ ಪೋಸ್ಟ್‌ ಮಾಡಿದ್ದರು. ಮತ್ತೊಬ್ಬ ಸಹಾಯಕ ಸಚಿವೆ ಮರಿಯಮ್‌ ಶಿವುನಾ, “ಇಸ್ರೇಲ್‌ ಕೈಗೊಂಬೆಯಾಗಿರುವ ನರೇಂದ್ರ ಮೋದಿ ಅವರು ಲೈಫ್‌ ಜಾಕೆಟ್‌ ಧರಿಸಿ ಜಿಗಿಯುತ್ತಾರೆ” ಎಂದು ಉದ್ಧಟತನದ ಪೋಸ್ಟ್‌ ಮಾಡಿದ್ದರು. ಇದು ಭಾರತೀಯರ ಪಿತ್ತ ನೆತ್ತಿಗೇರುವಂತೆ ಮಾಡಿತ್ತು.

ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ

ಭಾರತ ಹಾಗೂ ನರೇಂದ್ರ ಮೋದಿ ವಿರುದ್ಧ ಮಾಲ್ಡೀವ್ಸ್‌ ಸಚಿವರು ಪೋಸ್ಟ್‌ ಮಾಡುತ್ತಲೇ ಜಾಲತಾಣಗಳಲ್ಲಿ ಬಾಯ್ಕಾಟ್‌ ಮಾಲ್ಡೀವ್ಸ್‌ ಅಭಿಯಾನ ಶುರುವಾಗಿತ್ತು. ಅಲ್ಲದೆ ಮಾಲ್ಡಿವ್ಸ್​ಗೆ ಪ್ರವಾಸ ಮಾಡಲು ಬುಕ್ಕಿಂಗ್​ ಮಾಡಿದ್ದ ಅದೆಷ್ಟೋ ಭಾರತೀಯರು ತಮ್ಮ ಬುಕ್ಕಿಂಗ್​ ಹಿಂಪಡೆದಿದ್ದಾರೆ. ಲಕ್ಷದ್ವೀಪದಲ್ಲಿ ನಿರ್ಲವಣೀಕರಣ(ನೀರಿನಿಂದ ಉಪ್ಪನ್ನು ಬೇರ್ಪಡಿಸುವ ಪ್ರಕ್ರಿಯೆ – Desalination) ಕಾರ್ಯವನ್ನು ಆರಂಭಿಸುವುದಾಗಿ ಇಸ್ರೇಲ್ (Israel) ಸೋಮವಾರ ಘೋಷಿಸಿದೆ. ಒಂದೊಮ್ಮೆ, ಈ ಕಾರ್ಯಕ್ರಮವು ಯಶಸ್ವಿಯಾದರೆ, ಭಾರತದ ಲಕ್ಷದ್ವೀಪ ಸಮೂಹದ ಪ್ರವಾಸೋದ್ಯಮಕ್ಕೆ (Lakshadweep Tourism) ಹೆಚ್ಚಿನ ಬಲ ಬರಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

Exit mobile version