ನವದೆಹಲಿ: ಅಪ್ರಾಪ್ತ ವಯಸ್ಸಿನ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕಳ ನೀಡಿದ ಆರೋಪ(Sexual harassment case) ಎದುರಿಸುತ್ತಿರುವ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಒಕ್ಕೂಟದ(Wrestling Federation of India) ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್ ಶರಣ್ ಸಿಂಗ್(Brij Bhushan Sharan Singh) ಅವರಿಗೆ ಜೈಲು ಶಿಕ್ಷೆಯಾಗುವ ಸಾಧ್ಯತೆಯೊಂದು ಕಂಡುಬಂದಿದೆ. ಲೈಂಗಿಕ ಕಿರುಕುಳ ಆರೋಪಗಳನ್ನು ಸಾಬೀತುಪಡಿಸಲು ಸಾಕಷ್ಟು ಸಾಕ್ಷ್ಯಾಧಾರಗಳಿದ್ದು, ಅವರನ್ನು ವಿಚಾರಣೆ ನಡೆಸಬೇಕು ಎಂದು ದೆಹಲಿ ಪೊಲೀಸರು(Delhi police) ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಪೊಲೀಸರ ಈ ಹೇಳಿಕೆಯಿಂದ ಬ್ರಿಜ್‌ಭೂಷಣ್‌ಗೆ ಹಿನ್ನಡೆಯಾಗುವ ಸಾಧ್ಯತೆಯೊಂದು ದಟ್ಟವಾಗಿದೆ.
ಉಲ್ಟಾ ಹೊಡೆದ ಪೊಲೀಸರು
ಜೂನ್ 15ರಂದು ದೆಹಲಿ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಪಟಿಯಾಲ ನ್ಯಾಯಾಲಯಕ್ಕೆ ಬ್ರಿಜ್‌ಭೂಷಣ್ ಶರಣ್ ಸಿಂಗ್(BJP MP Brij Bhushan Sharan Singh) ವಿರುದ್ಧ 500 ಪುಟಗಳ ಚಾರ್ಜ್‌ಶೀಟ್(Chargesheet) ಸಲ್ಲಿಸಿ ಅವರ ಮೇಲೆ ದಾಖಲಾದ ಪೋಕ್ಸೊ(POCSO) ಕೇಸನ್ನು ರದ್ದುಗೊಳಿಸುವಂತೆ ಕೋಟ್ಗೆ ಶಿಫಾರಸು ಮಾಡಿದ್ದರು. ಮತ್ತು ತನಿಖೆಯಲ್ಲಿ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಆದರೆ ಇದೀಗ ದೆಹಲಿ ಪೊಲೀಸರು ಉಲ್ಟಾ ಹೊಡೆದಿದ್ದಾರೆ.
ದೆಹಲಿ ರೂಸೋ ಅವಿನ್ಯೂ ಕೋರ್ಟ್‌ನಿಂದ ಮಧ್ಯಾಂತರ ಜಾಮೀನು ಪಡೆದಿರುವ ಬ್ರಿಜ್ ಭೂಷಣ್ ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದ ವಿಚಾರಣೆಯಲ್ಲಿ ಪಾಲ್ಗೊಂಡ ದಿಲ್ಲಿ ಪೊಲೀಸರು ಮಹತ್ವದ ಹೇಳಿಕೆಯೊಂದನ್ನು ನೀಡಿದ್ದು, ಬ್ರಿಜ್‌ಭೂಷಣ್ ಸಿಂಗ್ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಸಾಬೀತುಪಡಿಸಲು ನಮ್ಮ ಬಳಿ ಸಾಕಷ್ಟು ಸಾಕ್ಷ್ಯಾಧಾರಗಳು ಲಭ್ಯವಿವೆ ಎಂದು ಕೋರ್ಟ್‌ಗೆ ತಿಳಿಸಿದ್ದಾರೆ. ಇನ್ನೇನು ಕೇಸ್ನಿಂದ ನಿರಾಳರಾಗುವ ಯೋಚನೆಯಲ್ಲಿದ್ದ ಬ್ರಿಜ್‌ಭೂಷಣ್‌ಗೆ ಪೊಲೀಸರ ಈ ಹೇಳಿಕೆ ಉರುಳಾಗುವ ಸಾಧ್ಯತೆಯೊಂದು ದಟ್ಟವಾಗಿದೆ. ಮುಂದಿನ ವಿಚಾರಣೆ ಆಗಸ್ಟ್ 19ರಂದು ನಡೆಯಲಿದ್ದು ಕೇಸ್ ಕುರಿತಾದ ಸಂಪೂರ್ಣ ಚಿತ್ರಣವೊಂದು ಲಭ್ಯವಾಗುವ ಸಾಧ್ಯತೆ ಇದೆ.
ಕುಸ್ತಿಪಟುಗಳಲ್ಲಿ ಸಂತಸ
ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಕೋರ್ಟ್ನಲ್ಲಿ ಪೊಲೀಸರು ನೀಡಿದ ಈ ಹೇಳಿಕೆಯಿಂದ ಪ್ರತಿಭಟನೆ ನಡೆಸಿದ್ದ ಕುಸ್ತಿಪಟುಗಳು ಸಂತಸ ವ್ಯಕ್ತಪಡಿಸಿದ್ದಾರೆ. ಎಷ್ಟ್ರೇ ತಡವಾದರೂ ಸತ್ಯಕ್ಕೆ ಗೆಲುವು ಸಿಕ್ಕೇ ಸಿಗುತ್ತದೆ ಎಂದು ಹೇಳುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ Wrestlers Protest : ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಕೇಸಲ್ಲಿ ಬ್ರಿಜ್‌ಭೂಷಣ್‌ಗೆ ರಿಲೀಫ್
ಹಲವು ಸೆಕ್ಷನ್ಗಳಡಿ ಚಾರ್ಜ್‌ಶೀಟ್
ಬ್ರಿಜ್ ಭೂಷಣ್ ಹಾಗೂ ತೋಮರ್ ವಿರುದ್ಧ ವಿನೇಶ್ ಫೋಗಾಟ್, ಸಾಕ್ಷಿ ಮಲಿಕ್ ಸೇರಿದಂತೆ ಕೆಲವು ಕುಸ್ತಿಪಟುಗಳು ದೂರು ನೀಡಿದ್ದರು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಜೂನ್ 15ರಂದು ಬ್ರಿಜ್ ಭೂಷಣ್ ಅವರ ವಿರುದ್ಧ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಿದರು.
ಬಿಜೆಪಿ ಸಂಸದ ಬ್ರಿಜ್‌ಭೂಷಣ್ ವಿರುದ್ಧ ಎರಡು ಎಫ್ಐಆರ್ಗಳನ್ನು ದಾಖಲಿಸಲಾಗಿತ್ತು. ಅದರಲ್ಲೊಂದು ಅಪ್ರಾಪ್ತ ಕುಸ್ತಿಪಟುವಿನ ಪ್ರಕರಣದಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಾಖಲಾದ ದೂರು ಆಗಿತ್ತು. ಬಳಿಕ ದೂರುದಾರರು ತಮ್ಮ ಹೇಳಿಕೆಗಳನ್ನು ಬದಲಾಯಿಸಿದ್ದರು. ಈ ಪ್ರಕರಣ ವಾಪಸ್ ಪಡೆಯಲಾಗಿದೆ. ಎರಡನೇ ಪ್ರಕರಣ ಉಳಿದ ಮಹಿಳಾ ಕುಸ್ತಿಪಟುಗಳು ನೀಡಿದ ದೂರಾಗಿದೆ.