ನವದೆಹಲಿ: ಉನ್ನತ ಮಟ್ಟದ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಡಬ್ಲ್ಯುಎಫ್ಐ ಮುಖ್ಯಸ್ಥ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ದೆಹಲಿಯ ರೂಸ್ ಅವೆನ್ಯೂ ನ್ಯಾಯಾಲಯ ಮಂಗಳವಾರ ಎರಡು ದಿನಗಳ ಮಧ್ಯಂತರ ಜಾಮೀನು ನೀಡಿದೆ. ಪ್ರಕರಣದ ಮತ್ತೊಬ್ಬ ಆರೋಪಿ ವಿನೋದ್ ತೋಮರ್ ಅವರಿಗೂ ನ್ಯಾಯಾಲಯ ಮಧ್ಯಂತರ ಜಾಮೀನು ಕೊಟ್ಟಿದೆ. ತಲಾ 25,000 ರೂ.ಗಳ ಬಾಂಡ್ ಪಡೆದುಕೊಂಡು ಮಧ್ಯಂತರ ಜಾಮೀನು ನೀಡಲಾಗಿದೆ.
ಇಬ್ಬರು ಆರೋಪಿಗಳಿಗೆ ನಿಯಮಿತ ಜಾಮೀನಿನ ವಿಚಾರಣೆ ಜುಲೈ 20 ರಂದು ನಡೆಯಲಿದೆ. ಸಿಂಗ್ ಹಾಗೂ ಥೋಮ್ ವಿರುದ್ಧ ವಿನೇಶ್ ಫೋಗಾಟ್, ಸಾಕ್ಷಿ ಮಲಿಕ್ ಸೇರಿದಂತೆ ಕೆಲವು ಕುಸ್ತಿಪಟುಗಳು ದೂರು ನೀಡಿದ್ದರು. ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 (ಮಹಿಳೆಯ ಘನತೆಗೆ ಧಕ್ಕೆ ತರುವ ಉದ್ದೇಶದಿಂದ ಹಲ್ಲೆ ಅಥವಾ ಕ್ರಿಮಿನಲ್ ಬಲಪ್ರಯೋಗ), 354 ಎ (ಲೈಂಗಿಕ ಕಿರುಕುಳ), 354 ಡಿ (ಹಿಂಬಾಲಿಸುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಮಹಿಳಾ ಕುಸ್ತಿಪಟುಗಳು ಸಲ್ಲಿಸಿದ ದೂರಿನ ಮೇರೆಗೆ ದೆಹಲಿ ಪೊಲೀಸರು ಜೂನ್ 15ರಂದು ಸಿಂಗ್ ಮತ್ತು ತೋಮರ್ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ನೀಡಿದ್ದರು.
ಬಿಜೆಪಿ ಸಂಸದ ಬ್ರಿಜ್ಭೂಷಣ್ ವಿರುದ್ಧ ಎರಡು ಎಫ್ಐಆರ್ಗಳನ್ನು ದಾಖಲಿಸಲಾಗಿತ್ತು. ಅದರಲ್ಲೊಂದು ಅಪ್ರಾಪ್ತ ಕುಸ್ತಿಪಟುವಿನ ಪ್ರಕರಣದಲ್ಲಿ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿ ದಾಖಲಾದ ದೂರು ಆಗಿತ್ತು. ಬಳಿಕ ದೂರುದಾರರು ತಮ್ಮ ಹೇಳಿಕೆಗಳನ್ನು ಬದಲಾಯಿಸಿದ್ದರು. ಈ ಪ್ರಕರಣ ವಾಪಸ್ ಪಡೆಯಲಾಗಿದೆ. ಎರಡನೇ ಪ್ರಕರಣ ಉಳಿದ ಮಹಿಳಾ ಕುಸ್ತಿಪಟುಗಳು ನೀಡಿದ ದೂರಾಗಿದೆ.
ಇದನ್ನೂ ಓದಿ : Wrestlers Protest: ಬ್ರಿಜ್ ಭೂಷಣ್ ವಿಚಾರಣೆ ನಡೆಸಿದ ದೆಹಲಿ ಪೊಲೀಸರು
ಸಿಂಗ್ ವಿರುದ್ಧ ಒಟ್ಟು 21 ಸಾಕ್ಷಿಗಳು ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ. ಅವರಲ್ಲಿ ಆರು ಮಂದಿ ಸಿಆರ್ಪಿಸಿ 164ರ ಅಡಿಯಲ್ಲಿ ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ.
ಸಾಕ್ಷಿ ಮಲಿಕ್, ಬಜರಂಗ್ ಪುನಿಯಾ ಮತ್ತು ವಿನೇಶ್ ಫೋಗಟ್ ಸೇರಿದಂತೆ ಭಾರತದ ಉನ್ನತ ಕುಸ್ತಿಪಟುಗಳು ದೆಹಲಿಯ ಜಂತರ್ ಮಂತರ್ನಲ್ಲಿ ಸಿಂಗ್ ಅವರನ್ನು ಭಾರತೀಯ ಕುಸ್ತಿ ಒಕ್ಕೂಟದ ಉನ್ನತ ಸ್ಥಾನದಿಂದ ತೆಗೆಯುವಂತೆ ಒತ್ತಾಯಿಸಿ 38 ದಿನಗಳ ಕಾಲ ಪ್ರತಿಭಟನೆ ನಡೆಸಿದ್ದರು. ಸಿಂಗ್ ವಿರುದ್ಧ ಜೂನ್ 15ರೊಳಗೆ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಭರವಸೆ ನೀಡಿದ ನಂತರ ಕುಸ್ತಿಪಟುಗಳು ತಮ್ಮ ಪ್ರತಿಭಟನೆಯನ್ನು ಸ್ಥಗಿತಗೊಳಿಸಿದರು.